

ಕೆಲಸಕ್ಕೆಂದು ಹೊರಗೆ ಹೋಗಿದ್ದ ಈತ ಮನೆಗೆ ಬಂದಾಗ ಒಂದು ಕ್ಷಣ ಕಂಗಾಲಾಗಿ ಹೋದ. ಅಡುಗೆ ಮನೆ ಸೀಲಿಂಗ್ ನೋಡಿದವನಿಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ...!
ಆಸ್ಟ್ರೇಲಿಯಾದಲ್ಲಿ ಘಟನೆ ನಡೆದಿದೆ. ಕ್ವೀನ್ಸ್ಲ್ಯಾಂಡ್ ರಾಜ್ಯದ ಲೇಸಿಸ್ ಕ್ರೀಕ್ ನಿವಾಸಿಯಾಗಿರುವ ಡೆವಿಡ್ ಟೇಟ್ ಸೋಮವಾರ ಸಂಜೆ ಮನೆಗೆ ವಾಪಸ್ ಆಗುವಷ್ಟರಲ್ಲಿ ಅವರ ಮನೆಯಲ್ಲಿ ಎರಡು ದೊಡ್ಡ ಹೆಬ್ಬಾವುಗಳು ಸಿಕ್ಕಾಪಟೆ ಫೈಟ್ ಮಾಡುತ್ತಿದ್ದವು. ಸೀಲಿಂಗ್ ಸೇರಿಕೊಂಡು. ಅಲ್ಲೇ ಕಾದಾಟ ನಡೆಸುತ್ತಿದ್ದವು. ಹಾವುಗಳ ಕಾದಾಟದಿಂದ ಸೀಲಿಂಗ್ನ ದೊಡ್ಡದಾದ ಚೂರು ಅಡುಗೆ ಮನೆಯ ಟೇಬಲ್ ಮೇಲೆ ಮುರಿದುಬಿದ್ದಿತ್ತು.
ಮಳೆಯಿದ್ದಾಗ ಹೆಬ್ಬಾವುಗಳು ಬರುವುದು ಸಾಮಾನ್ಯ. ಆದರೆ ಈಗ್ಯಾಕೆ ಬಂದವು ಎಂಬುದು ನನಗೆ ಗೊತ್ತಾಗಲಿಲ್ಲ. ಒಂದು ಹಾವು 9 ಅಡಿ 2 ಇಂಚು, ಮತ್ತೊಂದು ಹಾವು 8 ಅಡಿ 2 ಅಂಚುಗಳಷ್ಟು ಉದ್ದವಾಗಿದ್ದವು. ಸುಮಾರು 45 ಕೆಜಿ ತೂಕಹೊಂದಿದ್ದವು. ಮಲಗುವ ಕೋಣೆ, ಅಡುಗೆ ಕೋಣೆಗಳಲ್ಲೆಲ್ಲ ದಾಂಗುಡಿ ಎಬ್ಬಿಸಿವೆ ಎಂದು ಡೆವಿಡ್ ತಿಳಿಸಿದ್ದಾರೆ.
ನಂತರ ಉರಗತಜ್ಞ ಸ್ಟೀವನ್ ಬ್ರೌನ್ ಬಂದು ಎರಡೂ ಹಾವನ್ನೂ ಹಿಡಿದಿದ್ದಾರೆ. ಈ ಎರಡೂ ಗಂಡು ಹಾವುಗಳು ಒಂದು ಹೆಣ್ಣು ಹಾವಿಗಾಗಿ ಹೀಗೆ ಹೊಡೆದಾಡಿಕೊಂಡಿವೆ. ಅದರ ಬೆನ್ನಟ್ಟಿಯೇ ಬಂದಿವೆ. ಈ ಮನೆಯಲ್ಲಿ ಖಂಡಿತ ಎಲ್ಲೋ ಒಂದು ಹೆಣ್ಣು ಹಾವು ಇದ್ದೇಇದೆ ಎಂದು ಸ್ಟೀವನ್ ತಿಳಿಸಿದ್ದಾರೆ. ಹಾಗಾಗಿ ಡೆವಿಡ್ಗೆ ಆತಂಕ ದೂರವಾಗಿಲ್ಲ. (ಏಜೆನ್ಸೀಸ್)