ಎಲ್ಲಂದರಲ್ಲಿ ಧಮ್ ಎಳೆದರೆ ಬೀಳಲಿದೆ ದಂಡ;ಒಂದೇ ದಿನ 2300 ಕೇಸ್

cigarette
Published on

ಬೆಂಗಳೂರು: ಕೋಟ್ಪಾ ಕಾಯ್ದೆ ಉಲ್ಲಂಸಿರುತ್ತಿರುವ ಪಬ್, ಡಿಸ್ಕೋಥೆಕ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳ ಮೇಲೆ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ನಗರದಲ್ಲಿ ಸೆ.16ರಂದು 633 ಸ್ಥಳಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, 131 ಸ್ಥಳಗಳಲ್ಲಿ ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ಇವರ ವಿರುದ್ಧ ಜೆಜೆ ಆಕ್ಟ್ ಉಲ್ಲಂಘನೆ, ಎರಡು ಅಬಕಾರಿ ಕಾಯ್ದೆ ಉಲ್ಲಂಘನೆ, 126 ಕೋಟ್ಪಾ ಕಾಯ್ದೆ ಉಲ್ಲಂಘನೆ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲು ಮಾಡಲಾಗಿದೆ. ಇದಲ್ಲದೆ, ಕೋಟ್ಪಾ ಕಾಯ್ದೆಯಡಿ 2,300 ಲಘು ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಬ್, ಡಿಸ್ಕೋಥೆಕ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಕೋಟ್ಪಾ ಕಾಯ್ದೆ ಪ್ರಕಾರ ಪ್ರತ್ಯೇಕ ಧೂಮಪಾನ ವಲಯ ನಿರ್ಮಾಣ ಮಾಡಬೇಕು. ಆದರೆ, ಕೋಟ್ಪಾ ಕಾಯ್ದೆ ಉಲ್ಲಂಘನೆ ಮಾಡಿ ಅವಧಿ ಮೀರಿ ವ್ಯಾಪಾರ ವಹಿವಾಟು ನಡೆಸುವುದು, 18 ವರ್ಷ ಒಳಗಿನವರಿಗೆ ತಂಬಾಕು, ಸಿಗರೇಟ್, ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದವು.

ಈ ಮೇರೆಗೆ 8 ವಿಭಾಗಗಳಲ್ಲಿ ಡಿಸಿಪಿ ಮತ್ತು ಸಿಸಿಬಿ ಪೊಲೀಸರು ಪ್ರತ್ಯೇಕ ತಂಡಗಳಾಗಿ ಎಲ್ಲೆಡೆ ಕಾರ್ಯಾಚರಣೆ ನಡೆಸಿವೆ. ಈ ಪ್ರಕ್ರಿಯೆ ಮುಂದುವರಿಯಲಿದೆ. ಪದೇ ಪದೆ ನಿಯಮ ಉಲ್ಲಂಸುವರ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮಾಲೀಕರಿಗೆ ಸೂಚನೆ :

ಕಾನೂನು ಅಡಿಯಲ್ಲಿ ನೀಡಿರುವ ಪರವಾನಗಿಯಲ್ಲಿ ವಿಧಿಸಿರುವ ನಿಯಮ ತಪ್ಪದೆ ಪಾಲಿಸಬೇಕು. ಕೋಟ್ಪಾ ಕಾಯ್ದೆಯ ಸೆಕ್ಷನ್ 6ರ ಆದೇಶದಂತೆ 18 ವರ್ಷ ಒಳಗಿನವರಿಗೆ ತಂಬಾಕು, ಸಿಗರೇಟ್ ಮಾರಾಟ ಮಾಡಬಾರದು. ಅಬಕಾರಿ ನಿಯಮ ಅನ್ವಯ 21 ವರ್ಷದ ಕೆಳಗಿನ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಬಾರದು. ಒಂದು ವೇಳೆ ಮಾರಾಟ ಮಾಡಿದರೇ ಜೆಜೆ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಧೂಮಪಾನ ಮತ್ತು ಮದ್ಯಪಾನ ನಿಷೇಧಿತದ ಸ್ಥಳಗಳಲ್ಲಿ ನಿಯಮ ಉಲ್ಲಂಸುವ ಸಾರ್ವಜನಿಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.

- ಬಿ. ದಯಾನಂದ್, ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net