

ನವದೆಹಲಿ: ಸಾಮಾನ್ಯವಾಗಿ ಕಷ್ಟದಲ್ಲಿರುವವರನ್ನು ಸಾಹಸಿಗಳೇ ರಕ್ಷಿಸುತ್ತಾರೆ. ಇತ್ತೀಚೆಗೆ ಕ್ವೀನ್ಸ್ಲ್ಯಾಂಡ್ನ ಸಮುದ್ರದಲ್ಲಿ ಬಲೆಗೆ ಸಿಲುಕಿದ್ದ ಮರಿ ತಿಮಿಂಗಿಲವನ್ನು ಜಾಂಗೊ ಎಂಬ ಸಾಹಸಿಗರೊಬ್ಬರು ರಕ್ಷಿಸಿದ್ದರು. ಈ ಸಾಹಸಕ್ಕೆ ಈಗ ದಂಡ ತೆರುವ ಪ್ರಸಂಗ ಎದುರಾಗಿದೆ.
ಏಕೆಂದರೆ ಕ್ವೀನ್ಸ್ಲ್ಯಾಂಡ್ ಕಾನೂನು ಪ್ರಕಾರ ತಿಮಿಂಗಿಲವನ್ನು ಸಮೀಪಿಸುವುದು ಅಪರಾಧ. ಮರಿ ತಿಮಿಂಗಿಲವೊಂದು ಬಲೆಯಲ್ಲಿ ಸಿಲುಕಿರುವುದನ್ನು ಬೋಟ್ನಲ್ಲಿದ್ದ ಜಾಂಗೊ ಗಮನಿಸಿದ್ದರು. ಅದನ್ನು ರಕ್ಷಿಸುವುದಕ್ಕಾಗಿ ಸಮುದ್ರಕ್ಕೆ ಜಿಗಿದ ಅವರು ನಿಧಾನವಾಗಿ ಬಲೆಯಿಂದ ಬಿಡಿಸಿ ಕಾಪಾಡಿದರು.
ಈ ಇಡೀ ಕಾರ್ಯಾಚರಣೆಯೂ ಡ್ರೋಣ್ ಕ್ಯಾಮರಾದಲ್ಲಿ ದಾಖಲಾಗಿತ್ತು. ಹೀಗಾಗಿ ಈಗ ಜಾಂಗೊ ಕಾನೂನು ಉಲ್ಲಂಘನೆಗಾಗಿ 46 ಸಾವಿರ ಡಾಲರ್ ದಂಡ ತೆರಬೇಕಾಗಬಹುದು ಎಂಬ ಚರ್ಚೆ ನಡೆಯುತಿದೆ. ಈ ಬಗ್ಗೆ ಸಂಬಂಧಪಟ್ಟವರಿಂದ ಪರಿಶೀಲನೆಯೂ ಜಾರಿಯಲ್ಲಿದೆ. ಈ ಮಧ್ಯೆ ಜಾಂಗೊ ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಾತುಗಳು ವ್ಯಕ್ತವಾಗಿವೆ.