

ನವದೆಹಲಿ: ಕೊರೊನಾ ವೈರಸ್ ಸೋಂಕಿನಿಂದ ರಾಷ್ಟ್ರದ ಉದ್ಯದ ಮೇಲೆ ಉಂಟಾಗಿರುವ ಸಮಸ್ಯೆ ನಿವಾರಣೆ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಚೀನಾದಲ್ಲಿ ತೀವ್ರವಾಗಿ ಹರಡಿರುವ ಕೊರೊನಾ ವೈರಸ್ ಸೋಂಕಿನಿಂದ ರಾಷ್ಟ್ರದ ಉದ್ದಿಮೆಗಳು ಸಮಸ್ಯೆ ಎದುರಿಸುತ್ತಿವೆ. ಸಮಸ್ಯೆ ಪತ್ತೆ ಮಾಡಿ ಅವುಗಳ ನಿವಾರಣೆಗೆ ಸರ್ಕಾರ ಮುಂದಾಗಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೊರೊನಾ ವೈರಸ್ ದಾಳಿ ಮುಖ್ಯಮವಾಗಿ ರಾಷ್ಟ್ರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಮೇಲೆ ತೀವ್ರ ಪರಿಣಾಮ ಬೀರಿದೆ. ಅಲ್ಲದೆ ಔಷಧಿ, ರಾಸಾಯನಿಕ, ಸೌರ ಉಪಕರಣ ಆಟಿಕೆಗಳು, ಪೀಠೋಪಕರಣ, ಯಂತ್ರಾಂಶ, ಪಾದರಕ್ಷೆಗಳು, ಬಟ್ಟೆ, ಉಡುಗೊರೆ, ಲೇಖನ ಸಾಮಗ್ರಿ, ಕೈಗಡಿಯಾರ, ಮೊಬೈಲ್ ಮತ್ತು ಮೊಬೈಲ್ ಪರಿಕರಗಳು, ಎಲೆಕ್ಟ್ರಾನಿಕ್ ವಸ್ತುಗಳು, ವಿದ್ಯುತ್ ಉತ್ಪನ್ನಗಳು, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಕಬ್ಬಿಣ, ಉಕ್ಕು, ಎಂಜಿನಿಯರಿಂಗ್ ಸರಕು ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ.
ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಚೀನಾ ಹಾಗೂ ಭಾರತದ ನಡುವಿನ ರಫ್ತು ಹಾಗೂ ಆಮದು ವ್ಯವಹಾರದ ಮೇಲೆ ಹೊಡೆತ ಬಿದ್ದಿದೆ. ಇದರಿಂದ ರಾಷ್ಟ್ರದಲ್ಲಿ ಉದ್ಯೋಗ ಸೃಷ್ಟಿ, ಮಾರುಕಟ್ಟೆ ಹಾಗೂ ಸಣ್ಣ ಉದ್ಯಮಗಳ ನಷ್ಟಕ್ಕೆ ಕಾರಣವಾಗಿದೆ ಎಂದು ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ತಿಳಿಸಿದೆ.
ಜನವರಿಯಲ್ಲಿ ಭಾರತದ ಸರಕು ರಫ್ತು ಶೇ.1.66.ಕ್ಕೆ ಇಳಿದಿದೆ. ಅಂದರೆ 25.97 ಬಿಲಿಯನ್ ಡಾಲರ್ಗೆ ಕುಸಿದಿದೆ. ಆಮದು ಶೇ. 0.75ಕ್ಕೆ ಇಳಿದು 41.14 ಬಿಲಿಯನ್ ಡಾಲರ್ಗೆ ಇಳಿದಿದೆ ಎಂದು ವ್ಯಾಪಾರ ದತ್ತಾಂಶ ತಿಳಿಸಿದೆ. (ಏಜೆನ್ಸೀಸ್)