ಗಂಡನ ಮೇಲಿನ ಸಿಟ್ಟಿಗೆ ಇಬ್ಬರು ಮಕ್ಕಳನ್ನು ಕೊಂದು ರಾತ್ರಿಯಿಡಿ ಶವಗಳೊಂದಿಗೇ ಮಲಗಿದ ತಾಯಿ!

Crime Scene
Published on

ಲಖನೌ: ಗಂಡನ ಮೇಲಿದ್ದ ಸಿಟ್ಟಿಗೆ ಹೆಂಡತಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದು ಅವರ ಶವದೊಂದಿಗೇ ರಾತ್ರಿಯಿಡೀ ಮಲಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬೆಳಗ್ಗೆ ಆಕೆಯೇ ಊರವರನ್ನು ಕರೆದು ಮಕ್ಕಳ ಕೊಲೆಯ ವಿಚಾರ ಹೇಳಿರುವುದಾಗಿ ವರದಿಯಾಗಿದೆ.

ಗುಲಾಬ್ ಖುರೇಷಿ ಹೆಸರಿನ ವ್ಯಕ್ತಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾನೆ. ಆತನಿಗೆ 12 ವರ್ಷಗಳ ಹಿಂದೆ ಅಂಜುಮ್​ ಹೆಸರಿನ ಮಹಿಳೆಯೊಂದಿಗೆ ಮದುವೆಯಾಗಿದ್ದು, ಉಮರ್​ ಹೆಸರಿನ ಐದು ವರ್ಷದ ಮಗ ಮತ್ತು ಅಂಶಿಕಾ ಹೆಸರಿನ ಮೂರು ವರ್ಷದ ಮಗಳಿದ್ದಳು. ಗಂಡ ಹೆಂಡತಿ ನಡುವೆ ಯಾವಾಗಲೂ ಜಗಳವಾಗುತ್ತಿತ್ತಂತೆ. ಬುಧವಾರದಂದೂ ಅದೇ ರೀತಿಯ ಜಗಳವಾಗಿದೆ. ಸಿಟ್ಟಿಗೆದ್ದ ಗಂಡ ಅದೇ ದಿನ ಅಲ್ಲಿಂದ ಹೊರಟು ಬಟ್ಟೆ ಮಾರುವುದಕ್ಕೆ ಹೊರ ಊರಿಗೆ ಹೋಗಿದ್ದಾನೆ.

ಮನೆಯಲ್ಲಿ ಮಕ್ಕಳೊಂದಿಗೆ ಇದ್ದ ಅಂಜುಮ್​ ಮಾಡಬಾರದ ನಿರ್ಧಾರ ಮಾಡಿದ್ದಾಳೆ. ರಾತ್ರಿ ಮಕ್ಕಳನ್ನು ಹಾಸಿಗೆ ಮೇಲೆ ಮಲಗಿಸಿ, ಕುತ್ತಿಗೆ ಕೊಯ್ದಿದ್ದಾಳೆ. ಅದಾದ ನಂತರ ಅದೇ ಮೃತದೇಹಗಳೊಂದಿಗೆ ರಾತ್ರಿ ಕಳೆದಿದ್ದಾಳೆ. ಬೆಳಗ್ಗೆ ಎದ್ದು ಜೋರಾಗಿ ಅಳಲಾರಂಭಿಸಿದ್ದಾಳೆ. ನಾನೇ ನನ್ನ ಮಕ್ಕಳನ್ನು ಕೊಂದೆ ಎಂದು ಜೋರಾಗಿ ಕೂಗಿ ಹೇಳಲಾರಂಭಿಸಿದ್ದಾಳೆ. ಊರವರು ಮನೆ ಬಳಿ ಬಂದು ನೋಡಿದ್ದಾರೆ. ಮನೆಯ ಕೋಣೆಯಲ್ಲಿ ಒಳಗಿನಿಂದ ಲಾಕ್​ ಮಾಡಿಕೊಂಡಿದ್ದ ಅಂಜುಮ್​ ತನ್ನ ಮಕ್ಕಳನ್ನು ತಾನೇ ಕೊಂದಿರುವುದಾಗಿ ಹೇಳಿದ್ದಾಳೆ.

ಇದಾದ ನಂತರ ಊರವರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆಗೆಸಿ, ಅಂಜುಮ್​ನನ್ನು ವಶಕ್ಕೆ ಪಡೆದಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net