ಮಾಸ್ಕ್​ ಧರಿಸದೆ ಓಡಾಡುತ್ತಿದ್ದ ಅಪ್ಪ...ಇದೇ ಕಾರಣಕ್ಕೆ ಹೋಯ್ತು ಮಗಳ ಪ್ರಾಣ !

Mask
Published on

ಗುಂಟೂರು: ಒಂದು ಫೇಸ್​ ಮಾಸ್ಕ್​ (ಮುಖಗವಸು)ನಿಂದಾಗಿ ಶುರುವಾದ ಗಲಾಟೆ 19 ವರ್ಷದ ಹುಡುಗಿಯ ಪ್ರಾಣವನ್ನೇ ತೆಗೆದಿದೆ.

ಆಂಧ್ರಪ್ರದೇಶದ ಗುಂಟೂರಿನಲ್ಲಿ ಜು.3ರಂದು ನಡೆದ ಘಟನೆ ಇಂದು ಬೆಳಕಿಗೆ ಬಂದಿದೆ. ಕರ್ನಾತಿ ಫಾತಿಮಾ ಎಂಬ 19 ವರ್ಷದ ಯುವತಿ ಮೃತಳು.

ಗುಂಟೂರು ಜಿಲ್ಲೆಯ ರೆಂಟಾಚಿಂತಾಲಾ ನಿವಾಸಿಯಾಗಿದ್ದ ಕರ್ನಾತಿ ಯಲಮಂಡಲ ಎಂಬ ವ್ಯಕ್ತಿ ಮುಖಕ್ಕೆ ಮಾಸ್ಕ್​ ಧರಿಸದೆ ಎಲ್ಲೆಡೆ ಓಡಾಡುತ್ತಿದ್ದರು. ಸ್ಥಳೀಯ ಕೆಲವು ಯುವಕರು ಇದನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಕೊವಿಡ್​-19 ಹೆಚ್ಚಾಗಿದ್ದು, ಮಾಸ್ಕ್​ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಓಡಾಡಬಾರದು ಎಂಬ ನಿಯಮವಿದ್ದರೂ ಮುಖಗವಸು ಹಾಕಿಕೊಳ್ಳದೆ ಓಡಾಡುತ್ತಿದ್ದ ಕರ್ನಾತಿ ಯಲಮಂಡಲ ಅವರ ಬಳಿ ಸದಾ ಜಗಳ ಆಡುತ್ತಿದ್ದರು.

ಯಲಮಂಡಲ ಮಾಸ್ಕ್​ ಧರಿಸುವುದಿಲ್ಲ ಎಂದು ಸದಾ ಕ್ಯಾತೆ ತೆಗೆಯುತ್ತಿದ್ದ ಯುವಕರು ಜು.3ರಂದು ಮಾರುಕಟ್ಟೆಯಲ್ಲಿ ಮುಖಕ್ಕೆ ಮಾಸ್ಕ್​ ಧರಿಸದೆ ಓಡಾಡುತ್ತಿರುವುದನ್ನು ಯಲಮಂಡಲ ಮತ್ತು ಅವರ ಸಂಬಂಧಿಕರು ನೋಡಿದರು. ಆಗ ಯುವಕರನ್ನು ಈ ಬಗ್ಗೆ ಪ್ರಶ್ನೆ ಮಾಡಿದರು. ಕೂಡಲೇ ಎರಡೂ ಗುಂಪುಗಳ ಮಧ್ಯೆ ಮಾತಿನ ಚಕಮಕಿ ಶುರುವಾಗಿ, ವಾಗ್ವಾದ ದೊಡ್ಡದಾಯಿತು. ಇದನ್ನೂ ಓದಿ: ಗೋಗ್ರಾದಿಂದ ಚೀನಾ ಸೈನಿಕರು ಹಿಂದೆ ಸರಿದಿದ್ದೇ ಸುಳ್ಳು ಎಂದ ನಿವೃತ್ತ ಕರ್ನಲ್​: ರಾಹುಲ್​ ಗಾಂಧಿ ಕೆಂಡಾಮಂಡಲ

ಈ ವೇಳೆ ಯುವಕರು ಯಲಮಂಡಲ ಅವರಿಗೆ ಕೋಲಿನಿಂದ ಹೊಡೆಯಲು ಮುಂದಾದರು. ಅಲ್ಲಿಯೇ ಇದ್ದ ಅವರ ಮಗಳು ಫಾತಿಮಾ ತನ್ನ ತಂದೆಯನ್ನು ಕಾಪಾಡಲು ಅಡ್ಡಬಂದಳು. ಹೀಗಾಗಿ ಯುವಕರ ಹೊಡೆತ ಫಾತಿಮಾಳ ತಲೆಗೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದಳು. ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಫಾತಿಮಾಳ ತಂದೆಯ ದೂರಿನ ಅನ್ವಯ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net