ಕಿಟ್ ವಿತರಣೆ ವೇಳೆ ಹೊಡೆದಾಡಿಕೊಂಡ ಜೆಡಿಎಸ್ ಮುಖಂಡರು

JDS Hodedata 18 May 20
Published on

ಮುಳಬಾಗಿಲು: ನಗರದ ಹೊರವಲಯದ ನರಸಿಂಹತೀರ್ಥದ ಬಳಿ ಭಾನುವಾರ ರಾತ್ರಿ ಜೆಡಿಎಸ್‌ನ ದಾಯಾದಿ ಕಲಹ ಸ್ಫೋಟಗೊಂಡು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಹೊಡೆದಾಟದಲ್ಲಿ ನಗರಸಭೆ ಸದಸ್ಯ ಜಿ. ನಾಗರಾಜ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೇ 18ರಂದು ಲಾಕ್‌ಡೌನ್ ಅಂಗವಾಗಿ ಆಲಂಗೂರು ಅಭಿಮಾನಿ ಬಳಗದಿಂದ ಆಹಾರ ಪದಾರ್ಥ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ತಾಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ಮೇ 17ರ ಸಂಜೆ ಬೋವಿ ಕಾಲನಿಯ ನಗರಸಭೆ ಜೆಡಿಎಸ್ ಸದಸ್ಯ ಜಿ.ನಾಗರಾಜ್ ಅವರನ್ನು ಹೆಬ್ಬಣಿ ಬಳಿ ಇರುವ ರಾಕ್‌ವ್ಯಾಲಿ ರೆಸಾರ್ಟ್‌ಗೆ ಕರೆದಿದ್ದರು.

ನಾಗರಾಜ್ ಸ್ನೇಹಿತರಾದ ಆನಂದ್‌ಸಾಗರ್, ಶ್ರೀನಿವಾಸ್, ರಾಧಾಕೃಷ್ಣ ಅವರೊಂದಿಗೆ ರೆಸಾರ್ಟ್‌ಗೆ ತೆರಳಿದಾಗ ಅಲ್ಲಿ ಕಾಡೇನಹಳ್ಳಿ ನಾಗರಾಜ್ ಇರಲಿಲ್ಲ. ಫೋನ್ ಮಾಡಿದಾಗ ‘‘ಮುಳಬಾಗಿಲು ನರಸಿಂಹತೀರ್ಥ ಬೈಪಾಸ್‌ನಲ್ಲಿ ಇದ್ದೇವೆ ಅಲ್ಲಿಗೆ ಬಾ’’ ಎಂದು ತಿಳಿಸಿದರು. ಅಲ್ಲಿಗೆ ತೆರಳಿದಾಗ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ತಲೆಗೆ ಲಾಂಗ್‌ನಿಂದ ಹೊಡೆದಿರುವುದರಿಂದ ಬಲಗಣ್ಣು, ಮುಖದಲ್ಲಿ ಗಾಯವಾಗಿದ್ದು ಅಡ್ಡಬಂದ ಸ್ನೇಹಿತ ಆನಂದ್‌ಸಾಗರ್ ಮೇಲೂ ಆರೋಪಿ ಗಂಗಾಧರ್ ಲಾಂಗ್‌ನಿಂದ ಹಲ್ಲೆ ಮಾಡಿದ್ದಾರೆ.

ಗಸ್ತಿನಲ್ಲಿದ್ದ ಪೊಲೀಸರು ಗಾಯಾಳು ಜಿ.ನಾಗರಾಜ್ ಅವರನ್ನು ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

‘‘ಕಾಡೇನಹಳ್ಳಿ ನಾಗರಾಜ್, ರಾಕ್‌ವ್ಯಾಲಿ ರೆಸಾರ್ಟ್ ಮಾಲೀಕ ಚಂದ್ರು, ಗಂಗಾಧರ ಹಾಗೂ ಇವರೊಂದಿಗೆ ಕಾರಿನಲ್ಲಿದ್ದ 2-3 ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ’’ ಎಂದು ಜಿ. ನಾಗರಾಜ್ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net