

ಬೆಂಗಳೂರು: ‘ಹಿಂದಿ ದಿವಸ’ ಅಂಗವಾಗಿ ಸೋಮವಾರ ರಾಜ್ಯಾದ್ಯಂತ ಪರ- ವಿರೋಧದ ಚರ್ಚೆಗಳು ನಡೆದಿದ್ದು, ಕನ್ನಡಪರ ಹೋರಾಟಗಾರರು ಬೀದಿಗಿಳಿದು ಹಿಂದಿ ಹೇರಿಕೆ ವಿರೋಧಿಸುವುದಾಗಿ ದನಿ ಎತ್ತಿದರು.
ರಾಜ್ಯದಲ್ಲಿ ಒಂದು ವಾರದಿಂದಲೇ ಹಿಂದಿ ಹೇರಿಕೆ ಹಾಗೂ ಹಿಂದಿ ದಿವಸ್ಗೆ ಕನ್ನಡಪರ ಹೋರಾಟಗಾರು, ರಾಜಕಾರಣಿಗಳು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ‘ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ಉದ್ಯೋಗಿಗಳು ತಮ್ಮ ಕಚೇರಿಗಳಲ್ಲಿ ಸ್ಥಳೀಯ ಭಾಷೆ ಜತೆಗೆ ಹಿಂದಿಯಲ್ಲೂ ವ್ಯವಹರಿಸಬೇಕು’ ಎಂಬ ಟ್ವೀಟ್, ವಿಡಿಯೋ ಸಂದೇಶ ವಿವಾದಕ್ಕೆ ಕಾರಣವಾಗಿದ್ದು, ಜಾಲತಾಣದಲ್ಲಿ ಕನ್ನಡಿಗರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
‘ಕರ್ನಾಟಕದಿಂದ ಭಾರತ’, ‘ಹಿಂದಿ ಭಾಷೆಯ ಪಕ್ಷವಾದ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆಗಳು ಪ್ರತಿಭಟನೆಯಲ್ಲಿ ಮೊಳಗಿಸಿದರು. ಕೆಲವು ಕೇಂದ್ರ ಸ್ವಾಮ್ಯದ ಕಚೇರಿಗಳಲ್ಲಿ ಹಿಂದಿ ನಾಮಫಲಕವನ್ನು ಕಿತ್ತೆಸೆದು, ತುಳಿದು ಆಕ್ರೋಶ ವ್ಯಕ್ತಪಡಿಸಲಾಯಿತು. ಭಾರತಕ್ಕೆ ಯಾವುದೇ ಒಂದು ರಾಷ್ಟ್ರ ಭಾಷೆ ಇರುವುದಿಲ್ಲ. ಆದರೆ ಅಧಿಕೃತ ಭಾಷಾ ಕಾಯ್ದೆ ಹೆಸರಿನಲ್ಲಿ ಹಿಂದಿಯೇತರ ಭಾರತೀಯರ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುವ ಕಾರ್ಯಕ್ರಮ ಸಂವಿಧಾನ ಜಾರಿಯಾದಾಗಿನಿಂದಲೂ ನಡೆದುಕೊಂಡು ಬಂದಿದೆ. ಈ ಸರ್ಕಾರದ ಅವಧಿಯಲ್ಲೂ ಮುಂದುವರಿದಿದೆ. ಹಿಂದಿ ದಿವಸ, ಹಿಂದಿ ಸಪ್ತಾಹ, ಹಿಂದಿ ಪಕ್ವಾಡದಂಥ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು, ಸೆ.14ರ ಹಿಂದಿ ದಿವಸ ಕೊನೆಯಾಗಬೇಕು, ಯಾವ ಭಾಷೆಗೂ ಹೆಚ್ಚಿನ ಮಾನ್ಯತೆ ನೀಡಬಾರದು, ಯಾವ ಭಾಷೆಯನ್ನೂ ನಿರ್ಲಕ್ಷಿಸಬಾರದು ಎಂದು ಸಂಘಟನೆಗಳು ಕೇಂದ್ರವನ್ನು ಆಗ್ರಹಿಸಿವೆ. ಇದನ್ನೂ ಓದಿ: ಯುಎಸ್ನಲ್ಲಿ ಆಂಧ್ರದ ಯುವತಿ ಸಾವು; ಭಾವಿ ಪತಿಯೊಂದಿಗೆ ಜಲಪಾತ ನೋಡಲು ಹೋಗಿದ್ದಳು…!
ಕೆಲವು ನಟರು ‘ಹಿಂದಿ ಗೊತ್ತಿಲ್ಲ ಹೋಗಲೋ’, ‘ನನಗೆ ಹಿಂದಿ ಬರಲ್ಲ ಹೋಗಪ್ಪ’, ‘ನಾನು ಕನ್ನಡಿಗ’ ಎಂದು ಟಿ-ಶರ್ಟ್ ತೊಟ್ಟು ಪ್ರತಿರೋಧ ತೋರಿಸಿದರು. ರಾಜಕೀಯವಾಗಿಯೂ ಕೆಲವು ನಾಯಕರು ಅಸಮಾಧಾನ ಹೊರಹಾಕಿದರು. ಇತ್ತೀಚೆಗೆ ಹಿಂದಿಯನ್ನು ಸಿದ್ಧಾಂತದ ವಿಚಾರವಾಗಿ ಪರಿವರ್ತಿಸಲಾಗಿದೆ ರಾಷ್ಟ್ರೀಯತೆ, ದೇಶಭಕ್ತಿ, ಹಿಂದುತ್ವದೊಂದಿಗೆ ಸಮೀಕರಿಸಲಾಗಿದೆ. ಇಂಥ ಪ್ರಯತ್ನಗಳಿಗಿಂತಲೂ ದೊಡ್ಡ ದೇಶದ್ರೋಹ ಇನ್ನೊಂದಿಲ್ಲ. ವಿವಿಧ ಭಾಷೆಗಳನ್ನು ಆಡುವ ಭಾರತೀಯರ ದೇಶಭಕ್ತಿಯನ್ನು ಭಾಷೆ ಮೂಲಕ ಅಳೆಯುವುದು ಅಪಚಾರವೇ ಸರಿ. ಇದು ಸಮಗ್ರತೆಗೆ ಎಸೆದ ಸವಾಲು ಎಂದು ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ಭಾರತದಲ್ಲಿರುವ ಭಾಷಾ ವೈವಿಧ್ಯವೇ ದೇಶದ ಏಕತೆ ಮತ್ತು ಶಕ್ತಿ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಹಿಂದಿ ಸೇರಿ ಇತರ ಭಾಷೆಗಳ ಅಭಿವೃದ್ಧಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಹಿಂದಿ ದಿವಸ್ ಅಂಗವಾಗಿ ಟ್ವೀಟ್ ಹಾಗೂ ವಿಡಿಯೋ ಮೂಲಕ ಸಂದೇಶ ನೀಡಿರುವ ಷಾ, ಹಿಂದಿ ಭಾಷೆ, ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಿಂದಲೂ ದೇಶದ ಏಕತೆ ಮತ್ತು ಸಮಗ್ರತೆಯ ಪರಿಣಾಮಕಾರಿ ಸಂವಹನ ಮಾಧ್ಯಮವಾಗಿದೆ ಎಂದಿದ್ದಾರೆ. ಜತೆಗೆ ಒಂದು ದೇಶವನ್ನು ಅದರ ಗಡಿ, ಭೌಗೋಳಿಕತೆಯಿಂದ ಗುರುತಿಸಲಾಗುತ್ತದೆ. ಆದರೆ ದೇಶದ ಪ್ರಮುಖ ಗುರುತು ಭಾಷೆ ಮಾತ್ರ. ಹಲವು ಭಾಷೆ, ಸಂಸ್ಕೃತಿಯ ವೈವಿಧ್ಯತೆಯಿಂದ ಕೂಡಿರುವ ಭಾರತವನ್ನು ಹಿಂದಿ ಭಾಷೆ ಹಲವು ಶತಮಾನಗಳಿಂದ ಒಟ್ಟುಗೂಡಿಸಿದೆ ಎಂದು ತಿಳಿಸಿದ್ದಾರೆ.
ಕನ್ನಡ ನಮ್ಮ ರಾಜ್ಯ ಭಾಷೆ. ಸುಪ್ರೀಂಕೋರ್ಟ್ 5ನೇ ತರಗತಿ ವರೆಗೂ ಮಾತೃಭಾಷೆಯಲ್ಲೇ ಶಿಕ್ಷಣ ಆಗಬೇಕು ಎಂದು ಹೇಳಿದೆ. ಕನ್ನಡ ನಮ್ಮ ಮಾತೃಭಾಷೆ. ಬೇಕಿದ್ದರೆ ಹಿಂದಿ ಭಾಷೆ ಕಲಿಯಲಿ. ಅದಕ್ಕೆ ಅಭ್ಯಂತರವಿಲ್ಲ. ಆದರೆ ಹಿಂದಿ ಹೇರಬಾರದು. | ಸಿದ್ದರಾಮಯ್ಯ ಮಾಜಿ ಸಿಎಂ ಸಂವಿಧಾನದ ಪರಿಚ್ಛೇದ 343, 344, 345ರಲ್ಲಿ ಹಿಂದಿಗೆ ಉತ್ತೇಜನ ನೀಡುವ ಗೊಂದಲಕಾರಿ ಅಂಶಗಳಿವೆ. ಇದೇ ಗುರಾಣಿ ಹಿಡಿದು ಹಿಂದಿ ಹೇರಿಕೆ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಸಂವಿಧಾನವನ್ನು ಬದಲಿಸಲೆಂದೇ ಬಂದಿರುವ ಬಿಜೆಪಿಗರು, ಒಂದೊಳ್ಳೆಯ ಕಾರಣಕ್ಕಾಗಿ ಇದನ್ನು ಬದಲಿಸಲಿ. ಈ ಮೂಲಕ ಕನ್ನಡವೂ ಸೇರಿ ಅನ್ಯಭಾಷೆಗಳ ಅಸ್ಮಿತೆಯನ್ನು ರಕ್ಷಿಸಲಿ. ಹಿಂದಿಯನ್ನು ಹಿಂದುತ್ವದ ಜತೆಗೆ ಸಮೀಕರಿಸುತ್ತಿರುವುದು ವಿಷಾದನೀಯ. | ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ
ಬೆಂಗಳೂರು: ಹಿಂದಿ ದಿವಸ್ ಆಚರಣೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹೊರಭಾಗದಲ್ಲಿ ಅಳವಡಿಸಲಾಗಿದ್ದ ಹಿಂದಿ ನಾಮಫಲಕ ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದವು. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಪ್ರಾದೇಶಿಕ ಕಚೇರಿಯಲ್ಲಿ ಹಿಂದಿ ದಿವಸ್ ಆಚರಿಸಲಾಯಿತು. ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ಕುಮಾರ್ ವರ್ವ ವಿಭಾಗದ ಆಂತರಿಕ ಪತ್ರಿಕೆ ದೀಪ್ ಶಿಖಾ ಬಿಡುಗಡೆ ಮಾಡಿದರು. ಇದನ್ನೂ ಓದಿ: ಕಚೇರಿ ಬಳಿಕ ಕಂಗನಾ ಮನೆ ಕೆಡವಲು ಮುಂಬೈ ಪಾಲಿಕೆ ನಿರ್ಧಾರ!
ಮಂಡ್ಯ: ಶಿಕ್ಷಣದಲ್ಲಿ ಯಾವ ಭಾಷೆಯ ನ್ನಾದರೂ ಆಯ್ಕೆ ಮಾಡಿಕೊಳ್ಳಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅವಕಾಶ ನೀಡಲಾಗಿದೆ. 22 ಭಾಷೆಗಳಲ್ಲಿ ಯಾವ ಭಾಷೆಯ ಲ್ಲಾದರೂ ಕಲಿಯಬಹುದು ಎಂಬ ಆಯ್ಕೆ ಇದೆ. ತ್ರಿಭಾಷಾ ಸೂತ್ರದಲ್ಲಿ ಯಾವುದೇ ರೀತಿಯ ಹೇರಿಕೆ ಇಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದರು. ಹಿಂದಿ ನೆಪದಲ್ಲಿ ಕೇಂದ್ರ-ರಾಜ್ಯದ ನಡುವೆ ಸಂಘರ್ಷ ತಂದಿಡುವ ಷಡ್ಯಂತ್ರ ನಡೆಯುತ್ತಿದೆ. ನಾನೂ ಕನ್ನಡಿಗ, ನನಗೂ ಕನ್ನಡ ಭಾಷೆ ಬೇಕು. ರಾಜ್ಯದಲ್ಲಿ ಹಿಂದಿ ಹೇರಿಕೆ ವಿಚಾರದಲ್ಲಿ ಕನ್ನಡ ಶಾಲೆ ಮುಚ್ಚಿರುವ ಒಂದು ಉದಾಹರಣೆ ತೋರಿಸಲಿ. ಇಂಗ್ಲಿಷ್ ವಿಚಾರದಲ್ಲಿ ಸಾವಿರಾರು ಶಾಲೆಗಳನ್ನು ಮುಚ್ಚಲಾಗಿದೆ. ಇಂಥ ಆಷಾಢಭೂತಿ ಮನೋಭಾವ ಏಕೆ ಎಂದು ಪ್ರಶ್ನಿಸಿದರು.