ಬಿಜೆಪಿ ಟಿಕೆಟ್ ಯಾರಿಗೆ? ಮೂಲವಾಸಿಗಳಿಗೋ- ವಲಸಿಗರಿಗೋ? ಚಳ್ಳಕೆರೆ ಸಭೆಯಲ್ಲಿ ಗದ್ದಲ

BJP
Published on

ಚಳ್ಳಕೆರೆ: ಚಳ್ಳಕೆರೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ? ಮೂಲವಾಸಿಗಳಿಗೋ- ವಲಸಿಗರಿಗೋ ಮೊದಲು ಸ್ಪಷ್ಟಪಡಿಸಿ. ಆ ಬಳಿಕ ಮಾತನಾಡಿ ಎಂದು ಪಕ್ಷದ ಕಾರ್ಯಕರ್ತರು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಭಾಷಣದ ವೇಳೆ ಅವರನ್ನ ಸುತ್ತುವರಿದ ಘಟನೆ ನಡೆದಿದೆ.

ಬಳ್ಳಾರಿಯಲ್ಲಿ ನ. 20ರಂದು ಆಯೋಜಿಸಿರುವ ಎಸ್ಟಿ ವಿರಾಟ್ ಸಮಾವೇಶ ಹಾಗೂ ಚಳ್ಳಕೆರೆಯಲ್ಲಿ ನ. 22ರಂದು ನಡೆಯಲಿರುವ ಜನಸಂಕಲ್ಪ ಯಾತ್ರೆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಕೆ.ಎಸ್.ನವೀನ್ ಭಾಷಣಕ್ಕೆ ಎದ್ದು ನಿಂತಾಗ ಕೆಲವರು ಗೊಂದಲ ಸೃಷ್ಟಿಸಿದರು.

ಬಿಜೆಪಿ ಟಿಕೆಟ್‌ಗೆ ಐದಾರು ಹೆಸರು ಕೇಳಿಬರುತ್ತಿವೆ. ಈ ನಡುವೆ ಈ ದಿನದ ಸಭೆಗೆ ನಾನೂ ಟಿಕೆಟ್ ಆಕಾಂಕ್ಷಿ ಎಂದು ಹೊಸದಾಗಿ ಆರ್.ಅನಿಲ್ ಕುಮಾರ್ ಆಗಮಿಸಿರುವ ಉದ್ದೇಶ ಏನು? ಸಾಮಾನ್ಯ ಜನರಲ್ಲಿ ಪಕ್ಷದ ಸಂಘಟನೆ ಬಗ್ಗೆ ಗೊಂದಲ ಮೂಡುತ್ತಿದೆ ಎಂದು ಗಮನಸೆಳೆದರು.

ಕೆ.ಎಸ್.ನವೀನ್ ಮಾತನಾಡಿ, ಯಾವುದೇ ಪಕ್ಷದಲ್ಲಿ 6 ತಿಂಗಳು ಮುಂಚೆ ಅಭ್ಯರ್ಥಿ ಘೋಷಿಸುವ ಪದ್ಧತಿ ಇಲ್ಲ. ಆಕಾಂಕ್ಷಿಗಳನ್ನು ಬರಬೇಡಿ ಎಂದು ಹೇಳಲಾಗದು. ಅದೇ ರೀತಿ ಸ್ಥಳೀಯರು- ಹೊರಗಿನವರು ಟಿಕೆಟ್ ಬಯಸಿದ್ದಾರೆ. ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು. ಅಭ್ಯರ್ಥಿ ಯಾರೇ ಆಗಲಿ, ಬಿಜೆಪಿಯನ್ನು ಗೆಲ್ಲಿಸಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ಎರಡು ಅವಧಿಯಲ್ಲಿ ಪಕ್ಷ ಸೋಲು ಕಂಡ ಹಿನ್ನೆಲೆಯಲ್ಲಿ ಚಳ್ಳಕೆರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಲು ಹಿಂದೇಟು ಹಾಕಿದ್ದರು. ನ. 22ರ ಕಾರ್ಯಕ್ರಮಕ್ಕೆ ಬಲವಂತವಾಗಿ ಒಪ್ಪಿಸಲಾಗಿದೆ. 40 ವರ್ಷಗಳ ಎಸ್ಸಿ-ಎಸ್ಟಿ ಮೀಸಲು ಬೇಡಿಕೆ ಈಡೇರಿಸಿದ ಕಾರಣ ಜನಸಂಕಲ್ಪ ಯಾತ್ರೆ ಮೂಲಕ 2023ರ ಗೆಲುವಿಗೆ ಅಡಿಪಾಯ ಹಾಕಿಕೊಳ್ಳಬೇಕು ಎಂದರು.

ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಪಿ. ಜಯಪಾಲಯ್ಯ, ಬಿ.ವಿ.ಸಿರಿಯಣ್ಣ, ಬಾಳೆಕಾಯಿ ರಾಮದಾಸ್, ಸೋಮಶೇಖರ್ ಮಂಡಿಮಠ್, ಬಿ.ಎಸ್.ಶಿವಪುತ್ರಪ್ಪ, ದೇವರಾಜ ರೆಡ್ಡಿ, ಸಣ್ಣಸೂರಯ್ಯ, ಬಸವರಾಜ, ವೀರೇಶ್ ಇತರರಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಆಕಾಂಕ್ಷಿತರಿಗೆ ಕಾರ್ಯಕರ್ತರ ಜತೆ ಸೇರಿ ಪಕ್ಷ ಸಂಘಟನೆಗೆ ಸೂಚಿಸುವುದು ಸಹಜ. ಒಂದು ವೇಳೆ ಮುಂಚಿತವಾಗಿ ಅಭ್ಯರ್ಥಿ ಘೋಷಿಸಿದರೆ ಚುನಾವಣೆ ಹೊತ್ತಿಗೆ ತನ್ನ ಮೈಮೇಲಿನ ಬಟ್ಟೆ ಮಾರಿಕೊಳ್ಳುವ ಪರಿಸ್ಥಿತಿಯನ್ನು ಅಭ್ಯರ್ಥಿ ಎದುರಿಸಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net