

ಮುಂಬೈ: ವಿಶ್ವದಾದ್ಯಂತ ನಡೆಯುತ್ತಿರುವ ವ್ಯಾಪಾರ ಮರುಹೊಂದಾಣಿಕೆಯ ಮಧ್ಯೆ ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತವು ದೀರ್ಘಕಾಲೀನ ದೃಷ್ಟಿಕೋನದ ಮೇಲೆ ಗಮನ ಕೇಂದ್ರೀಕರಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮುಂಬೈ ಷೇರು ವಿನಿಮಯ ಕೇಂದ್ರದ (ಬಾಂಬೆ ಸ್ಟಾಕ್ ಎಕ್ಸ್ಚೇಂಜ್- ಬಿಎಸ್ಇ) 150ನೇ ವರ್ಷಾಚರಣೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಸುಂಕ ಸಮರಗಳ ತೀವ್ರತೆ ಮತ್ತು ಸ್ವಹಿತಾಸಕ್ತಿ ರಕ್ಷಣೆಯ ಪ್ರಯತ್ನಗಳಿಂದಾಗಿ ಪೂರೈಕೆ ಸರಪಳಿಗೆ ಧಕ್ಕೆಯಾಗಲಿದೆ, ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ, ಹೂಡಿಕೆ ನಿರ್ಧಾರಗಳಲ್ಲಿ ಅನಿಶ್ಚಿತತೆ ಕಾಡಲಿದೆ. ಈ ಸಂಕೀರ್ಣ, ಅಸ್ಪಷ್ಟ ಪರಿಸ್ಥಿತಿಯಿಂದ ಭಾರತ ಚಿಂತಿತವಾಗಿದ್ದರೂ ತನ್ನ ನೀತಿಗಳಿಂದಲೇ ಈ ಜಾಗತಿಕ ಸವಾಲನ್ನು ಎದುರಿಸಿ ಗೆಲ್ಲುವ ಆತ್ಮವಿಶ್ವಾಸ ಹೊಂದಿದೆ ಎಂದು ಹೇಳಿದರು.
ಮೂಲಸೌಕರ್ಯ ಅಭಿವೃದ್ಧಿ, ಪ್ರಾದೇಶಿಕ ಸಹಕಾರ, ಸಮಗ್ರ ಬೆಳವಣಿಗೆ ಕ್ರಮಗಳ ಮೂಲಕ ಬಲವಾದ ದೇಶೀಯ ಅಡಿಪಾಯ ಹಾಕುವುದು ಸರ್ಕಾರದ ಉದ್ದೇಶ. ಇಷ್ಟೆಲ್ಲ ಗೊಂದಲಗಳ ನಡುವೆಯೂ ಭಾರತೀಯ ಮಾರುಕಟ್ಟೆಗಳು ಪ್ರಬಲ ಚೇತರಿಕೆಯ ಲಕ್ಷಣಗಳನ್ನು ತೋರಿಸಿವೆ. ಚಿಲ್ಲರೆ ಹೂಡಿಕೆದಾರರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಯುವಜನತೆ ದೇಶದ ಮಾರುಕಟ್ಟೆ ಮೇಲೆ ಇಟ್ಟಿರುವ ವಿಶ್ವಾಸ ಪ್ರಶಂಸಾರ್ಹ. ಸಣ್ಣ ತಪ್ಪಾದರೂ ಈ ನಂಬಿಕೆಗೆ ಧಕ್ಕೆ ಉಂಟಾಗುತ್ತದೆ ಎಂದು ಎಚ್ಚರಿಸಿದರು. ದೇಶವು ಆರ್ಥಿಕ ಪಯಣದಲ್ಲಿ ಈಗ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ಭಾರತ ಈ ದಶಕದ ಅಂತ್ಯಕ್ಕೆ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನವದೆಹಲಿ: ಅಮೆರಿಕದ ಜತೆಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆ ಮುಂದುವರಿಸಲು ಭಾರತೀಯ ಅಧಿಕಾರಿಗಳ ತಂಡ ಮುಂದಿನ ವಾರ ವಾಷಿಂಗ್ಟನ್ಗೆ ಭೇಟಿ ನೀಡಲಿದೆ. ಕಳೆದ ವಾರವಷ್ಟೇ ಅಮೆರಿಕದ ಅಧಿಕಾರಿಗಳ ನಿಯೋಗ ಭಾರತಕ್ಕೆ ಭೇಟಿ ನೀಡಿ ರ್ಚಚಿಸಿತ್ತು. ಭಾರತದ ಮುಖ್ಯ ಸಮಾಲೋಚಕ, ವಾಣಿಜ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಭಾರತದ ನಿಯೋಗದ ನೇತೃತ್ವ ವಹಿಸುವ ನಿರೀಕ್ಷೆ ಇದೆ.
ನಾಶ್ವಿಲ್ಲೆ: ಚೀನಾದ ಇ-ಕಾಮರ್ಸ್ ಸೈಟ್ಗಳಾದ ತೆಮು ಮತ್ತು ಶೀನ್ ತಮ್ಮ ವೇದಿಕೆಯಲ್ಲಿ ಮಾರಾಟವಾಗುವ ವಸ್ತುಗಳ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ಘೊಷಿಸಿವೆ. ಅಮೆರಿಕದ ತೆರಿಗೆ ಪ್ರಮಾಣ ಹೆಚ್ಚಳದಿಂದಾಗಿ ಈ ಕ್ರಮ ಅನಿವಾರ್ಯವಾಗಿದೆ ಎಂದು ಅವು ಹೇಳಿವೆ. ಇವುಗಳಲ್ಲಿ ಹೆಚ್ಚಾಗಿ ಗ್ರಾಮೀಣ ಭಾಗದ ಜನರು ತಯಾರಿಸಿರುವ ಕರಕುಶಲ ವಸ್ತುಗಳು, ದಿನಬಳಕೆಯ ಸಾಮಗ್ರಿಗಳು ಮಾರಾಟವಾಗುತ್ತವೆ. ಎರಡೂ ಕಂಪನಿಗಳ ಈ ಕ್ರಮವು ಭಾರತ ಸೇರಿದಂತೆ ವಿವಿಧ ದೇಶಗಳ ಉತ್ಪನ್ನಗಳ ಮಾರುಕಟ್ಟೆ ಹೆಚ್ಚಾಗಲು ಸಹಾಯಕವಾಗಲಿದೆ.
ಬೀಜಿಂಗ್: ತೆರಿಗೆ ಸಮರದ ಬಿಕ್ಕಟ್ಟನ್ನು ಬಗೆಹರಿಸಲು ಅಗತ್ಯವಿರುವ ಸಂವಹನಕ್ಕೆ ತಾನು ಆಸಕ್ತಿ ಹೊಂದಿರುವುದಾಗಿ ಗುರುವಾರ ಚೀನಾ ಸ್ಪಷ್ಟಪಡಿಸಿದೆ. ‘ಚೆಂಡು ಈಗ ಚೀನಾದ ಅಂಗಳದಲ್ಲಿದ್ದು, ನಮ್ಮೊಂದಿಗೆ ವ್ಯವಹರಿಸಲು ಚೀನಾ ಮುಂದಾಗಬೇಕು’ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಾಣಿಜ್ಯ ಸಚಿವಾಲಯದ ವಕ್ತಾರ ಹೆ ಯಾಂಗ್ಕಿಯಾನ್, ‘ಯಾರು ಗಂಟೆ ಕಟ್ಟಿದ್ದಾರೋ ಅವರೇ ಅದನ್ನು ಬಿಚ್ಚಬೇಕು’ ಎಂದು ಮಾರ್ವಿುಕವಾಗಿ ಹೇಳಿದರು. ಎರಡೂ ದೇಶಗಳ ನಡುವಿನ ಮಾತುಕತೆಯು ಅಧಿಕಾರಿಗಳ ಮಟ್ಟದಲ್ಲಿ ಮೊದಲು ಆರಂಭವಾಗಲಿದ್ದು, ನಂತರ ಉನ್ನತ ನಾಯಕರು ರ್ಚಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿವಿಧ ದೇಶಗಳ ಜತೆ ಅಮೆರಿಕದ ಮಾತುಕತೆ ಮುಂದುವರಿದಿರು ವಂತೆಯೇ ಬುಧವಾರ ಜಪಾನ್ ನಿಯೋಗದ ಜತೆಗಿನ ಚರ್ಚೆಯಲ್ಲಿ ಸ್ವತಃ ಟ್ರಂಪ್ ಭಾಗವಹಿಸಿದ್ದರು. ಸಮಾಲೋಚನೆ ಸೌಹಾರ್ದ ಯುತವಾಗಿತ್ತು ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಮುಂಬೈ: ಭಾರತೀಯ ಷೇರುಪೇಟೆ ಸತತ ನಾಲ್ಕನೇ ದಿನವೂ ಏರು ಹಾದಿಯಲ್ಲಿದ್ದು, ಗುರುವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ. 2ರಷ್ಟು ಏರಿಕೆ ದಾಖಲಿಸಿವೆ. ಅಮೆರಿಕ-ಜಪಾನ್ ಮಧ್ಯೆ ನಡೆದಿರುವ ವ್ಯಾಪಾರ ಮಾತುಕತೆ ಬಗೆಗಿನ ಆಶಾದಾಯಕ ನಿರೀಕ್ಷೆ, ದೇಶೀಯ ಷೇರುಪೇಡೆ ಬಗ್ಗೆ ವಿದೇಶಿ ಹೂಡಿಕೆದಾರರು ತೋರಿದ ಆಸಕ್ತಿ ಮುಂತಾದವು ಈ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಆರಂಭದಲ್ಲಿ ತುಸು ಇಳಿಮುಖವಾಗಿದ್ದ ಸೆನ್ಸೆಕ್ಸ್ ದಿನದ ವಹಿವಾಟಿನ ನಡುವೆ 1,572 ಅಂಕ (ಶೇ. 2.04) ಏರಿಕೆಯಾಗಿ 78,616ಕ್ಕೆ ತಲುಪಿತ್ತು. ಕೊನೆಯಲ್ಲಿ 1,508 ಅಂಕ ಏರಿಕೆ (ಶೇ. 1.96) ದಾಖಲಿಸಿ 78,553ಕ್ಕೆ ಸ್ಥಿರಗೊಂಡಿತು. ನಿಫ್ಟಿ 414 ಅಂಕ ಏರಿಕೆಯಾಗಿ 23,851ಕ್ಕೆ ಸ್ಥಿರವಾಯಿತು. ಕಳೆದ ನಾಲ್ಕು ದಿನಗಳಲ್ಲಿ ಸೆನ್ಸೆಕ್ಸ್ 4,706 ಅಂಕ (ಶೇ. 6.37) ಏರಿದ್ದು, ನಿಫ್ಟಿ 1,452 ಅಂಕ (ಶೇ. 6.48) ಹೆಚ್ಚಳವಾಗಿದೆ.
ಎಟರ್ನಲ್, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್ಟೆಲ್, ಸನ್ ಫಾರ್ವ, ಎಸ್ಬಿಐ, ಬಜಾಜ್ ಫಿನ್ಸರ್ವ್, ಕೋಟಕ್ ಮಹಿಂದ್ರಾ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭ ಗಳಿಸಿದವು. ಟೆಕ್ ಮಹಿಂದ್ರಾ, ಮಾರುತಿ ಷೇರುಗಳು ನಷ್ಟ ಅನುಭವಿಸಿದವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ 3,936 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ. ಗುಡ್ ಫ್ರೖೆಡೇ ಅಂಗವಾಗಿ ಶುಕ್ರವಾರ ಷೇರು ಮಾರುಕಟ್ಟೆಗೆ ರಜೆ ಇರುತ್ತದೆ.
ನವದೆಹಲಿ: ಮಾರ್ಚ್ಗೆ ಅಂತ್ಯವಾದ ತ್ರೖೆಮಾಸಿಕ ಅವಧಿಯಲ್ಲಿ ಇನ್ಫೋಸಿಸ್ ಕಂಪನಿಯ ಏಕೀಕೃತ ನಿವ್ವಳ ಲಾಭ 7,033 ಕೋಟಿ ರೂ.ಗೆ ಇಳಿದಿದ್ದು, ಶೇ. 11.7ರಷ್ಟು ಕಡಿಮೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಅದು 7,969 ಕೋಟಿ ರೂ. ಆಗಿತ್ತು. 22 ರೂ.ಗಳ ಅಂತಿಮ ಲಾಭಾಂಶ ನೀಡಲು ಕಂಪನಿಯ ಆಡಳಿತ ಮಂಡಳಿ ನಿರ್ಧರಿಸಿದ್ದು, ಇದು ಮಧ್ಯಂತರ ಲಾಭಾಂಶವೂ ಸೇರಿ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 13.2ರಷ್ಟು ಜಾಸ್ತಿ.
20 ಸಾವಿರ ಫ್ರೆಷರ್ಸ್ ನೇಮಕ: 2024-25ನೇ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಕಂಪನಿಯ ಉದ್ಯೋಗಿಗಳ ಸಂಖ್ಯೆಯು 3.23 ಲಕ್ಷ ಇದ್ದು, ಈ ಮೊದಲೇ ಘೊಷಿಸಿದ್ದಂತೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ 20 ಸಾವಿರ ಫ್ರೆಷರ್ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಕಂಪನಿಯ ಸಿಇಒ ಮತ್ತು ಎಂ.ಡಿ. ಸಲೀಲ್ ಪಾರೇಖ್ ತಿಳಿಸಿದರು.