ಭಜನೆ ಹಾಡು ಹಾಕಿದಕ್ಕೆ ಹಲ್ಲೆ ಪ್ರಕರಣ: ಹಲ್ಲೆಗೊಳಗಾಗಿದವನ ವಿರುದ್ಧವೇ ಕೇಸ್ ದಾಖಲು

Crime Logo
Published on

ಬೆಂಗಳೂರು: ನಗರ್ತಪೇಟೆಯ ಮೊಬೈಲ್ ಅಂಗಡಿಯೊಂದರಲ್ಲಿ ಭಕ್ತಿಗೀತೆ ಹಾಕಿದಕ್ಕೆ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎ್ಐಆರ್ ದಾಖಲಾಗಿದೆ.

ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿರುವ ಕೃಷ್ಣಾ ಟೆಲಿಕಾಂ ಶಾಪ್ ಮಾಲೀಕ ಮುಖೇಶ್ ವಿರುದ್ಧ ಬಂಧಿತ ಆರೋಪಿ ಸುಲೇಮಾನ್ ತಂದೆ ಜಬೀನ್ ಎಂಬುವರು ನೀಡಿದ ಆಧಾರದ ಮೇಲೆ ಪ್ರತಿದೂರು ದಾಖಲಾಗಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಮುಕೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನಲ್ಲಿ ಏನಿದೆ ?
ರಂಜಾನ್ ಹಿನ್ನೆಲೆಯಲ್ಲಿ ಸಿದ್ದಣ್ಣ ಗಲ್ಲಿಯಲ್ಲಿರುವ ಜುಮ್ಮಾ ಮಸೀದಿಗೆ ಪುತ್ರ ಸುಲೇಮಾನ್ ಹಾಗೂ ಸಹಚರೊಂದಿಗೆ ಪ್ರಾರ್ಥನೆ ಹೋಗುವಾಗ ಕೃಷ್ಣಾ ಟೆಲಿಕಾಂ ಶಾಪ್‌ನಲ್ಲಿ ಕಳೆದ ೩-೪ ದಿನಗಳಿಂದ ಜೋರಾಗಿ ಹಾಡನ್ನು ಹಾಕಿರುವ ಪ್ರಶ್ನಿಸಿದ್ದಾರೆ. ರಂಜಾನ್ ಹಿನ್ನೆಲೆಯಲ್ಲಿ ಪ್ರತಿದಿನ ಸುಮಾರು ೩ ಸಾವಿರ ಮಂದಿ ಪ್ರಾರ್ಥನೆಗಾಗಿ ಈ ರಸ್ತೆಗೆ ಬರುತ್ತಾರೆ. ಇದರಿಂದ ಅವರಿಗೆಲ್ಲ ತೊಂದರೆಯಾಗಲಿದೆ ಎಂದು ಹೇಳಿದಾಗ ಏಕಾಏಕಿ ಮುಕೇಶ್, ಸುಲೇಮಾನ್ ಹಾಗೂ ಸಹಚರರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮುಕೇಶ್ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಏನಿದು ಪ್ರಕರಣ?
ಮಾ. ೧೭ ರಂದು ಮೊಬೈಲ್ ಅಂಗಡಿಯಲ್ಲಿ ಜೋರಾಗಿ ಭಜನೆ ಹಾಡು ಹಾಕಿದ್ದ ವಿಚಾರಕ್ಕೆ ಅಂಗಡಿ ಮಾಲೀಕ ಮುಕೇಶ್ ಆರೋಪಿಗಳು ಹಲ್ಲೆ ನಡೆಸಿದ್ದರು. ಹಲ್ಲೆ ಆರೋಪದಡಿ ಸುಲೇಮಾನ್, ಶಹವಾಜ್, ತರುಣ್, ರೋಹಿತ್ ಸೇರಿ ಹಲವರನ್ನು ಬಂಧಿಸಲಾಗಿತ್ತು. ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಬಿಜೆಪಿಯ ಸಂಸದರಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಹಾಗೂ ಪಿ.ಸಿ.ಮೋಹನ್ ನೇತೃತ್ವದ ಬಿಜೆಪಿ ನಿಯೋಗ ಸ್ಥಳದಲ್ಲೇ ಜಮಾಯಿಸಿ ಬೃಹತ್ ಪ್ರತಿಭಟನೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net