

ಮುಂಬೈ: ಇತ್ತೀಚೆಗಷ್ಟೇ ಬಾಂದ್ರಾದ ಪಾಲಿ ಹಿಲ್ನಲ್ಲಿರುವ ನಟಿ ಕಂಗನಾ ರಣಾವತ್ ಅವರ ಕಚೇರಿಯ ಕೆಲ ಭಾಗ ಅತಿಕ್ರಮಣವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಮುಂಬೈ ಮಹಾನಗರ ಪಾಲಿಕೆ ಒಡೆದು ಹಾಕಿತ್ತು. ಇದೀಗ ಕಂಗನಾ ಮನೆಯನ್ನು ಮುಂಬೈ ಮಹಾನಗರ ಪಾಲಿಕೆ ಟಾರ್ಗೇಟ್ ಮಾಡಿದೆ!
ಇದನ್ನೂ ಓದಿ: ಮುಂಬೈ ಬಿಟ್ಟು ತವರೂರಿಗೆ ವಾಪಸ್ಸಾದ ಕಂಗನಾ!
ಹೌದು, ಇದೀಗ ಮುಂಬೈನ ಖರ್ ಪ್ರದೇಶದಲ್ಲಿರುವ ಕಂಗನಾ ಮನೆಗೂ ಬಿಎಂಸಿ ನೋಟಿಸ್ ರವಾನಿಸಿದ್ದು, ಅತಿಕ್ರಮಣವಾದ ಮನೆಯನ್ನು ತೆರೆವುಗೊಳಿಸಿ ಎಂದಿದೆ. ಖರ್ ಪ್ರದೇಶದ ಬಹು ಮಹಡಿಯ ಅಪಾರ್ಟ್ಮೆಂಟ್ನಲ್ಲಿ ಮೂರು ಫ್ಲಾಟ್ಗಳು ಕಂಗನಾ ಅವರದ್ದಾಗಿವೆ.
ಮೊದಲ ಫ್ಲಾಟ್ 797 ಚದರ ಅಡಿ ವಿಸ್ತಿರ್ಣ, ಎರಡನೆಯದ್ದು 711 ಚದರ ಅಡಿ ಮತ್ತು ಮೂರನೇಯ ಫ್ಲಾಟ್ 459 ಚದರ ಅಡಿ ವಿಸ್ತೀರ್ಣ ಹೊಂದಿದೆ. 2019ರ ಮಾರ್ಚ್ 8ರಂದು ಕಂಗನಾ ಹೆಸರಿನಲ್ಲಿ ಈ ಮೂರು ಕಟ್ಟಡಗಳು ನೋಂದಣಿಯಾಗಿವೆ. ಕಟ್ಟಡದ ಪ್ಲಾನ್ನಲ್ಲಿ ಇಲ್ಲದ ಒಂದಷ್ಟು ಭಾಗಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗಿದ್ದು, ಶೀಘ್ರದಲ್ಲಿ ಅವೆಲ್ಲವನ್ನು ತೆರವುಗೊಳಿಸುವಂತೆ ನೋಟಿಸ್ನಲ್ಲಿ ಆದೇಶಿಸಿದೆ.
ಕಂಗನಾ ಅವರ ನಿವಾಸದ ಅನಧಿಕೃತ ಭಾಗಗಳಿಗೆ ಸಂಬಂಧಿಸಿದ ವಿಚಾರಣೆ ಸೆಪ್ಟೆಂಬರ್ 25 ರಂದು ನಡೆಯಲಿದ್ದು, ಸ್ವತಃ ಕಂಗನಾ ಈ ವಿಚಾರಣೆಗೆ ಹಾಜರಾಗಲಿದ್ದಾರೆ. (ಏಜೆನ್ಸೀಸ್)