28ರಿಂದ 5 ರೂಪಾಯಿಗೆ ಕುಸಿದ ಹಣಕಾಸು ಷೇರು: ಈ ಸ್ಟಾಕ್​ಗೆ ಮತ್ತೆ ಡಿಮ್ಯಾಂಡು ಏಕೆ?

stock market 2
Published on

ಮುಂಬೈ: ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲ್ಪಟ್ಟಿರುವ ಕೆಲವು ಕಂಪನಿಗಳ ಷೇರು ಬೆಲೆ ರೂ 10 ಕ್ಕಿಂತ ಕಡಿಮೆಯಿದೆ. ಆದರೆ ಇವುಗಳಲ್ಲಿ ಕೆಲವು ತಮ್ಮ ಹೂಡಿಕೆದಾರರಿಗೆ ದೊಡ್ಡ ಲಾಭ ಹಾಗೂ ಉಡುಗೊರೆಗಳನ್ನು ನೀಡುತ್ತವೆ. ಇಂತಹ ಒಂದು ಕಂಪನಿ ಆಶೀರ್ವಾದ್ ಕ್ಯಾಪಿಟಲ್ ಲಿಮಿಟೆಡ್ (Ashirwad Capital Ltd). ಈ ಕಂಪನಿಯ ಷೇರಿನ ಬೆಲೆ 5.57 ರೂ. ಇದೆ.

ಕಳೆದ ಶುಕ್ರವಾರ ಈ ಷೇರಿನ ಬೆಲೆ ಹಿಂದಿನ ಮುಕ್ತಾಯದ ರೂ 5.47 ಕ್ಕಿಂತ 1.83% ರಷ್ಟು ಏರಿಕೆಯಾಗಿದೆ. ಈ ವರ್ಷದ ಫೆಬ್ರವರಿ 1 ರಂದು ಈ ಷೇರಿನ ಬೆಲೆ 8.24 ರೂ.ಗೆ ಏರಿತ್ತು. ಇದು ಈ ಸ್ಟಾಕ್‌ನ 52 ವಾರಗಳ ಗರಿಷ್ಠ ಬೆಲೆ ಆಗಿದೆ. ಮೇ 26, 2023 ರಂದು ಈ ಷೇರಿನ ಬೆಲೆ ರೂ 3.27 ಮುಟ್ಟಿತ್ತು. ಇದು ಈ ಷೇರಿನ 52 ವಾರಗಳ ಕನಿಷ್ಠ ಬೆಲೆಯಾಗಿದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 28.57 ಹಾಗೂ ಕನಿಷ್ಠ ಬೆಲೆ ರೂ. 0.69 ಇದೆ.

ಇತ್ತೀಚೆಗೆ ಆಶೀರ್ವಾದ್ ಕ್ಯಾಪಿಟಲ್ ಲಿಮಿಟೆಡ್ ತನ್ನ ನಿರ್ದೇಶಕರ ಮಂಡಳಿಯ ಸಭೆಯ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ಗೆ ಮಾಹಿತಿ ನೀಡಿದೆ. ಏತನ್ಮಧ್ಯೆ, ಕಂಪನಿಯು ಬೋನಸ್ ಷೇರುಗಳ ಪ್ರಸ್ತಾಪವನ್ನು ಪ್ರಕಟಿಸಿದೆ.

ಆಶೀರ್ವಾದ್ ಕ್ಯಾಪಿಟಲ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯ ಸಭೆಯನ್ನು 10/05/2024 ರಂದು ನಿಗದಿಪಡಿಸಲಾಗಿದೆ. ಈ ಸಭೆಯಲ್ಲಿ, ಇತರ ವಿಷಯಗಳ ಜತೆಗೆ, ಮಾರ್ಚ್ 31ಕ್ಕೆ ಕೊನೆಗೊಳ್ಳುವ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಇದಲ್ಲದೆ, ಈಕ್ವಿಟಿ ಷೇರುಗಳ ಬೋನಸ್ ವಿತರಣೆಯನ್ನು ಘೋಷಿಸುವ ಪ್ರಸ್ತಾಪವೂ ಇದೆ ಕಂಪನಿಯು ಷೇರು ಮಾರುಕಟ್ಟೆಗೆ ತಿಳಿಸಿದೆ. ಬೋನಸ್​ ಷೇರು ನೀಡಲು ಕಂಪನಿ ಮುಂದಾಗಿರುವುದರಿಂದ ಈಗ ಈ ಸ್ಟಾಕ್​ಗೆ ಬೇಡಿಕೆ ಬರುತ್ತಿದೆ.

ನಾವು ಮಾರ್ಚ್ 2024 ರಂತೆ ಆಶೀರ್ವಾದ್ ಕ್ಯಾಪಿಟಲ್ ಲಿಮಿಟೆಡ್‌ನ ಷೇರುದಾರರ ಮಾದರಿಯನ್ನು ನೋಡಿದರೆ, ಪ್ರವರ್ತಕರು 51 ಪ್ರತಿಶತ ಪಾಲನ್ನು ಹೊಂದಿದ್ದಾರೆ. ಸಾರ್ವಜನಿಕ ಷೇರುದಾರರು ಶೇಕಡಾ 49ರಷ್ಟು ಪಾಲನ್ನು ಹೊಂದಿದ್ದಾರೆ. ಕಂಪನಿಯ ಪ್ರಮುಖ ಪ್ರವರ್ತಕರಲ್ಲಿ ಶಿಲ್ಪಾ ಪೊದ್ದಾರ್, ದಿನೇಶ್ ಪೊದ್ದಾರ್ ಸೇರಿದ್ದಾರೆ. ಇವರಿಬ್ಬರೂ ಕಂಪನಿಯ ಶೇ. 10.27 ಮತ್ತು ಶೇ. 16.40 ಷೇರುಗಳನ್ನು ಹೊಂದಿದ್ದಾರೆ.

ಆಶೀರ್ವಾದ್ ಕ್ಯಾಪಿಟಲ್ ಲಿಮಿಟೆಡ್, 1985 ರಲ್ಲಿ ಸ್ಥಾಪನೆಯಾಯಿತು, ಇದು ಬ್ಯಾಂಕೇತರ ಹಣಕಾಸು ಕಂಪನಿಯಾಗಿದ್ದು, ಪ್ರಾಥಮಿಕವಾಗಿ ಷೇರುಗಳು ಮತ್ತು ಭದ್ರತೆಗಳಲ್ಲಿ ಹೂಡಿಕೆ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದರ ವ್ಯಾಪಾರ ಚಟುವಟಿಕೆಗಳಲ್ಲಿ ಕಲ್ಲಿನ ಕೆತ್ತನೆ, ಚಿತ್ರಕಲೆ ಮತ್ತು ಆಭರಣಗಳಂತಹ ಅಲಂಕಾರಿಕ ವಸ್ತುಗಳ ತಯಾರಿಕೆಯೂ ಸೇರಿದೆ. ಹಣಕಾಸಿನ ಮಾಹಿತಿಯ ಪ್ರಕಾರ ಆಶೀರ್ವಾದ ಲಿಮಿಟೆಡ್​ ಸಾಲ ಮುಕ್ತ ಕಂಪನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net