ಸಂಸದ ಎಸ್.ಮುನಿಸ್ವಾಮಿ‌ ವಿರುದ್ಧ ದೂರು ದಾಖಲು

images (1)
Published on

ಕೋಲಾರ: ಜಿಲ್ಲಾ ಜನತಾ ದರ್ಶನದಲ್ಲಿ ನಡೆದ ಜಟಾಪಟಿ ಸಂಬಂಧ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ವಿರುದ್ಧ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಗಲ್‌ಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು  ಎಫ್‌ಐಆರ್‌ ದಾಖಲಾಗಿದೆ.

ಬಂಗಾರಪೇಟೆ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ನೀಡಿದ ದೂರಿನ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ‌ ಸೆ.೨೫ರಂದು ಏರ್ಪಡಿಸಿದ್ದ ಜಿಲ್ಲಾ ಜನತಾ ದರ್ಶನದಲ್ಲಿ ಸಂಸದ ಎಸ್.ಮುನಿಸ್ವಾಮಿ ನನ್ನತ್ತ ಕೈ ತೋರಿಸಿ ಸಚಿವರನ್ನು ನೋಡುತ್ತಾ, ಅಕ್ಕಪಕ್ಕದಲ್ಲಿ ಭೂಗಳ್ಳರನ್ನು ಕೂರಿಸಿಕೊಂಡು ನೀವೇನು ಮಾಡಲು ಸಾಧ್ಯ ಎಂದು ವ್ಯಂಗ್ಯವಾಗಿ ಮತ್ತು ದರ್ಪದಿಂದ ಅವಮಾನ ಮಾಡುವ ರೀತಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಆರೋಪ ಸಾಬೀತುಪಡಿಸಲು ಹೇಳಿದಾಗ, ನಿನ್ನನ್ನು ಇವತ್ತು ಮುಗಿಸುತ್ತೇನೆ ಎಂದು ಆಕ್ರೋಶಭರಿತರಾಗಿ ಅಲ್ಲಿದ್ದ ಸಿಬ್ಬಂದಿಯನ್ನು ಪಕ್ಕಕ್ಕೆ ತಳ್ಳಿ ಹೊಡೆಯಲು ಮುನ್ನುಗ್ಗಲು ಯತ್ನಿಸಿದರು, ಆಗ ಮಧ್ಯಪ್ರವೇಶಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ್ ಪರಿಸ್ಥಿತಿಯನ್ನು ಅವಲೋಕಿಸಿ ತಕ್ಷಣ ಆಗಬಹುದಾದ ಅನಾಹುತ ತಡೆದಿದ್ದಾರೆ.  ಜಿಲ್ಲಾ ಸಚಿವ ಬೈರತಿ ಸುರೇಶ್ ಎದ್ದು ನಿಂತು ಸಂಸದರಿಂದ ಆಗಬಹುದಾದ  ಮಾರಣಾಂತಿಕ ಹಲ್ಲೆಯಿಂದ ತಪ್ಪಿಸಿದ್ದಾರೆ. ಸಂಸದರು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆವೊಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಸೆ.25 ರಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ನೇತೃತ್ವದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜನತಾ ದರ್ಶನ ನಡೆದಿತ್ತು.
ಸಂಸದ ಮುನಿಸ್ವಾಮಿ ಕೂಡ ದೂರು ನೀಡಿದ್ದು, ಇದೇ ಠಾಣೆಯಲ್ಲಿ  ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಆದರೆ, ಹೆಚ್ಚಿನ ಮಾಹಿತಿ ನೀಡಲು  ನಿರಾಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net