

ಬೆಂಗಳೂರು: ಸರ್ಕಾರದ ವಿರುದ್ಧ ಸಮರ ಸಾರಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(H D Kumaraswamy) ಶೀಘ್ರದಲ್ಲೇ ಹಳೆ ಮೈಸೂರು ಭಾಗದಲ್ಲಿ ಪ್ರವಾಸ(Kumaraswamy to visit Old Mysore soon)ಕೈಗೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಪಕ್ಷದ ಮುಖಂಡರಿಗೆ ಮಾಹಿತಿ ನೀಡಿದ್ದಾರೆ. ಹಳೆ ಮೈಸೂರು ಭಾಗದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಶೀಘ್ರವೇ ಪ್ರವಾಸ ಮಾಡುತ್ತೇನೆ. ಸರ್ಕಾರದ ವಿರುದ್ಧದ ಹೋರಾಟಕ್ಕೆ ನೀವೆಲ್ಲರೂ ಸಜ್ಜಾಗಬೇಕು. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಪಕ್ಷ ಸಂಘಟನೆಯಲ್ಲಿ ನಿರ್ಲಕ್ಷ್ಯ ತೋರುವ ಜಿಲ್ಲಾಧ್ಯಕ್ಷರನ್ನು ಮುಲಾಜಿಲ್ಲದೇ ಕಿತ್ತು ಹಾಕಬೇಕು ಎಂದು ಸೂಚಿಸಿದರು. ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಯಾರೂ ಮನಸೋ ಇಚ್ಛೆ ಮಾತನಾಡಬಾರದು. ಮೈತ್ರಿ ಗಟ್ಟಿಯಾಗಿದೆ. ಒಳ್ಳೆಯ ಕೆಲಸಗಳಾಗುತ್ತಿವೆ. ನಾನೂ ಕೂಡ ಅನೇಕ ಕೆಲಸಗಳನ್ನು ಮಾಡಿದ್ದೇನೆ. ಕೆಲವು ಸಂದರ್ಭಗಳಲ್ಲಿ ಒಂಟಿಯಾಗಿ ಇನ್ನು ಕೆಲವು ಸಂದರ್ಭಗಳಲ್ಲಿ ಜಂಟಿಯಾಗಿ ಪಕ್ಷಗಳು ನಡೆಯಬೇಕಾಗುತ್ತದೆ. ಈ ಬಗ್ಗೆ ನಾವು ಮೇಲ್ಮಟ್ಟದಲ್ಲಿ ಚರ್ಚೆ ಮಾಡಿರುತ್ತೇವೆ. ಈ ಬಗ್ಗೆ ಅನಾವಶ್ಯಕವಾಗಿ ಮಾತನಾಡಬಾರದು. ನಾನು ಹೇಗೆ ಹಗಲು ರಾತ್ರಿ ಕೆಲಸ ಮಾಡುತ್ತೇನೋ ಹಾಗೆ ನೀವೂ ಕೆಲಸ ಮಾಡಬೇಕು. ಪಕ್ಷ ಸಂಘಟನೆ ಮಾಡಬೇಕು. ಅನೇಕ ಕಡೆ ಪಕ್ಷದ ಸದಸ್ಯತ್ವ ನೋಂದಣಿ ಸರಿಯಾಗಿ ಆಗಿಲ್ಲ. ಇದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಸರಿಯಾಗಿ ಕೆಲಸ ಮಾಡಿದ ಜಿಲ್ಲಾಧ್ಯಕ್ಷರನ್ನು ಕಿತ್ತು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರದ ವಿರುದ್ಧ ಜಂಟಿ(ಬಿಜೆಪಿ ಜತೆ)ಯಾದರೂ ಸರಿ, ಒಂಟಿಯಾದರೂ ಸರಿ ಹೋರಾಟ ಮಾಡುವುದು ಬಹಳ ಮುಖ್ಯ. ಜನರ ಸಮಸ್ಯೆಗೆ ಪಕ್ಷದ ಶಾಸಕರು, ಸಂಸದರು, ಮುಖಂಡರು, ಕಾರ್ಯಕರ್ತರು ಸ್ಪಂದಿಸಬೇಕು. ಬೇಸಿಗೆ ಸಮೀಪಿಸುತ್ತಿದ್ದು ಕುಡಿಯುವ ನೀರಿನ ತತ್ವಾರ ತಲೆದೋರುತ್ತಿದೆ. ರೈತರು ನಾನಾ ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ. ಇಂತಹ ಜ್ವಲಂತ ಸಮಸ್ಯೆಗಳನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಬಲವಾದ ಹೋರಾಟ ಮಾಡಬೇಕು. ಯಾವುದೇ ಹಂತದಲ್ಲಾಗಲಿ ಮೈತ್ರಿಯಲ್ಲಿ ಸಮಸ್ಯೆ ಉಂಟಾದರೆ ನನ್ನ ಗಮನಕ್ಕೆ ತನ್ನಿ. ನಾನು ಸರಿಪಡಿಸುತ್ತೇನೆ ಎಂದು ಸೂಚಿಸಿದರು.
ಈ ಸಭೆಗೆ 30 ಮಂದಿ ಪಕ್ಷದ ಗಣ್ಯರಿಗೆ ಆಹ್ವಾನ ನೀಡಿದ್ದು, ಆ ಪೈಕಿ 28 ಮಂದಿ ಹಾಜರಾಗಿದ್ದರು. ಸಂಸದ ಮಲ್ಲೇಶ್ ಬಾಬು, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪುರ, ವೆಂಕಟಗೌಡ ನಾಡಗೌಡ, ವಿಧಾನಸಭೆ ಜೆಡಿಎಸ್ ನಾಯಕ ಸುರೇಶ್ ಬಾಬು, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಎಂಎಲ್‌ಸಿ ತಿಪ್ಪೇಸ್ವಾಮಿ ಮತ್ತಿತರ ಮುಖಂಡರು ಭಾಗವಹಿಸಿದ್ದರು.