ಶಿವಮೊಗ್ಗಕ್ಕೆ ಬಂದಿಳಿದ ಯುದ್ಧ ವಿಮಾನ

war plane
ಸೋಮವಾರ ಶಿವಮೊಗ್ಗಕ್ಕೆ ಆಗಮಿಸಿದ ಯುದ್ಧ ವಿಮಾನದೊಂದಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ.
Published on

ಶಿವಮೊಗ್ಗ: ಜಿಲ್ಲೆಯ ಯುವಕರಲ್ಲಿ ದೇಶಾಭಿಮಾನ, ಸೈನ್ಯಕ್ಕೆ ಸೇರುವ ಪ್ರೇರಣೆ ನೀಡುವ ಉದ್ದೇಶದಿಂದ ಈಗಾಗಲೇ ಹಳೆಯ ಯುದ್ಧ ಟ್ಯಾಂಕರ್‌ವೊಂದನ್ನು ತರಿಸಿ ನಗರದ ಅಲ್ಲಮಪ್ರಭು ಮೈದಾನದಲ್ಲಿ ಸ್ಥಾಪಿಸಲಾಗಿದೆ. ಈಗ ಭಾರತೀಯ ವಾಯುಸೇನೆ ಬಳಸುತ್ತಿದ್ದ ಯುದ್ಧ ವಿಮಾನ ಕೂಡ ನಗರಕ್ಕೆ ಆಗಮಿಸಿರುವುದು ಹೆಮ್ಮೆಯ ಸಂಗತಿ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಸೋಮವಾರ ವಿಮಾನವನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧ ವಿಮಾನದೊಂದಿಗೆ ವಾಯುಸೇನೆ ಅಧಿಕಾರಿಗಳೂ ಬಂದಿದ್ದಾರೆ. ಶೀಘ್ರದಲ್ಲೇ ಅದನ್ನು ಜೋಡಣೆ ಮಾಡಿ ಮೈದಾನದಲ್ಲಿ ಸ್ಥಾಪಿಸಲಿದ್ದಾರೆ ಎಂದು ತಿಳಿಸಿದರು.

ನೌಕಾಪಡೆಯ ಹಡಗನ್ನು ಕೂಡ ಕೊಡಲು ಕೇಂದ್ರ ರಕ್ಷಣಾ ಸಚಿವರು ಒಪ್ಪಿದ್ದು, ಸಿಗಂದೂರು ಸೇತುವೆ ಬಳಿ ಅದಕ್ಕೆ ಸೂಕ್ತ ಸ್ಥಳಾವಕಾಶ ಕಲ್ಪಿಸಿ ಅಲ್ಲಿ ಸ್ಥಾಪಿಸಲಾಗುವುದು. ಆ ಭಾಗವನ್ನು ಪ್ರವಾಸಿಗರ ಆಕರ್ಷಣೆಯ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ಯುದ್ಧ ವಿಮಾನ ಕಿರಣ್ ಒಂದು ಕಾಲದಲ್ಲಿ ನಮ್ಮ ವಾಯುಪಡೆಯ ಪೈಲಟ್‌ಗಳ ತರಬೇತಿಗೆ ಬಳಕೆಯಾಗುತ್ತಿತ್ತು. ಎಚ್‌ಎಎಲ್ ನಿರ್ಮಿಸಿದ ಎಚ್‌ಜೆಟಿ-ಕಿರಣ್ ಎಂಬ ವಿಮಾನ ಎರಡು ಸೀಟರ್‌ನದ್ದಾಗಿದೆ. 1963ರಿಂದ ಇದನ್ನು ತರಬೇತಿಗೆ ಬಳಕೆ ಮಾಡಲಾಗುತ್ತಿತ್ತು. ಈ ವಿಮಾನ 50 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net