

ಬೆಂಗಳೂರು: ಅತ್ಯಾಚಾರದ ಆರೋಪದಡಿ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಸೋಮಶೇಖರ್ ಜಯರಾಜ್ ಅಲಿಯಾಸ್ ಜಿಮ್ ಸೋಮ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರ್ಥಿಕವಾಗಿ ಸಹಾಯ ಮಾಡುವುದಾಗಿ ಕರೆದೊಯ್ದು ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿರುವುದಾಗಿ ೨೬ ವರ್ಷದ ಸಂತ್ರಸ್ತ ಯುವತಿ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತೆಗೆ ಆಕೆಯ ಸ್ನೇಹಿತೆಯೊಬ್ಬಳ ಮೂಲಕ ಸೋಮಶೇಖರ್ ಪರಿಚಯವಾಗಿತ್ತು. ಕಳೆದ ವರ್ಷ ಆಕೆಗೆ ಮದುವೆ ನಿಗದಿಯಾಗಿತ್ತು. ಹೀಗಾಗಿ ಆರ್ಥಿಕ ಸಹಾಯ ಮಾಡುವಂತೆ ಸೋಮಶೇಖರ್ ಬಳಿ ದೂರುದಾರೆ ಕೇಳಿಕೊಂಡಿದ್ದರು. ದೂರುದಾರಳ ಪಿಜಿ ಬಳಿ ಹೋಗಿದ್ದ ಸೋಮಶೇಖರ್, ಹಣ ಕೊಡುವುದಾಗಿ ಆಕೆಯನ್ನು ಲ್ಯಾಂಗ್ ಫೋರ್ಡ್ ರಸ್ತೆಯಲ್ಲಿರುವ ತಮ್ಮ ಫ್ಲ್ಯಾಟ್‌ಗೆ ಕರೆದೊಯ್ದಿದ್ದರು. ಅಲ್ಲಿ ಮದ್ಯಪಾನ ಮಾಡಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ನಡೆದ ವಿಚಾರವನ್ನು ಯಾರಿಗಾದರೂ ಹೇಳಿದರೆ ಪ್ರಾಣಹಾನಿ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತ ಯುವತಿ ದೂರು ನೀಡಿದ್ದಾರೆ.
ಸೋಮಶೇಖರ್ ಮತ್ತು ಸಂತ್ರಸ್ತೆ ನಡುವೆ ೨೦೨೨ ರಿಂದಲೂ ಸ್ನೇಹವಿದ್ದು, ಕೋಲಾರ ಮೂಲದ ಆಕೆ ನಗರಕ್ಕೆ ಬಂದು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಳು. ಪಿ.ಜಿ ಯಲ್ಲಿ ಉಳಿದುಕೊಂಡಿದ್ದಳು. ಸ್ನೇಹಿತೆಯೊಬ್ಬರ ಮೂಲಕ ಸಂತ್ರಸ್ತೆಗೆ ಸೋಮಶೇಖರ್ ಪರಿಚಯವಾಗಿದ್ದು, ನಂತರ ಇಬ್ಬರ ೆನ್ ನಂಬರ್ ವಿನಿಮಯವಾಗಿದೆ. ಸೋಮಶೇಖರ್ ಆಗಾಗ್ಗೆ ಸಂತ್ರಸ್ತೆಗೆ ಮೇಸೆಜ್ ಮಾಡುತ್ತಿದ್ದರು. ವಾರಾಂತ್ಯದಲ್ಲಿ ಕರೆ ಮಾಡಿ ಕೂಡ ಮಾತನಾಡುತ್ತಿದ್ದರು. ಊಟಕ್ಕೆ ಹೊರಗಡೆ ಹೊಗೋಣ ಎಂದು ಕರೆಯುತ್ತಿದ್ದರು. ಆರ್ಥಿಕವಾಗಿ ಸಹಾಯ ಮಾಡುವುದಾಗಿ ಹೇಳಿ ಅತ್ಯಾಚಾರ ಎಸಗಲಾಗಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.