

ಬೆಂಗಳೂರು: ಸ್ಮಾರ್ಟ್ ಮೀಟರ್ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದ ತಮ್ಮ ಮೇಲೆ ಮಾನನಷ್ಟ ದಾವೆ ಹೂಡಲಾಗಿದೆ. ಇಂಥದ್ದಕ್ಕೆಲ್ಲ ಹೆದರುವುದಿಲ್ಲ, ಸ್ಮಾರ್ಟ್ ಮೀಟರ್ ಹೆಸರಿನಲ್ಲಿ ಬಹು ಕೋಟಿ ರೂ. ಲೂಟಿಗೆ ಬಿಡಲ್ಲವೆಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸವಾಲೆಸೆದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಕಪ್ಪುಪಟ್ಟಿಯಲ್ಲಿರುವ ಕಂಪನಿಗೆ ನಿಯಮಬಾಹಿರವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಗುತ್ತಿಗೆ ನೀಡಲಾಗಿದೆ. ಗ್ರಾಹಕರಿಂದ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪ ಪುನರುಚ್ಚರಿಸಿದರು.
ಬಹು ಕೋಟಿ ರೂ.ಗಳ ಹಗರಣವಾಗಿದೆ ಎಂಬ ಅನುಮಾನಿಸಿ ಪುರಾವೆ, ಆಧಾರಗಳ ಸಹಿತ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಲಾಗಿದೆ. ಹೈಕೋರ್ಟ್‌ನಲ್ಲೂ ಖಾಸಗಿ ದೂರು ಸಲ್ಲಿಸಿದ್ದು, ಮುಂದೆ ಎಲ್ಲೆಲ್ಲಿ ಅವಕಾಶ ಸಿಗುತ್ತದೆಯೋ ಅಲ್ಲಿಗೂ ದೂರು ಸಲ್ಲಿಸುತ್ತೇವೆ ಎಂದರು.
ಇಂಧನ ಸಚಿವ ಕೆ.ಜೆ.ಜಾಜ್ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುತ್ತಿಲ್ಲ. ಯಾರಿಗೋ ಅನುಕೂಲ ಮಾಡಿಕೊಡಲು ನಿಯಮಬಾಹಿರವಾಗಿ ಗುತ್ತಿಗೆ ಕೊಟ್ಟಿದ್ದರತ್ತ ಗಮನಸೆಳೆದಿದ್ದು. ಸಚಿವ ಜಾರ್ಜ್ ಜವಾಬ್ದಾರಿ ಅರಿತು ಪರಿಶೀಲಿಸಿ ಕ್ರಮಕೈಗೊಳ್ಳುವ ನಿರೀಕ್ಷೆಯಿತ್ತು ಎಂದರು.
ಆದರೆ ಜವಾಬ್ದಾರಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಜನಕಲ್ಯಾಣ ಬಿಟ್ಟು ಈ ವಯಸ್ಸಿನಲ್ಲೂ ಸ್ವಾರ್ಥದ ರಾಜಕಾರಣ ಮಾಡುತ್ತಿದ್ದಾರೆ. ಹಣ, ಅಧಿಕಾರ ದುರ್ಬಳಕೆಯಾಗಿಲ್ಲ ಎಂದಾದರೆ ಕಪ್ಪು ಪಟ್ಟಿಯಲ್ಲಿರುವ ಕಂಪನಿ ಜತೆಗೆ ಗುತ್ತಿಗೆ ಒಪ್ಪಂದ ಮಾಡಿಕೊಂಡಿರುವುದು ಹೌದೋ ? ಅಲ್ಲವೋ ? ಎಂಬುದಕ್ಕೆ ಉತ್ತರ ನೀಡಲಿ ಎಂದು ಒತ್ತಾಯಿಸಿದರು.
ಸ್ಮಾರ್ಟ್ ಮೀಟರ್ ಹಗರಣದ ಆಪಾದನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿಲ್ಲ. ಅಂದರೆ 15 ಸಾವಿರ ಕೋಟಿ ರೂ. ಅಕ್ರಮದ ಅನುಮಾನವಿರುವ ಕಾರಣ ಮೌನವಾಗಿದ್ದಾರೆ. ಹಗರಣದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಮಾನನಷ್ಟ ದಾವೆ ಹೂಡಲಾಗಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಕಿಡಿ ಕಾರಿದರು.