

ಅಮರಾವತಿ: ಎನ್ಸಿಸಿ ಟ್ರೈನಿಂಗ್ ಹೆಸರಿನಲ್ಲಿ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್ಗಳನ್ನು ಮನಬಂದಂತೆ ಥಳಿಸಿ ರ್ಯಾಗ್ ಮಾಡಿರುವ ಘಟನೆ ಆಂಧ್ರಪ್ರದೇಶದ ಪಾಲ್ನಾಡುನಲ್ಲಿರುವ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಆಂಧ್ರಪ್ರದೇಶದ ಪಾಲ್ನಾಡ್ನ ನರಸರಾವ್ಪೇಟೆಯಲ್ಲಿರುವ ಎಸ್ಎಸ್ಎನ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳು ಎನ್ಸಿಸಿ ಟ್ರೈನಿಂಗ್ ಹೆಸರಿನಲ್ಲಿ ಜೂನಿಯರ್ಗಳನ್ನು ಹಾಸ್ಟೆಲಿಗೆ ಕರೆದುಕೊಂಡು ಬಂದು ಮನದಂಬಂತೆ ಥಳಿಸುತ್ತಾರೆ. ವಿದ್ಯಾರ್ಥಿಗಳನ್ನು ಜೋರಾಗಿ ನಗುತ್ತಾ ಥಳಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋವನ್ನು ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಈ ಘಟನೆಯು ಫೆಬ್ರವರಿಯಲ್ಲಿ ನಡೆದಿದ್ದು, ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯು ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದೆ. ಈ ಘಟನೆ ನಿಮ್ಮ ಸರ್ಕಾರ ಆಡಳಿತದಲ್ಲಿದ್ದಾಗ ನಡೆದಿದ್ದು ಎಂದು ಟಿಡಿಪಿ ವೈಎಸ್ಆರ್ಗೆ ಟಾಂಗ್ ನೀಡಿದೆ.