

ಗುವಾಹಟಿ: ಸಿನಿಮಾ ನಟ ನಟಿಯರ ಬಗ್ಗೆ ಅಭಿಮಾನಿಗಳು ಏನಾದರೂ ಮಾಡುತ್ತಿರುತ್ತಾರೆ. ಇದು ಕೂಡ ಅಂತಹದ್ದೇ ಸುದ್ದಿ!
ಅಸ್ಸಾಂನ 52 ವರ್ಷದ ವ್ಯಕ್ತಿಯೊಬ್ಬ ನಟ ಸಲ್ಮಾನ್ ಖಾನ್ ಅವರನ್ನು ಕಾಣಲು ಬರೋಬ್ಬರಿ 600 ಕಿ.ಮೀ. ಸೈಕಲ್ ತುಳಿದಿದ್ದಾನೆ. ಆಸ್ಸಾಂನ ಟಿನ್ಸುಕಿಯಾ ನಿವಾಸಿ ಭೂಪೆನ್ ಲಿಕ್ಸನ್, ಫೆಬ್ರವರಿ 8ರಂದು ಸೈಕಲ್ ಸವಾರಿ ಆರಂಭಿಸಿದ್ದು ನಿನ್ನೆ (ಗುರುವಾರ ಫೆ.13) ಗುವಾಹಟಿಗೆ ತಲುಪಿದ್ದಾನೆ.
ಫೆಬ್ರವರಿ ಗುವಾಹಟಿಯಲ್ಲಿ ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು ಅದರಲ್ಲಿ ಭಾಗವಹಿಸಲು ಸಲ್ಮಾನ್ ಖಾನ್ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭೂಪೆನ್ ನಗರಕ್ಕೆ ಆಗಮಿಸಿದ್ದಾನೆ.
ಫೆಬ್ರವರಿ 8ರಂದು ನಮ್ಮೂರು ಟಿನ್ಸುಕಿಯಾದಿಂದ ಪ್ರಯಾಣ ಆರಂಭಿಸಿದೆ. ಗುವಾಹಟಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಲ್ಮಾನ್ ಆಗಮಿಸುತ್ತಿದ್ದಾರೆ ಎಂದು ತಿಳಿಯಿತು. ಆದರಿಂದ ಇಲ್ಲಿಗೆ ಬಂದೆ ಎಂದು ಭೂಪೆನ್ ಹೇಳಿದರು.
ಭೂಪೆನ್ ಲಿಕ್ಸನ್ ಮೂಲತಃ ಸೈಕಿಲಿಸ್ಟ್ ಆಗಿದ್ದು 60 ನಿಮಿಷದಲ್ಲಿ 48 ಕಿ.ಮೀ. ಹ್ಯಾಂಡಲ್ ಮುಟ್ಟದೆ ಸೈಕಲ್ ಓಡಿಸಿದ ಸಾಧನೆ ಬಗ್ಗೆ ಇಂಡಿಯಾ ಬುಕ್ ಆಪ್ ರೆಕಾರ್ಡ್ನಲ್ಲಿ ದಾಖಲಾಗಿದೆ. (ಏಜೆನ್ಸೀಸ್)