

ಧಾನ್ಯ ದಾಸ್ತಾನು ರಕ್ಷಣೆಯಾದೀತೆ?: ಫೆಬ್ರವರಿ ಮಧ್ಯಭಾಗದ ದತ್ತಾಂಶ ಪ್ರಕಾರ, ಕೇಂದ್ರ ಸರ್ಕಾರದ ಬಳಿ ಗೋಧಿ ಮತ್ತು ಅಕ್ಕಿಯ ದಾಸ್ತಾನು 54 ದಶಲಕ್ಷ ಟನ್ ಇದೆ. ಇದು ದೇಶದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಬೇಡಿಕೆಯ ನಿಶ್ಚಿತ ಪ್ರಮಾಣಕ್ಕಿಂತ 30 ದಶಲಕ್ಷ ಟನ್ ಹೆಚ್ಚಿದೆ. ಒಂದೊಮ್ಮೆ ಯೂಕ್ರೇನ್ ಬಿಕ್ಕಟ್ಟು ತೀವ್ರಗೊಂಡರೆ ಭಾರತ ಬೆಲೆ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ ಗೋಧಿಯನ್ನು ರಫ್ತು ಮಾಡಬೇಕಾಗಿ ಬರಬಹುದು. ಹೀಗೆ ಮಾಡಿದರೆ ಹಣದುಬ್ಬರ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ.
ಕಚ್ಚಾ ತೈಲ ಗಗನಕ್ಕೆ: ಕಚ್ಚಾತೈಲ ಬೆಲೆ ಮತ್ತು ಆಹಾರ ದರಗಳ ನಡುವೆ ನೇರ ಸಂಬಂಧ ಇರುವುದು ಐತಿಹಾಸಿಕ ದತ್ತಾಂಶಗಳ ಮೂಲಕ ದೃಢಪಟ್ಟಿದೆ. ಕಚ್ಚಾತೈಲ ಬೆಲೆ ಏರಿದರೆ ಆಹಾರ ದರ ಕೂಡ ಏರಿಕೆಯಾಗುತ್ತದೆ. ಸದ್ಯ ಕಚ್ಚಾತೈಲ ದರ ಪ್ರತಿ ಬ್ಯಾರೆಲ್ಗೆ 130 ಡಾಲರ್ ಆಸುಪಾಸಿನಲ್ಲಿದೆ. ಇದು 100-110 ಡಾಲರ್ಗೆ ಇಳಿದರೂ, ರಸಗೊಬ್ಬರ ಮತ್ತು ಶಿಪ್ಪಿಂಗ್ ವೆಚ್ಚವನ್ನು ಹೆಚ್ಚಿಸಲಿದೆ. ಇದು ಆಹಾರದ ಹಣದುಬ್ಬರ ಏರಿಕೆಗೆ ಕಾರಣವಾಗುತ್ತದೆ.
ಕೃಷಿ ಮೇಲೆ ಪರಿಣಾಮ: ಉತ್ಪಾದನಾ ವೆಚ್ಚ ಹೆಚ್ಚುವ ಕಾರಣ ಅದಕ್ಕೆ ತಕ್ಕಂತೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಏರಿಕೆಯನ್ನು ಕೃಷಿಕರು ಬಯಸುತ್ತಾರೆ. ಸರ್ಕಾರ ಕೂಡ ಕೃಷಿ ಉತ್ಪಾದನಾ ವೆಚ್ಚ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ ನೀಡುವ ಪರಿಪಾಠವನ್ನು ಇತ್ತೀಚಿನ ವರ್ಷಗಳಲ್ಲಿ ಅನುಸರಿಸುತ್ತ ಬಂದಿದೆ. ಇದೇ ವೇಳೆ, ಬೆಲೆ ಏರಿಕೆ ಕೂಡ ಆಗುವ ಕಾರಣ ಕೃಷಿಕರಿಗೆ ಪ್ರಯೋಜನವಾಗಲಿದೆ. ಸದ್ಯ ಸಾಸಿವೆ ಬೆಲೆ ಕ್ವಿಂಟಾಲ್ಗೆ 7000 ರೂಪಾಯಿ ಇದ್ದು, 10,000 ರೂ. ಗಡಿದಾಟುವ ಸಾಧ್ಯತೆ ಇದೆ. ಇದರಂತೆ ಉಳಿದವುಗಳ ಬೆಲೆಯೂ ಏರಿಕೆಯಾಗಲಿದೆ.
ಸರ್ಕಾರ ಯಾವ ಕ್ರಮ ತೆಗೆದುಕೊಳ್ಳಬಹುದು?: ಧಾನ್ಯಗಳ ಸಾರ್ವಜನಿಕ ದಾಸ್ತಾನು ಹೆಚ್ಚಿಸುವುದು, ರಫ್ತು ನಿರ್ಬಂಧ ಹೇರುವುದು ಮುಂತಾದ ಕ್ರಮಗಳ ಮೂಲಕ ಬೆಲೆ ಏರಿಕೆ ನಿಯಂತ್ರಿಸಬಹುದು. ಈಗಾಗಲೇ ಚಿಲ್ಲರೆ ಆಹಾರ ಹಣದುಬ್ಬರ ಪ್ರಮಾಣ ಶೇಕಡ 5.4ಕ್ಕೆ ಏರಿದೆ. ಇದು 13 ತಿಂಗಳ ಅವದಿಯಲ್ಲಿ ಗರಿಷ್ಠ ಮಟ್ಟ. ಇನ್ನು ರಸಗೊಬ್ಬರಕ್ಕಾಗಿ ಭಾರತವು ಕೆನಡಾ, ಚೀನಾ, ಇಸ್ರೇಲ್ಗಳನ್ನು ನೆಚ್ಚಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಬಹುದು.