

ಬೆಂಗಳೂರು: ಕಾಲೇಜಿನ ಪ್ರಯೋಗಾಲಯದಲ್ಲಿ ಮೆಟಲ್ ಪೀಸ್ ತೆಗೆದುಕೊಂಡ ವಿಚಾರಕ್ಕೆ ವಿದ್ಯಾರ್ಥಿಗಳ ನಡುವೆ ಗಲಾಟೆಯಾಗಿದ್ದು, ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತರ ಜತೆ ಸೇರಿ ಮತ್ತೊಬ್ಬ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ಈ ಸಂಬಂಧ ಕೆರೆಗುಡ್ಡದಹಳ್ಳಿ ನಿವಾಸಿ ಫಾಸಿ ಅಹ್ಮದ್ ಎಂಬಾತ ಕಾನೂನು ಸಂಘರ್ಷಕ್ಕೊಳಗಾದ ವಿದ್ಯಾರ್ಥಿ ವಿರುದ್ಧ ದೂರು ನೀಡಿದ್ದಾರೆ. ಫಾಸಿ ಅಹ್ಮದ್ ಮತ್ತು ಕಾನೂನು ಸಂಘರ್ಷಕ್ಕೊಳಗಾದ ವಿದ್ಯಾರ್ಥಿಯು ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯ ಖಾಸಗಿ ಕಾಲೇಜಿನಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದಾರೆ. ಆ.೨೮ ರಂದು ಮಧ್ಯಾಹ್ನ ೨ ಗಂಟೆ ಸುಮಾರಿಗೆ ಇಬ್ಬರು ಪ್ರಯೋಗಾಲಯದಲ್ಲಿದ್ದರು. ಆಗ ಆರೋಪಿತ ವಿದ್ಯಾರ್ಥಿಯೊಬ್ಬ ಫಾಸಿ ಅಹ್ಮದ್‌ಗೆ ಸೇರಿದ ಮೆಟಲ್ ಪೀಸ್ ತೆಗೆದುಕೊಂಡಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಅದರಿಂದ ಆಕ್ರೋಶಗೊಂಡಿದ್ದ ಆರೋಪಿತ ವಿದ್ಯಾರ್ಥಿ ಅದೇ ದಿನ ಸಂಜೆ ವಿಶ್ವೇಶ್ವರಯ್ಯ ಪಾರ್ಕ್ ಬಳಿ ಫಾಸಿ ಅಹ್ಮದ್ ಹೋಗುವಾಗ ತನ್ನ ಸ್ನೇಹಿತರ ಸೇರಿ ಅಡ್ಡಗಟ್ಟಿದ್ದಾನೆ. ನಂತರ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅಹ್ಮದ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಸದ್ಯ ಫಾಸಿ ಅಹ್ಮದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾನೂನು ಸಂಘರ್ಷಕ್ಕೊಳಗಾದ ಇಬ್ಬರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಗಮ್ಮನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.