40 ರೂಪಾಯಿಗಾಗಿ ಅತ್ತೆ-ಸೊಸೆ ನಡುವೆ ಜಗಳ: ಸಿಟ್ಟಿಗೆದ್ದ ಮಗನಿಂದ ನಡೆಯಿತು ದೊಡ್ಡ ಪ್ರಮಾದ

Untitled-1
Published on

ಬಾಗಲಕೋಟೆ: 40 ರೂಪಾಯಿ ವಿಚಾರಕ್ಕೆ ಅತ್ತೆ-ಸೊಸೆ ನಡುವೆ ಶುರುವಾದ ಜಗಳ ಒಬ್ಬರ ಸಾವಲ್ಲಿ ಅಂತ್ಯ ಕಂಡಿದೆ. ಈ ಪ್ರಕರಣ ಸಂಬಂಧ ಅಮ್ಮ-ಮಗನ್ನನ್ನು ಪೊಲೀಸರು ಬಂಧಿಸಿದ್ದಾರೆ.

ಇಂತಹ ದುರ್ಘಟನೆ ಬಾಗಲಕೋಟೆ ತಾಲೂಕಿನ ನಕ್ಕರಗುಂದಿ ಗ್ರಾಮದಲ್ಲಿ ಸಂಭವಿಸಿದೆ. ರಂಗವ್ವ ಗುಳ್ಳಣ್ಣವರ(29) ಮೃತ ದುರ್ದೈವಿ. ಭೀಮವ್ವ ಗುಳ್ಳಣ್ಣವರ ಎಂಬುವರ ಪುತ್ರ ಮಳಿಯಪ್ಪ ಗುಳ್ಳಣ್ಣವರ ತನ್ನ ಸೋದರ ಮಾವನ ಮಗಳು ರಂಗವ್ವನ ಜತೆ 12 ವರ್ಷದ ಹಿಂದೆ ಮದುವೆ ಆಗಿದ್ದ. ನಕ್ಕರಗುಂದಿ ಗ್ರಾಮದಲ್ಲಿ ಕುಟುಂಬ ವಾಸವಿತ್ತು. ಮಳಿಯಪ್ಪ ಹಮಾಲಿ ಕೆಲಸ ಮಾಡುತ್ತಿದ್ದ.

ನಿನ್ನೆ(ಗುರುವಾರ) ಸಂಜೆ ಭೀಮವ್ವರ 40 ರೂಪಾಯಿ ಕಳವಾಗಿತ್ತಂತೆ. ಈ ಹಣವನ್ನು ನೀನೆ ತಗೊಂಡಿದ್ದೀಯಾ ಎಂದು ಸೊಸೆ ಬಳಿ ಅತ್ತೆ ಭೀಮವ್ವ ಆರೋಪಿಸಿದ್ದರು. ನಾನು ಹಣ ತೆಗೆದುಕೊಂಡಿಲ್ಲ ಎಂದು ಸೊಸೆ ಎಷ್ಟೇ ಹೇಳಿದರೂ ಅತ್ತೆ ಕೇಳಿಲ್ಲ. ಮಾತಿಗೆ ಮಾತು ಬೆಳೆದು ಅತ್ತೆ-ಸೊಸೆ ನಡುವೆ ಜಗಳ ಶುರುವಾಗಿದೆ. ಇದನ್ನು ನೋಡಿ ಸಿಟ್ಟಿಗೆದ್ದ ಮಳಿಯಪ್ಪ, ಪತ್ನಿಯ ಕಪಾಳಕ್ಕೆ ಜೋರಾಗಿ ಬಾರಿಸಿದ್ದಾನೆ. ಕುಸಿದು ಬಿದ್ದ ಪತ್ನಿ, ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಸ್ತಮಾ, ಬಿಪಿಯಿಂದ ರಂಗವ್ವ ಬಳಲುತ್ತಿದ್ದಳು ಎನ್ನಲಾಗಿದೆ.

40 ರೂಪಾಯಿಗಾಗಿ ಅತ್ತೆ-ಸೊಸೆ ನಡುವೆ ಶುರುವಾದ ಜಗಳದಲ್ಲಿ ಕೋಪಕ್ಕೆ ಬುದ್ಧಿಕೊಟ್ಟು ಪತ್ನಿಯ ಸಾವಿಗೆ ಕಾರಣನಾದ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ತೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net