ಕೊನೆಗೂ ಶಿವಮೊಗ್ಗಕ್ಕೆ ಬಂತು ಯುದ್ಧ ಟ್ಯಾಂಕರ್ !

tanker
ಶಿವಮೊಗ್ಗಕ್ಕೆ ಶುಕ್ರವಾರ ಆಗಮಿಸಿದ ಟ್ಯಾಂಕರ್.
Published on

ಶಿವಮೊಗ್ಗ: ಭಾರತೀಯ ಸೇನೆಯ ಸೇವೆಯಿಂದ ಬಿಡುಗಡೆಯಾದ ಯುದ್ಧ ಟ್ಯಾಂಕರ್‌ವೊಂದನ್ನು ನಗರದ ಎಂಆರ್‌ಎಸ್ ವೃತ್ತದಲ್ಲಿ ಇರಿಸುವ ನಗರ ಪಾಲಿಕೆ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಪ್ರಯತ್ನ ಎರಡು ವರ್ಷಗಳ ಬಳಿಕ ಫಲ ನೀಡಿದೆ. ಶುಕ್ರವಾರ ಸಂಜೆ ಯುದ್ಧ ಟ್ಯಾಂಕರ್ ನಗರಕ್ಕೆ ಆಗಮಿಸಿದೆ. ಆ.12ರಂದು ಔಪಚಾರಿಕವಾಗಿ ಅದನ್ನು ಭವ್ಯವಾಗಿ ಸ್ವಾಗತಿಸಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ.

ಭಾರತ-ಬಾಂಗ್ಲಾ ಯುದ್ಧದಲ್ಲಿ ಬಳಕೆಯಾಗಿದ್ದ ರಷ್ಯಾ ನಿರ್ಮಿತ ಟಿ-55 ಟ್ಯಾಂಕರ್ ಪುಣೆಯಿಂದ ಶಿವಮೊಗ್ಗಕ್ಕೆ ಆಗಮಿಸಿದ್ದು, ಇದನ್ನು 12ರ ಬೆಳಗ್ಗೆ 10ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸ್ವಾಗತಿಸಲಾಗುವುದು. ಬಳಿಕ ಎಂಆರ್‌ಎಸ್ ವೃತ್ತಕ್ಕೆ ಕೊಂಡೊಯ್ದು ಅಲ್ಲಿ ಸ್ಮಾರಕದ ಮಾದರಿಯಲ್ಲಿ ಇರಿಸಲಾಗುತ್ತದೆ.
ಎಂಆರ್‌ಎಸ್ ವೃತ್ತಕ್ಕೆ ಕಾರ್ಗಿಲ್ ಸಮರದ ವಿಜಯದ ಪ್ರತೀಕವಾಗಿ ಕಾರ್ಗಿಲ್ ವೃತ್ತವೆಂದು ನಾಮಕರಣ ಮಾಡಿ ಹಲವು ವರ್ಷಗಳೇ ಕಳೆದಿವೆ. ಇದೀಗ ಯುದ್ಧವಿಜಯದ ಸಂಕೇತವಾಗಿ ಅಲ್ಲಿ ಟ್ಯಾಂಕರ್ ಇರಿಸಲಾಗುತ್ತಿದೆ. ಈ ಟ್ಯಾಂಕರ್ ಸಾಗಣೆ, ನಿರ್ವಹಣೆಗೆಂದು 2021ರಲ್ಲೇ ಮೂರು ಲಕ್ಷ ರೂ. ಮೀಸಲಿರಿಸಲಾಗಿತ್ತು. ಆ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಶಿವಮೊಗ್ಗಕ್ಕೆ ಒಂದು ಟ್ಯಾಂಕರ್ ಇಲ್ಲವೇ ಯುದ್ಧ ವಿಮಾನ ನೀಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದರು. ಸ್ವಾತಂತ್ರೊೃೀತ್ಸವಕ್ಕೆ ಮೂರು ದಿನ ಮುಂಚಿತವಾಗಿ ಯುದ್ಧ ಟ್ಯಾಂಕರ್ ಶಿವಮೊಗ್ಗಕ್ಕೆ ಬಂದಿರುವುದು ವಿಶೇಷ ಎನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net