

ಮುಂಬೈ: ಕಳೆದ ಎರಡು ದಿನಗಳ ಹಿಂದೆ ಮಾಡೆಲ್ ಮತ್ತು ಬಾಲಿವುಡ್ ನಟಿ ಪೂನಂ ಪಾಂಡೆ ಸತ್ತಿರುವ ವಿಚಾರ ಸೋಷಿಯಲ್ ಮೀಡಿಯಾ ಮುಖಾಂತರ ಜಾಗತಿಕವಾಗಿ ಹರಿದಾಡಿದ್ದು, ಇದರಿಂದ ತೀವ್ರ ಆಘಾತಕ್ಕೊಳಗಾದ ಅಭಿಮಾನಿಗಳು ಮತ್ತು ಚಿತ್ರರಂಗದವರು, ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಕಂಬನಿ ಮಿಡಿದರು. ಇದೆಲ್ಲದರ ಮಧ್ಯೆ ಅಸಲಿಗೆ ಇದು ನಿಜವೇ ಎಂಬುದನ್ನು ತಿಳಿಯಲು ಹಲವರು ಪ್ರಯತ್ನಿಸಿದಾಗ, ಆಕೆಯ ಮ್ಯಾನೇಜರ್ ಕೂಡ ಅವರು ಮೃತಪಟ್ಟಿರುವುದು ಸತ್ಯ ಎಂದೇ ಹೇಳಿದ ಬಳಿಕ ಇದು ಅಧಿಕೃತ ಎಂದು ದೃಢವಾಯಿತು. ಆದರೆ ಅದಾದ ಬಳಿಕ ನಡೆದಿದ್ದೇ ಅಚ್ಚರಿ!
ದೇಶವ್ಯಾಪಿ ನಟಿ ಗರ್ಭಕಂಠದ ಕ್ಯಾನ್ಸರ್ಗೆ ತುತ್ತಾಗಿದ್ದು ಅತೀವ ದುಃಖ ತಂದಿದೆ ಎಂದು ಕಂಬನಿ ಮಿಡಿದರು. ಈ ಕುರಿತು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದರು. ಆದ್ರೆ, ಇದಾದ ಒಂದು ದಿನದ ಬಳಿಕ ಅಚ್ಚರಿ ಎಂಬಂತೆ ಸ್ವತಃ ತನ್ನ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡ ಪೂನಂ, ಅಸಲಿಗೆ ತಾನು ಸತ್ತಿಲ್ಲ ಇನ್ನು ಜೀವಂತವಾಗಿದ್ದೇನೆ ಎಂದು ದೃಢಪಡಿಸಿದರು.
ಸ್ವತಃ ಪೂನಂ ಪಾಂಡೆ ತನ್ನ ಸಾವಿನ ಸುದ್ದಿ ಸುಳ್ಳು, ಇದು ಪಬ್ಲಿಸಿಟಿ ಸ್ಟಂಟ್ಗಾಗಿ ಮಾಡಿದ್ದು ಎಂದು ಹೇಳಿದ ಕೂಡಲೇ ನೆಟ್ಟಿಗರು ತೀವ್ರ ಅಕ್ರೋಶ ವ್ಯಕ್ತಪಡಿಸಿದರು. ಇಂತಹ ಮಾತು ಹೇಳಲು ಹೇಗೆ ಮನಸು ಬರುತ್ತೆ? ಯಾಕೆ ಈ ರೀತಿಯಲ್ಲಿ ಜನರನ್ನು ಮೂರ್ಖರನ್ನಾಗಿ ಮಾಡುತ್ತೀರಿ? ಇದು ಅಕ್ಷಮ್ಯ, ನಿಮ್ಮಂತವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದರು. ಇದೀಗ ಅದರಂತೆಯೇ ಪೊಲೀಸರು ನಟಿಯ ಮ್ಯಾನೇಜರ್ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪೂನಂ ಹಾಗೂ ಆಕೆಯ ಸಾವಿನ ಸುಳ್ಳು ಸುದ್ದಿ ಹಬ್ಬಿಸಿದ ಮ್ಯಾನೇಜರ್ ನಿಕಿತಾ ಶರ್ಮಾ ವಿರುದ್ಧ ವಕೀಲ ಅಲಿ ಕಾಶಿಫ್ ಎಫ್ಐಆರ್ ದಾಖಲಿಸಿದ್ದಾರೆ. ಸದ್ಯ ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).