ದೊಡ್ಡ ಸವಾಲುಗಳಿಗೆ ಪರಿಹಾರ ಹುಡುಕಿ: ಡಾ. ಬಿ.ಎನ್.ಸುರೇಶ್

Kuvempu vv convocation speech from dr.b.n.suresh
ಕುವೆಂಪು ವಿವಿ ಘಟಿಕೋತ್ಸವದಲ್ಲಿ ಬೆಂಗಳೂರಿನ ಇಸ್ರೋ ವಿಶಿಷ್ಟ ಪ್ರಾಧ್ಯಾಪಕ, ಪದ್ಮಭೂಷಣ ಪುರಸ್ಕೃತ ಡಾ. ಬಿ.ಎನ್.ಸುರೇಶ್ ಮಾತನಾಡಿದರು.
Published on

ಶಿವಮೊಗ್ಗ: ಅಸಾಧಾರಣ ಬೆಳವಣಿಗೆಗಳನ್ನು ಪ್ರಶಂಸಿಸುವಾಗ ನಾವು ಗತ ವೈಭವಗಳಲ್ಲಿ ಮೈಮರೆಯಬಾರದು. ನಾವೀಗ ನಮ್ಮ ಇತಿಹಾಸದ ಪರ್ವ ಕಾಲದಲ್ಲಿದ್ದೇವೆ. ಇದು ಸಂದಿಗ್ಧ ಸಮಯವಾಗಿದ್ದು ನಮ್ಮ ಮುಂದೆ ದೊಡ್ಡ ಸವಾಲುಗಳಿವೆ ಮತ್ತು ಅವುಗಳಿಗೆ ತುರ್ತಾಗಿ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಇದೆ ಎಂದು ಬೆಂಗಳೂರಿನ ಇಸ್ರೋ ವಿಶಿಷ್ಟ ಪ್ರಾಧ್ಯಾಪಕ, ಪದ್ಮಭೂಷಣ ಪುರಸ್ಕೃತ ಡಾ. ಬಿ.ಎನ್.ಸುರೇಶ್ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ಶನಿವಾರ ಕುವೆಂಪು ವಿವಿಯ 33ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ಭವಿಷ್ಯದಲ್ಲಿ ನಾವು ಗಳಿಸುವುದು ತುಂಬ ಇದೆ. ವಿಶ್ವದ ಅನೇಕ ಭಾಗಗಳು ಕಲಹ, ಸಂಘರ್ಷ ಮತ್ತು ಪ್ರಕ್ಷುಬ್ಧತೆಯಲ್ಲಿವೆ. ಹಾಗಾಗಿ ಪದವೀಧರರು ಬದಲಾವಣೆಯ ಹರಿಕಾರರಾಗಬೇಕು. ನಿಮ್ಮ ವಿವೇಕ ತೋರುವ ದಾರಿಯಲ್ಲಿ ಆರೋಗ್ಯಕರ ಮೌಲ್ಯಗಳು ಮತ್ತು ಸದ್ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಸವಾಲುಗಳನ್ನು ಎದುರಿಸಲು ಸಜ್ಜುಗೊಳ್ಳಬೇಕಿದೆ ಎಂದರು.
ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ರೂಪಾಂತರವು ಶಿಕ್ಷಣ ಮತ್ತು ಕೌಶಲದೊಂದಿಗೆ ಅಂತರ್ಗತ ಸಂಬಂಧ ಹೊಂದಿದ್ದು ಸುಶಿಕ್ಷಿತ ದೇಶ ಮಾತ್ರ ಅಭಿವೃದ್ಧಿ ಹೊಂದಬಲ್ಲದು. ಆವಿಷ್ಕಾರಿ ಮನೋಭಾವ ರೂಪಿಸುವ ಉನ್ನತ ಶಿಕ್ಷಣ ಮಾತ್ರವೇ ಸಮಾಜ ಮತ್ತು ಸಮುದಾಯದ ಒಳಿತಿಗಾಗಿ ಬಳಸುವ ಸಾಧನವಾಗಲಿದೆ ಎಂದು ಹೇಳಿದರು.
ಪದವಿ ಪಡೆದವರು ಸುಸ್ಥಿರ ಅಭಿವೃದ್ಧಿ, ನೀರು, ತ್ಯಾಜ್ಯ ವಿಲೇವಾರಿ, ಪರಿಸರ ಸಂರಕ್ಷಣೆ, ನವೀಕರಿಸಬಹುದಾದ ಇಂಧನ, ಹವಾಮಾನ ಬದಲಾವಣೆ ಮುಂತಾದ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸಬೇಕು. ವಿಶಿಷ್ಟ ರೀತಿಯಲ್ಲಿ ಬಹುಶಾಸ್ತ್ರೀಯ ತಂಡಗಳನ್ನು ಕಟ್ಟಿ, ನಿರ್ದಿಷ್ಟವಾಗಿ ಭಾರತದ ಹಳ್ಳಿಗಳ ಪರಿವರ್ತನೆಗೆ ಸಹಾಯ ಮಾಡುವ ಕಾರ್ಯವಿಧಾನ ರೂಪಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು. ವೃತ್ತಿಪರ ಜೀವನದ ಹೊಸ ಹಂತಕ್ಕೆ ಧುಮುಕುತ್ತಿದ್ದಂತೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗುತ್ತದೆ. ನಿರ್ಧಾರ ನಿಮ್ಮದಾದರೂ ಬದ್ಧತೆಯಿಂದ ಸಕ್ರಿಯ ಕೊಡುಗೆ ನೀಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net