

ಬಾಲ್ಯದಿಂದ ಹೊನ್ನಾವರ, ಉಡುಪಿ, ಮುಂಬೈ ಸೇರಿ ಹಲವು ಸ್ಥಳಗಳಲ್ಲಿ ವಿದ್ಯಾಭ್ಯಾಸ ಹಾಗೂ ಕೆಲಸ ನಿರ್ವಹಿಸಿದ ಅನಂತ್ ನಾಗ್, ‘ಎಲ್ಲಿಯೂ ಒಂದೆಡೆ ನಿಂತವನಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆ ಪಯಣಿಸುತ್ತಿದ್ದೆ. ಹೀಗಾಗಿ ನನ್ನ ಬದುಕಿನಲ್ಲಿ ಒಂದಿಬ್ಬರು ಆಪ್ತ ಗೆಳೆಯರು ಎಂದು ಹೇಳುವುದು ಕಷ್ಟ. ಒಂದೊಂದು ಘಟ್ಟದಲ್ಲಿ ಒಂದಿಷ್ಟು ಒಳ್ಳೆಯ ಸ್ನೇಹಿತರಾದರು. ಎಲ್ಲರೂ ನನ್ನವರೆಂದು ಭಾವಿಸಿ ಬದುಕಿದ್ದೇನೆ. ‘ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು, ಯಾರು ಸ್ನೇಹದಿ ಬರುವರೋ ಅವರೇ ನಮ್ಮೋರು’ ಎಂಬ ಹಾಡಿನ ಸಾಲಿನಂತೆ ನನ್ನ ಜೀವನ. ಈ ಪಯಣದಲ್ಲಿ ನನ್ನ ಜತೆ ಬಂದ, ಬರುವ, ಇದ್ದ, ಇರುವ ಪ್ರತಿಯೊಬ್ಬರೂ ಸ್ನೇಹಿತರೇ..’ ಎಂದು ಹೇಳಿಕೊಳ್ಳುತ್ತಾರೆ. ‘ಆನಂದಾಶ್ರಮದ ಸ್ವಾಮಿ ರಾಮ್ಾಸ್ ಗುರುಗಳು ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ. ಅವರ ಪ್ರವಚನಗಳು, ಮಾತುಗಳು, ಅಧ್ಯಾತ್ಮ ಪುಸ್ತಕಗಳು ಯಾವ ಕಾಲಕ್ಕೂ ನನ್ನ ಜತೆಗಿರುತ್ತವೆ. ಇನ್ನು ಪುಸ್ತಕಗಳು ನನಗೆ ಪರ್ಮನೆಂಟ್ ಸ್ನೇಹಿತರು’ ಎನ್ನುತ್ತಾರೆ. ಸ್ನೇಹ ಸಂಬಂಧದ ಬಗ್ಗೆ ಭಾರತೀಯ ಸಂಸ್ಕೃತಿಯಲ್ಲೂ ಮಹತ್ವವಿದೆ ಎನ್ನುವ ಅವರು, ‘ಯಾರನ್ನೂ ದ್ವೇಷಿಸದೇ ಬದುಕುವುದು. ಭಗವದ್ಗೀತೆಯ ಶ್ಲೋಕದಲ್ಲಿ ಹೇಳಿರುವಂತೆ ಮನುಷ್ಯ ಕರುಣೆಯನ್ನು ತೋರುತ್ತಾ, ನಿರಹಂಕಾರಿಯಾಗಿ, ನಿಮೋಹಿಯಾಗಿ, ದ್ವೇಷವಿಲ್ಲದೇ, ಇತರರನ್ನು ನಿಂದಿಸದೇ ಬದುಕಿದರೆ ಪ್ರಪಂಚವೇ ಸ್ನೇಹ ಬಯಸುತ್ತದೆ. ಎಲ್ಲರೂ ಮಿತ್ರರಾಗುತ್ತಾರೆ. ಅಜಾತಶತ್ರುವಾಗಿ ಬದುಕುವುದೇ ನಮ್ಮ ಸಂಸ್ಕೃತಿ. ಯುವ ಪೀಳಿಗೆಯೂ ಅದನ್ನೇ ಅನುಸರಿಸಿದರೆ ಚೆಂದ’ ಎನ್ನುತ್ತಾರೆ ಅನಂತ್ ನಾಗ್.