

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಸಿನಿಮಾ ನಿರ್ದೇಶಕನನ್ನು ಸಿಸಿಬಿಯ ಸಂಘಟಿತ ಅಪರಾಧ ದಳ(ಪಶ್ಚಿಮ)ದ ಪೊಲೀಸರು 20 ವರ್ಷಗಳ ಬಳಿಕ ಬಂಧಿಸಿದ್ದಾರೆ.
ಸುದ್ದಗುಂಟೆಪಾಳ್ಯ ನಿವಾಸಿ ಗಜೇಂದ್ರ ಅಲಿಯಾಸ್ ಗಜ(೪೬) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ೨೦೦೪ರಲ್ಲಿ ರಾಜಕೀಯ ರ‌್ಯಾಲಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಆಗ ಒಂದು ಗುಂಪು ರವಿ ಅಲಿಯಾಸ್ ಕೊತ್ತ ರವಿ ಎಂಬುವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಚಂದ್ರಪ್ಪ ಮತ್ತು ಬಾಬು ಎಂಬುವವರ ಜತೆಗೆ ೮ನೇ ಆರೋಪಿಯಾಗಿದ್ದ ಗಜೇಂದ್ರನನ್ನು ಬಂಧಿಸಲಾಗಿತ್ತು. ಬಳಿಕ ಆರೋಪಿ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದ. ಆ ನಂತರ ಆರೋಪಿ ತಮಿಳುನಾಡಿನ ವೆಲ್ಲೂರಿನಲ್ಲಿ ೩ ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ. ಬಳಿಕ ಬೆಂಗಳೂರಿಗೆ ಬಂದಿದ್ದು, ಕುಟುಂಬ ಸಮೇತ ಸುದ್ದಗುಂಟೆಪಾಳ್ಯದಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಚಿತ್ರ ನಿರ್ದೇಶಕನಾಗಿದ್ದ ಗಜೇಂದ:್ರ
ಬೆಂಗಳೂರಿಗೆ ಬಂದಿದ್ದ ಗಜೇಂದ್ರ, ಸಿನಿಮಾ ನಿರ್ದೇಶನದ ಬಗ್ಗೆ ಒಲವು ಬೆಳೆಸಿಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಪುಟಾಣಿ ಪವರ್ ಸೇರಿ ೩ ಸಿನಿಮಾಗಳನ್ನು ನಿರ್ದೇಶಿಸಿದ್ದ. ಆದರೂ ತನ್ನ ಮೇಲಿನ ಕೊಲೆ ಕೇಸ್ ಬಗ್ಗೆ ಭಯಗೊಂಡಿದ್ದ ಗಜೇಂದ್ರ ಪ್ರಕರಣವನ್ನು ಪೊಲೀಸರು ಮರೆತಿದ್ದಾರೆ ಎಂದು ಓಡಾಡಿಕೊಂಡಿದ್ದ. ಆದರೆ, ಕೋರ್ಟ್‌ಗೆ ಹಾಜರಾಗದೆ ನಾಪತ್ತೆಯಾಗಿದ್ದ ಆರೋಪಿಗಳ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ್ದ ಸಿಸಿಬಿ ಪೊಲೀಸರು, ಆರೋಪಿಯ ಈ ಹಿಂದಿನ ವಿಳಾಸ ಪರಿಶೀಲಿಸಿದ್ದರು. ಆಗ ತಮಿಳುನಾಡಿನ ವೆಲ್ಲೂರಿಗೆ ಹೋಗಿರುವ ಮಾಹಿತಿಯ ಹಿನ್ನೆಲೆಯಲ್ಲಿ ಒಂದು ತಂಡ ಅಲ್ಲಿಗೆ ಹೋಗಿತ್ತು. ನಂತರ ಆತ ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ವಾಸವಾಗಿದ್ದಾನೆ ಎಂಬ ಮಾಹಿತಿ ಸಂಗ್ರಹಿಸಿತ್ತು. ಬಳಿಕ ಆತನ ಮನೆ ಮೇಲೆ ದಾಳಿ ನಡೆಸಿ, ಆತನ ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿದಾಗ ಈತನೇ ಗಜೇಂದ್ರ ಎಂದು ಖಚಿತ ಪಡಿಸಿಕೊಂಡು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯ ವಿಚಾರಣೆಯಲ್ಲಿ ಪ್ರಕರಣದಲ್ಲಿ ತಮ್ಮ ಪರ ವಾದ ಮಂಡಿಸಿದ್ದ ವಕೀಲರಿಗೆ ಕೊಲೆ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ, ಕೊಲೆ ಕೇಸ್ ಖುಲಾಸೆಗೊಂಡಿದೆ ಎಂದು ಮಾಹಿತಿ ನೀಡಿದ್ದರು. ಹೀಗಾಗಿ ಸುಮ್ಮನಾಗಿದ್ದಾಗಿ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.