

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ಪಿಆರ್) ಹಿಂಪಡೆಯುವ ತನಕ ಶಾಂತಿಯುತ ಹೋರಾಟ ಮುಂದುವರಿಸುವುದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ತಿಳಿಸಿದೆ.
ಬುಧವಾರ ನಗರದ ಹೊರವಲಯದ ಅಡ್ಯಾರ್ನ ಶಹಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಮಾಜಿ ಐಎಎಸ್ ಅಧಿಕಾರಿ ಹರ್ಷ ಮಂದರ್ ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಹಿಂದೂಸ್ಥಾನವನ್ನು ಹಿಂದು ರಾಷ್ಟ್ರವನ್ನಾಗಿಸುವ ಹುನ್ನಾರ ಕೇಂದ್ರ ಸರ್ಕಾರದ್ದು. ಗಾಂಧೀಜಿಯ ಅಸಹಕಾರ ಚಳವಳಿ ಮಾದರಿಯಲ್ಲಿ ನಾವು ಪ್ರತಿಭಟಿಸಬೇಕಾಗಿದೆ ಎಂದರು.
ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್.ಮಹಮ್ಮದ್ ಮಸೂದ್, ದಕ್ಷಿಣ ಕನ್ನಡ ಖಾಜಿ ಅಲ್ಹಾಜ್ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ದುವಾ, ಉಡುಪಿ ಜಿಲ್ಲಾ ಖಾಜಿ ಬೇಕಲ ಇಬ್ರಾಹಿಂ ಮುಸ್ಲಿಯಾರ್, ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಯು.ಟಿ.ಖಾದರ್ ಮತ್ತಿತರರಿದ್ದರು.
ಬಿಗುಭದ್ರತೆ ನಡುವೆ ಸಮಾವೇಶ: ಪ್ರತಿಭಟನಾ ಸಮಾವೇಶ ಪೊಲೀಸ್ ಬಿಗು ಭದ್ರತೆ ನಡುವೆ ನಡೆಯಿತು. ನಗರದ ಒಳಗೆ ಹಾಗೂ ಹೊರವಲಯದಲ್ಲಿ, ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಬೆಳಗ್ಗಿನಿಂದಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಮುಸ್ಲಿಂ ಸಮುದಾಯದವರ ಅಂಗಡಿಗಳು ಮುಚ್ಚಿದ್ದವು.