ಸಂಪಾದಕೀಯ: ಆರ್ಥಿಕ ಚೇತರಿಕೆ ಅಗತ್ಯ

edit 4
Published on

ಕರೊನಾ ಸೋಂಕಿನ ತೀವ್ರ ಹಾವಳಿ ಆರ್ಥಿಕತೆಯ ಮೇಲೆ ದೊಡ್ಡ ಆಘಾತವನ್ನೇ ಮಾಡಿದೆ. ದಿಗ್ಬಂಧನ ಸಡಿಲಿಕೆಗೊಂಡಿದ್ದರೂ, ಬಹುತೇಕ ವಲಯಗಳು ಚೇತರಿಸಿಕೊಂಡಿಲ್ಲ. ಮೊದಲೇ ಸಂಕಷ್ಟದಲ್ಲಿದ್ದ ಬಡವರು, ಮಧ್ಯಮ ವರ್ಗದವರ ಬವಣೆ ಮತ್ತಷ್ಟು ಹೆಚ್ಚಿದೆ. ಕರ್ನಾಟಕದ ವಿವಿಧ ವಲಯಗಳ ಒಟ್ಟಾರೆ ನಷ್ಟದ ಮೊತ್ತ -ಠಿ; 40 ಸಾವಿರ ಕೋಟಿ ದಾಟಿದೆ. ಇದೇ ಸಂದರ್ಭದಲ್ಲಿ ಶೇಕಡ 30 ಉದ್ಯೋಗ ಮತ್ತು ಶೇ.70 ತೆರಿಗೆ ನಷ್ಟವಾಗಿರುವುದು ಸಮಸ್ಯೆಯ ಭೀಕರತೆಯನ್ನು ಹೆಚ್ಚಿಸಿದೆ. ಈ ನಡುವೆ ಕಳೆದೊಂದು ವಾರದಿಂದ ಕರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಪರಿಣಾಮ ಆರ್ಥಿಕ ಚಟುವಟಿಕೆಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಸೋಮವಾರದಿಂದ ರಾತ್ರಿ ಕರ್ಫ್ಯೂ ಮರು ಜಾರಿಯಾಗಿದ್ದು, ರಾತ್ರಿ 8 ಗಂಟೆಯೊಳಗೆ ವಹಿವಾಟು ಸ್ಥಗಿತಗೊಳ್ಳುತ್ತಿವೆ. ಪ್ರವಾಸೋದ್ಯಮ, ಸಿದ್ಧ ಉಡುಪು, ಉತ್ಪಾದನೆ, ಹೋಟೆಲ್, ರಿಯಲ್ ಎಸ್ಟೇಟ್, ಸಾರಿಗೆ, ಮಾಹಿತಿ-ತಂತ್ರಜ್ಞಾನ ಕ್ಷೇತ್ರಗಳಲ್ಲೇ ಕನಿಷ್ಠ -ಠಿ; 40 ಸಾವಿರ ಕೋಟಿ ನಷ್ಟವಾಗಿದ್ದು, ಈ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಜನಜೀವನವನ್ನು ಸಹಜಸ್ಥಿತಿಗೆ ತರಲೆಂದೇ ದಿಗ್ಬಂಧನವನ್ನು ಸಡಿಲಿಸಲಾಯಿತು, ಕೇಂದ್ರ, ರಾಜ್ಯ ಸರ್ಕಾರಗಳು ಹಲವು ವಲಯಗಳಿಗೆ ನೆರವನ್ನೂ ಘೋಷಿಸಿದವು. ಅವುಗಳ ಸಮರ್ಪಕ ಅನುಷ್ಠಾನವೂ ಆಗಬೇಕಿದ್ದು, ಸೌಲಭ್ಯ ಅಥವಾ ನೆರವು ಪರಿಣಾಮಕಾರಿಯಾಗಿ ತಲುಪಬೇಕಿದೆ. ಈ ಸಂದಿಗ್ಧ ಸ್ಥಿತಿಯಲ್ಲಿ ಆಯಾ ವಿಷಯ ತಜ್ಞರು ಮಹತ್ವದ ಸಲಹೆಗಳನ್ನು ನೀಡಿದ್ದು, ಸರ್ಕಾರ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕಳೆದ ಹಲವು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತವಾಗಿ ಏರಿಕೆ ಆಗುತ್ತಿದ್ದು, ಇದು ಬೆಲೆಏರಿಕೆಯ ಬಿಸಿಯನ್ನು ಹೆಚ್ಚಿಸಿದೆ. ಮುಖ್ಯವಾಗಿ, ಸಾರಿಗೆ ಮತ್ತು ಸರಕುಸಾಗಣೆ ವಲಯಗಳು ಭಾರಿ ನಷ್ಟ ಎದುರಿಸುವಂತಾಗಿದೆ.

ಆರ್ಥಿಕತೆ ಇದೇ ರೀತಿ ಇಳಿಜಾರಿನಲ್ಲಿ ಸಾಗಿದರೆ, ಉದ್ಯೋಗನಷ್ಟದ ಪ್ರಮಾಣವೂ ಹೆಚ್ಚುವ ಆತಂಕವಿದೆ. ಹಾಗಾಗಿ, ನಷ್ಟದಲ್ಲಿ ಇರುವ ವಲಯಗಳನ್ನು ಗುರುತಿಸಿ, ಅವುಗಳ ಚೇತರಿಕೆಗೆ ಮಾಗೋಪಾಯಗಳನ್ನು ಕಂಡುಕೊಂಡು ಸೂಕ್ತ ಯೋಜನೆ ಮುಖಾಂತರ ಜಾರಿಗೆ ತರುವುದು ಈಗಿನ ಅಗತ್ಯ.

ರಿಯಲ್ ಎಸ್ಟೇಟ್​ಗೆ ಪೂರಕವಾಗಿ ಸಿಮೆಂಟ್, ಸ್ಟೀಲ್ ಸಿಗುವಂತೆ ನೋಡಿಕೊಳ್ಳುವುದು, ಲಘು ಮತ್ತು ಸಣ್ಣ ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥ ಕೊರತೆಯಾಗದಂತೆ ಎಚ್ಚರ ವಹಿಸುವುದು, ಉದ್ಯಮಗಳಿಗೆ, ಕಾರ್ವಿುಕರಿಗೆ ಒಂದು ವರ್ಷದ ತನಕ ವಿಶೇಷ ಪ್ರೋತ್ಸಾಹಧನ, ಕೃಷಿ ಕೈಗಾರಿಕೆ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ, ಗುಜರಾತ್, ರಾಜಸ್ಥಾನ, ಉತ್ತರಾಖಂಡ ಮಾದರಿಯಲ್ಲಿ ವಾಹನ ಮಾಲೀಕರಿಗೆ ಆರು ತಿಂಗಳ ತೆರಿಗೆ ವಿನಾಯಿತಿ, ವಲಸೆ ಕಾರ್ವಿುಕರು ನಗರಗಳಿಗೆ ಮತ್ತೆ ಮರಳಿದರೆ ಅವರಿಗೆ ಸೂಕ್ತ ಸೌಲಭ್ಯ ಒದಗಿಸುವುದು ಸೇರಿ ಅಗತ್ಯ ಕ್ರಮಗಳನ್ನು ಕೈಗೊಂಡರೆ ಈಗಿನ ಸ್ಥಿತಿ ಸುಧಾರಿಸಬಹುದು, ಕ್ರಮೇಣ ಆಶಾದಾಯಕ ಬೆಳವಣಿಗೆ ಕಾಣಬಹುದು ಎಂಬುದು ತಜ್ಞರ ಅನಿಸಿಕೆ. ಅಲ್ಲದೆ, ಕರೊನಾ ಹಾವಳಿ ಸದ್ಯದಲ್ಲೇ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲವಾದ್ದರಿಂದ ಆರ್ಥಿಕತೆ ಕುಸಿಯದಂತೆ ಏನೆಲ್ಲ ಮಾಡಬಹುದು ಎಂಬ ಚಿಂತನೆಗೆ, ಪೂರಕ ಕ್ರಮಗಳ ಅನುಷ್ಠಾನಕ್ಕೆ ಇದು ಸಕಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net