ಬಿಜೆಪಿಗೆ ಹಾನಿ ತರುವ ಚಟುವಟಿಕೆಗೆ ಇತಿ ಶ್ರೀ ಶೀಘ್ರ : ಬಿ.ವೈ.ವಿಜಯೇಂದ್ರ

B Y Vijayendra
Published on

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ, ಪಕ್ಷ ವಿರೋಧಿ ಚಟುವಟಿಕೆಗಳಿಗೆ ಇತಿ ಶ್ರೀ ಹಾಡಬೇಕು ಎಂಬುದು ಕಾರ್ಯಕರ್ತರ ಬಯಕೆಯಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ದೆಹಲಿಯಿಂದ ಶನಿವಾರ ವಾಪಸ್ಸಾದ ಅವರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ದೆಹಲಿಯಲ್ಲಿ ನಮ್ಮ ವರಿಷ್ಠರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆ ಹಾಗೂ ಉಪ ಚುನಾವಣೆ ಬಗ್ಗೆ ವಿವರಿಸಿರುವೆ. ಕಾರ್ಯಕರ್ತರು ನನ್ನ ಮೇಲೆ ಸಾಕಷ್ಟು ಅಪೇಕ್ಷೆಯಿಟ್ಟುಕೊಂಡಿದ್ದಾರೆ ಎಂದರು.

ಒಂದೆರಡು ದಿನವಾದರೆ ಸರಿ, ದಿನ ಬೆಳಗಾದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷರನ್ನು ಟೀಕೆ ಮಾಡುತ್ತಲೇ ಇರುವುದರಿಂದ ಕಾರ್ಯಕರ್ತರು ಬೇಸತ್ತಿದ್ದಾರೆ ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ ಯತ್ನಾಳ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸದಿದ್ದರೆ ಅಸಮರ್ಥರೆಂದಲ್ಲ

ಯಡಿಯೂರಪ್ಪ ಅವರನ್ನು ಬೈಯುವುದರಿಂದ ಅತಿ ಎತ್ತರಕ್ಕೆ ಬೆಳೆಯಬಹುದು ಅಂದುಕೊಂಡಿದ್ದರೆ ಸಾಧ್ಯವಿಲ್ಲ. ಕಾರ್ಯಕರ್ತರು ಸಹ ಹಿಡಿ ಶಾಪ ಹಾಕಿ, ಇತಿ ಶ್ರೀ ಹಾಡಬೇಕು ಎಂದು ಅಪೇಕ್ಷಿಸುತ್ತಿದ್ದಾರೆ.

ಯಡಿಯೂರಪ್ಪ ಅವರನ್ನು ಟೀಕಿಸಿದರೆ ಪ್ರಚಾರ ಸಿಗುತ್ತದೆ ಎನ್ನುವುದು ಭ್ರಮೆ, ನಾನು ಏನೂ ಮಾತನಾಡಿಲ್ಲವೆಂದರೆ ಅಸಮರ್ಥ ಎಂದಲ್ಲವೆಂದು ಯತ್ನಾಳ್ ಮತ್ತು ತಂಡದ ಹೆಸರೆತ್ತದೆ ವಿಜಯೇಂದ್ರ ಎಚ್ಚರಿಕೆ ನೀಡಿದರು.

ದಿನ ಬೆಳಗಾದರೆ ಹೇಳಿಕೆ ನೀಡುವುದರಿಂದ ಪಕ್ಷದ ರಾಜ್ಯಾಧ್ಯಕ್ಷ ಬದಲಾವಣೆ ಆಗುತ್ತಾರೆ ಎಂಬ ಆಸೆ ಇಟ್ಟುಕೊಂಡಿದ್ದರೆ ಅದು ಈಡೇರುವುದಿಲ್ಲ. ತಾಳ್ಮೆಯಿಂದ ನನ್ನ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ ಎಂದು ಹೇಳಿದರು.

ಹೇಳಿಕೆ ನೀಡುವವರ ಬಾಯಿ ಮುಚ್ಚಿಸುವ ಶಕ್ತಿ ನನಗೆ ಇಲ್ಲವೆಂದರೆ ಕಾರ್ಯಕರ್ತರಿಗಿದೆ. ವರಿಷ್ಠರು ಸಹ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ಹಾಗೆಯೇ ನನ್ನ ಕೆಲಸದ ಬಗ್ಗೆ ವರಿಷ್ಠರಿಗೆ ಸಮಾಧಾನವಿದೆ ಎಂದೂ ಸಮಜಾಯಿಷಿ ನೀಡಿದರು.

ಉಚ್ಚಾಟಿಸುವಂತೆ ದೂರು ಕೊಟ್ಟಿಲ್ಲ

ನಾನು ಅವರನ್ನು (ಶಾಸಕ ಯತ್ನಾಳ್ ಹೆಸರು ಹೇಳದೆ) ಪಕ್ಷದಿಂದ ಉಚ್ಚಾಟಿಸುವಂತೆ ಕೋರಿ ವರಿಷ್ಠರಿಗೆ ದೂರು ನೀಡಿಲ್ಲ. ಯಡಿಯೂರಪ್ಪ ಮಗನಾಗಿರುವುದೆ ಅಪರಾಧ ಎನ್ನುವ ರೀತಿ ಕೆಲವರು ಮಾತನಾಡುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ತರಿಸುವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net