

ಬೆಂಗಳೂರು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಣೆ ಆಗುತ್ತಿರುವ ಜನಪ್ರಿಯ ಜನೌಷಧಿ ಮಳಿಗೆಗಳಿಗೂ ಅಗತ್ಯ ಸಾಲ ಸೌಲಭ್ಯ ನೀಡಲು ಉದ್ದೇಶಿಸಲಾಗಿದೆ ಎಂದು ಸಿಡ್ಬಿ ಉಪ ವ್ಯವಸ್ಥಾಪಕ ನಿರ್ದೇಶಕ ಸುದತ್ತ ಮಂಡಲ್ ತಿಳಿಸಿದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಲ್ಲಿ ಸಿಡ್ಬಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಂಯುಕ್ತವಾಗಿ ಬುಧವಾರ ಹಮ್ಮಿಕೊಂಡಿದ್ದ ‘ಆರ್ಥಿಕ ಸಾಕ್ಷರತೆ ಕುರಿತು ಔಟ್‌ರೀಚ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಾದ್ಯಂತ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ)ಗಳು 6.5 ಕೋಟಿ ಇವೆ. ಈ ಪೈಕಿ ‘ಉದ್ಯಮ್’ ಮೂಲಕ ನೋಂದಣಿ ಮಾಡಿಕೊಂಡಿರುವ ಅಧಿಕೃತ ಎಂಎಸ್‌ಎಂಇಗಳು ಕೇವಲ 1.5 ಕೋಟಿ ಆಗಿವೆ. ಪ್ಯಾನ್ ಸಂಖ್ಯೆ ನಮೂದಿಸುವುದು ಕಡ್ಡಾಯ ಆಗಿರುವುದರಿಂದ ಬಹುತೇಕ ಉದ್ಯಮಿಗಳು ಇದರಡಿ ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನು ಮನಗಂಡು ಪ್ಯಾನ್ ಸಂಖ್ಯೆ ಕಡ್ಡಾಯದಿಂದ ವಿನಾಯ್ತಿ ನೀಡಲಾಗಿದೆ. ಆಯಾ ಬ್ಯಾಂಕ್‌ಗಳಲ್ಲಿ ಈಗಾಗಲೇ ಎಂಎಸ್‌ಎಂಇಗಳು ಕೆವೈಸಿ ಸಲ್ಲಿಸಿರುತ್ತಾರೆ. ಅವುಗಳನ್ನು ಆಧರಿಸಿ, ‘ಉದ್ಯಮ್’ ಅಡಿ ನೋಂದಾಯಿಸಲು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಇದರ ಪರಿಣಾಮ ಕಳೆದ ಎರಡು ತಿಂಗಳಲ್ಲಿ 65 ಲಕ್ಷ ನೋಂದಯಾಗಿವೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಎರಡು ಕೋಟಿ ನೋಂದ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.