

ಕೀರ್ತಿನಾರಾಯಣ ಸಿ. ಬೆಂಗಳೂರು
ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರ ವಿಚಾರಣೆ ತೀವ್ರಗೊಂಡ ಬೆನ್ನಲ್ಲೇ ಹಲವು ರಾಜ್ಯಗಳಿಗೆ ಉಗ್ರ ಬೇರು ವ್ಯಾಪಿಸಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ದೊಡ್ಡಮಟ್ಟದಲ್ಲಿ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿರುವ ಅನುಮಾನದ ಬೆನ್ನತ್ತಿರುವ ಎನ್ಐಎ, ರಹಸ್ಯ ಭೇದಿಸುವ ನಿಟ್ಟಿನಲ್ಲಿ ತನಿಖೆ ತೀವ್ರಗೊಳಿಸಿದೆ.
ಕೆಫೆ ಸ್ಪೋಟದ ಹಿಂದೆ ಇನ್ನಷ್ಟು ವಿದ್ರೋಹಿಗಳ ಕೈವಾಡವಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಇದಲ್ಲದೆ ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಪ. ಬಂಗಾಳ, ಕೇರಳ, ಆಂಧ್ರ, ತೆಲಂಗಾಣ ಸೇರಿ ಹಲವು ರಾಜ್ಯಗಳಲ್ಲಿ ಉಗ್ರರ ಸ್ಲೀಪರ್ ಸೆಲ್ಗಳಿರುವುದು ಎನ್ಐಎ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಇದೀಗ ಬಂಧಿತರ ವಿಚಾರಣೆ ಮೂಲಕವೇ ಎಲ್ಲ ಸ್ಲೀಪರ್ ಸೆಲ್ಗಳ ಪತ್ತೆಗೆ ಎನ್ಐಎ ಮುಂದಾಗಿದೆ. ಕೆಫೆ ಸ್ಫೋಟ ಪ್ರಕರಣದಲ್ಲಿ ಲಾಜಿಸ್ಟಿಕ್ ನೆರವು ನೀಡಿದ ಮುಜಾಮಿಲ್ ಷರೀಫ್, ಮಾಝು ಮುನೀರ್ ಅಹ್ಮದ್, ಪ್ರಮುಖ ಸಂಚುಕೋರ ಅಬ್ದುಲ್ ಮತೀನ್ ಹಾಗೂ ಬಾಂಬ್ ಇಟ್ಟಿದ್ದ ಮುಸಾವಿರ್ ಹುಸೇನ್ ಶಾಜಿಬ್ ಎನ್ಐಎ ಬಲೆಗೆ ಬಿದ್ದಿದ್ದಾರೆ. ಇವರ ಬಂಧನಕ್ಕೂ ಮುನ್ನ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದ ಎನ್ಐಎ ಅಧಿಕಾರಿಗಳಿಗೆ ದೇಶದ ಹಲವು ರಾಜ್ಯಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನೆಸಗಲು ವ್ಯವಸ್ಥಿತ ಸಂಚು ರೂಪಿಸಿಕೊಂಡಿರುವ ವಿಚಾರ ಗೊತ್ತಾಗಿದೆ.
ಮಾ.27ರಂದು ಕರ್ನಾಟಕ, ತಮಿಳುನಾಡು ಹಾಗೂ ಉತ್ತರಪ್ರದೇಶದ 18 ಸ್ಥಳಗಳ ಮೇಲೆ ಎನ್ಐಎ ದಾಳಿ ನಡೆಸಿತ್ತು. ಪರಿಶೀಲನೆಯಲ್ಲಿ ಭಯೋತ್ಪಾದಕ ಚಟುವಟಿಕೆ ಸಂಚಿಗೆ ಸಂಬಂಧಪಟ್ಟಂತೆ ಎಲೆಕ್ಟ್ರಾನಿಕ್ಸ್ ವಸ್ತು ಸೇರಿ 75ಕ್ಕೂ ಹೆಚ್ಚು ಸಾಕ್ಷ್ಯ ಲಭಿಸಿರುವ ಬಗ್ಗೆ ಎನ್ಐಎ ಅಧಿಕಾರಿಗಳು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ. ಬಂಧಿತ ನಾಲ್ವರು ಶಂಕಿತ ಉಗ್ರರ ಕೃತ್ಯಕ್ಕೆ ಇನ್ನೂ ಹಲವರು ನೆರವು ಕೊಟ್ಟಿದ್ದಾರೆ. ಆರೋಪಿಗಳು ಉಳಿದುಕೊಳ್ಳಲು ಆಶ್ರಯ ಕೊಟ್ಟಿರುವುದೂ ಸಹ ಎನ್ಐಎ ತನಿಖೆಯಲ್ಲಿ ದೃಢಪಟ್ಟಿದೆ. ಎಲ್ಲರನ್ನು ಪತ್ತೆಹಚ್ಚಬೇಕಿದೆ ಎಂದು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೂ ಮಾಹಿತಿ ನೀಡಿದ್ದು, ಕಸ್ಟಡಿಗೆ ಪಡೆದಿರುವ ಶಂಕಿತರ ವಿಚಾರಣೆ ಮೂಲಕ ಅವರಿಗೆ ನೆರವು ಹಾಗೂ ಆಶ್ರಯ ಕೊಟ್ಟವರ ವಿವರಗಳನ್ನು ಎನ್ಐಎ ಸಂಗ್ರಹಿಸುತ್ತಿದೆ.
ಆರ್ಥಿಕ ನೆರವಿಗೆ ಐಸಿಸ್ ನೇಮಕ: ಕರ್ನಾಟಕ ಐಸಿಸ್ ಮಾಡ್ಯುಲ್ ಮುಖ್ಯಸ್ಥನಾಗಿದ್ದ ಅಬ್ದುಲ್ ಮತೀನ್ ತಾಹಾ, ಯುವಕರ ಮನ ಪರಿವರ್ತಿಸಿ ಐಸಿಸ್ಗೆ ನೇಮಕಗೊಳಿಸುತ್ತಿದ್ದ. ನಂತರ ಅವರ ಐಡೆಂಟಿಟಿ ಬಳಸಿಕೊಂಡೇ ಬೇರೆಬೇರೆ ಮಾರ್ಗಗಳಲ್ಲಿ ಕ್ರಿಪ್ಟೋ ಕರೆನ್ಸಿ ಮೂಲಕ ಉಗ್ರ ಕೃತ್ಯಗಳಿಗೆ ಬೇಕಾದಂತಹ ಆರ್ಥಿಕ ನೆರವನ್ನು ಮತ್ತೊಬ್ಬ ಶಂಕಿತ ಉಗ್ರ ಮುಜಾಮಿಲ್ ಷರೀಫ್ಗೆ ನೀಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಲಾಡ್ಜ್, ಗೆಸ್ಟ್ ಹೌಸ್ನಲ್ಲೇ ವಾಸ: ರಾಮೇಶ್ವರಂ ಕೆಫೆ ಸ್ಪೋಟದ ಮಾಸ್ಟರ್ವೆುೖಂಡ್ಗಳಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಾಜಿಬ್ ಖಾಸಗಿ ಲಾಡ್ಜ್ ಹಾಗೂ ಗೆಸ್ಟ್ ಹೌಸ್ಗಳಲ್ಲೇ ಉಳಿದುಕೊಳ್ಳುತ್ತಿದ್ದರು. ಪೊಲೀಸರು ಅಥವಾ ಎನ್ಐಎ ಅಧಿಕಾರಿಗಳಿಗೆ ಸುಲಭವಾಗಿ ಮಾಹಿತಿ ಸೋರಿಕೆಯಾಗಿ ದಾಳಿ ಮಾಡಲು ಸಾಧ್ಯವಿಲ್ಲದಂತಹ ಜಾಗಗಳಲ್ಲಿರುವ ಲಾಡ್ಜ್ ಮತ್ತು ಗೆಸ್ಟ್ ಹೌಸ್ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಹೀಗಾಗಿ 42 ದಿನಗಳ ಕಾಲ ತಲೆಮರೆಸಿಕೊಳ್ಳಲು ಸಾಧ್ಯವಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಕ್ಯಾಶ್ ಪಾವತಿ, ಕನ್ನಡದಲ್ಲೇ ಮಾತು!: ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಾಜಿಬ್ ಕೋಲ್ಕತಾದ ಡ್ರೀಮ್ ಗೆಸ್ಟ್ ಹೌಸ್ನಲ್ಲಿ ಅಡಗಿದ್ದಾಗ ಎನ್ಐಎ ಬಲೆಗೆ ಬಿದ್ದಿದ್ದರು. ಇಬ್ಬರೂ ಆರೋಪಿಗಳು ಪೊಲೀಸರಿಗೆ ಸುಳಿವು ಸಿಗಬಾರದೆಂಬ ಕಾರಣಕ್ಕೆ ನಗದು ರೂಪದಲ್ಲೇ ಎಲ್ಲ ಬಿಲ್ ಪಾವತಿಸುತ್ತಿದ್ದರು. ಜತೆಗೆ ಅವರು ಕನ್ನಡ ಮಾತನಾಡುತ್ತಿದ್ದರು. ಮಾ.25ಕ್ಕೆ ಐಡಿ ಕಾರ್ಡ್ ಕೊಟ್ಟು ರೂಂ ಪಡೆದಿದ್ದರು. ಇಬ್ಬರೂ ಒಂದೇ ರೂಂನಲ್ಲಿ ಉಳಿದುಕೊಂಡಿದ್ದರು ಎಂದು ಗೆಸ್ಟ್ಹೌಸ್ನ ರಿಸೆಪ್ಶನಿಸ್ಟ್ ಅಶ್ರಫ್ ಅಲಿ ಎನ್ಐಎಗೆ ಮಾಹಿತಿ ನೀಡಿದ್ದಾರೆ.