

ಕಾವ್ಯಗಳಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು ರಸಕ್ಕೆ ಸಂಬಂಧಿಸಿದಂತೆ ಶೈಲಿಯನ್ನು ಬಳಸುವುದು ರೂಢಿಯಲ್ಲಿದೆ. ವಿಷಯ-ರಸಗಳಿಗೆ ಹೊಂದಿಕೆಯಾಗುವಂತೆ ಛಂದಸ್ಸುಗಳ ಬಳಕೆ ಮತ್ತು ರಾಗ, ತಾಳಗಳ ಬಳಕೆ ಕೂಡ ಕಂಡುಬರುತ್ತದೆ. ಯೋಗವಾಸಿಷ್ಠವು ಒಂದು ಶಾಸ್ತ್ರಗ್ರಂಥವಾಗಿದ್ದರೂ ಇಂತಹ ಕಾವ್ಯಗುಣಗಳನ್ನು ಕೂಡ ನಾವಿಲ್ಲಿ ಕಾಣಬಹುದಾಗಿದೆ.
ಸಂಸ್ಕೃತದಲ್ಲಿ ಯೋಗವಾಸಿಷ್ಠವನ್ನು ಅರ್ಥಮಾಡಿಕೊಂಡು ಓದಿದಾಗ ಇಂತಹ ಸಂಗತಿಗಳು ಗಮನಕ್ಕೆ ಬರುತ್ತವೆ. ಕನ್ನಡದ ಗದ್ಯಾನುವಾದದಲ್ಲಿ ಈ ಗುಣವನ್ನು ತೋರಿಸುವುದು ಸಾಧ್ಯವಿಲ್ಲ. ಶ್ರೀವಸಿಷ್ಠರ ಸರ್ವಜ್ಞತ್ವ ಮತ್ತು ಗ್ರಂಥಕಾರರಾದ ವಾಲ್ಮೀಕಿ ಮಹರ್ಷಿಗಳ ಕವಿತಾ ಚಾತುರ್ಯ ಗೊತ್ತಾಗಲು ಈ ಸಂಗತಿಯನ್ನು ತಿಳಿಸುತ್ತಿದ್ದೇವೆ.
ಪ್ರಕೃತವನ್ನು ಅನುಸರಿಸೋಣ; ಲೀಲಾಮಹಾರಾಣಿಯ ಪತಿಯಾಗಿದ್ದ ವಿದೂರಥನ ಕಡೆಯವರು ಮತ್ತು ಸಿಂಧುರಾಜನ ಕಡೆಯವರ ಜೊತೆ ಘೊರ ಯುದ್ಧ ನಡೆಯುತ್ತಿದೆ. ತುಂಬಾ ಪ್ರಾಣಹಾನಿಗಳು ಆಗಿವೆ. ಈ ಸ್ಥಿತಿಯಲ್ಲಿ ನಡೆಯುತ್ತಿರುವ ದ್ವಂದ್ವಯುದ್ಧವನ್ನು ವರ್ಣಿ ಸುತ್ತಾ ಶ್ರೀವಸಿಷ್ಠರು ಹೇಳಿದರು - ‘ಶ್ರೀರಾಮ! ದ್ವಂದ್ವಯುದ್ಧದಲ್ಲಿ ತೊಡಗಿಕೊಂಡಿರುವ ದರದ ಎಂಬ ಹೆಸರಿನ ಸೈನಿಕರು ಆನೆಗಳ ದಂತಗಳ ತಿವಿತಕ್ಕೆ ಸಿಲುಕಿಕೊಂಡು ರಕ್ತನದಿಯಲ್ಲಿ ಬಿದ್ದಿರುವ ಮರಗಳ ಎಲೆಗಳಂತಾದರು. ಈ ದರದರು ತುಂಬಾ ಶೂರರು.
ಅನೇಕ ಶತ್ರುಗಳನ್ನು ಈ ಹಿಂದೆ ಸಂಹಾರ ಮಾಡಿದವರು. ಆದರೂ ಈಗ ಅವರ ಸ್ಥಿತಿ ಹೀಗಾಯಿತು. ಚೀನರು (ಎಂಬ ಸೈನಿಕರು) ಬಾಣಗಳ ಹೊಡೆತಕ್ಕೆ ಸಿಲುಕಿ ಪುಡಿಯಾದರು. ಜರ್ಜರಿತವಾದ ದೇಹವುಳ್ಳ ಅವರು ತಮ್ಮ ಭಾರವಾದ ಶರೀರಗಳನ್ನು ಸಮೀಪದ ಸರೋವರದಲ್ಲಿ ಸಮರ್ಪಿಸಿಕೊಂಡರು.’ ‘ಕರ್ಣಾಟರೆಂಬ ವೀರ ಭಟರು (ಕರ್ನಾಟಕದವರಿರಬಹುದು) ನಲದಶೂರರೆಂಬ ಸೈನಿಕರನ್ನು ಕುಂತಾಯುಧದ ಮೂಲಕ ಎದುರಿಸಿದರು. ಅಲ್ಲದೇ ಅವರ ಕುತ್ತಿಗೆಗಳನ್ನು ಕುಂತಾಯುಧದ ಮೂಲಕ ಕತ್ತರಿಸಿದರು. ಇದರಿಂದ ನಲದ ಶೂರರು ತುಂಡುತುಂಡಾಗಿ ನಕ್ಷತ್ರಗಳು ಪಟಪಟನೆ ಉದುರಿ ಬೀಳುವಂತೆ ಬಿದ್ದುಹೋದರು.’
‘ಇನ್ನೊಂದೆಡೆ ದಾಶಕರು ಮತ್ತು ಶಕರು ಪರಸ್ಪರ ದ್ವಂದ್ವಯುದ್ಧವನ್ನು ಮಾಡಿಕೊಳ್ಳುತ್ತಿದ್ದರು. ಸಮುದ್ರದಲ್ಲಿ ಮೊಸಳೆಗಳ ವ್ಯೂಹವು ಮುತ್ತುವಂತೆ ಆನೆಗಳಿಂದ ಮುತ್ತಲ್ಪಟ್ಟಿದ್ದರಿಂದ ಅವರೀರ್ವರ ಆಯುಧಗಳು ನಾಶವಾದವು. ಹಾಗಾಗಿ ಪರಸ್ಪರ ಕೈಗಳಿಂದಲೇ ತಲೆಕೂದಲನ್ನು ಹಿಡಿದುಕೊಂಡು ಕೇಶಾಕೇಶಿ ದ್ವಂದ್ವಯುದ್ಧ ಮಾಡುತ್ತಾ, ಸಿಟ್ಟಿನ ಆವೇಶದಲ್ಲಿ ಘರ್ಜಿಸುತ್ತಿದ್ದರು.’ (ಇಲ್ಲಿ ‘ಮಕರವ್ಯೂಹ ಎಂಬ ಶಬ್ದವು ಚಕ್ರವ್ಯೂಹ ಮೊದಲಾದ ಶಬ್ದಗಳಂತೆ ಯುದ್ಧದ ಒಂದು ವ್ಯೂಹವನ್ನು ಹೇಳುತ್ತಿದೆಯೆಂದು ಕಾಣುತ್ತದೆ.)
‘ಪಾಶವೆಂಬ ದೇಶದ ಸೈನಿಕರು ಪ್ರಯೋಗಿಸಿದ ಶೃಂಖಲೆ (ವೈರಿಗಳನ್ನು ಸಾಮೂಹಿಕವಾಗಿ ಕಟ್ಟಿಹಾಕಲು ಎಸೆಯುವ ಗಟ್ಟಿಯಾದ ಬಲೆ) ಗಳಿಂದ ತಾವು ಬಲೆಯಲ್ಲಿ ಸಿಲುಕಿಕೊಳ್ಳುತ್ತೇವೆಂಬ ಭಯಕ್ಕೆ ಒಳಗಾಗಿ ದಶಾರ್ಣರು ಓಡತೊಡಗಿದರು. ಆದರೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಜೊಂಡು ಹುಲ್ಲಿನ ಬುಡಗಳಲ್ಲಿ ಮೀನುಗಳು ಸಿಲುಕಿಕೊಳ್ಳುವಂತೆ ರಕ್ತದ ಕೆಸರಿನಲ್ಲಿ ಸಿಲುಕಿಕೊಂಡರು.’
‘ತಂಗಣರು ಎಂಬ ಸೈನಿಕರು ದುರ್ಜರ ಸೇನೆಯನ್ನು ನಾಶಪಡಿಸಿದರು. ಆ ಮೂಲಕ ಎತ್ತಿದ ನೂರಾರು ಖಡ್ಗಗಳಿಂದ ಮತ್ತು ಬಾಣಗಳಿಂದ ದುರ್ಜರ ಸ್ತ್ರೀಯರ ಕೇಶಗಳನ್ನು ಲುಂಛನ ಮಾಡಿಸಿದರು.’ (ದುರ್ಜರ ಸೈನಿಕರು ಯುದ್ಧದಲ್ಲಿ ತೀರಿಕೊಂಡಾಗ ಅವರ ಮಡದಿಯರಾದ ಸ್ತ್ರೀಯರು ವಿಧವೆಯರಾದರು.)
‘ನಿಗಡರು ಎಂಬ ಸೈನಿಕರು ಜಾನಪದಾ ಎಂಬ ಸೈನಿಕರ ಮೇಲೆ ಆಕ್ರಮಣ ಮಾಡಿ ಬಾಣಗಳ ಮಳೆಗಳನ್ನು ಸುರಿಸಿದರು. ಈ ನಿಗಡರು, ಪ್ರಾಣಿಗಳು ಶಬ್ದಗಳನ್ನು ಕೇಳಿಸಿಕೊಂಡಾಗ ಕಿವಿಗಳನ್ನು ಎತ್ತರಕ್ಕೆ ನಿಮಿರಿಸಿಕೊಳ್ಳುವಂತೆ, ಶಸ್ತ್ರಗಳನ್ನು ಎತ್ತಿ ಹಿಡಿದವರೆಂದು ಪ್ರಸಿದ್ಧರಾದವರು. ಅಂತಹ ಯುದ್ಧನಿಷ್ಣಾತ ಸೈನಿಕರ ಸಮೂಹದಿಂದ ಪ್ರಯೋಗಿಸಲ್ಪಟ್ಟ ಬಾಣಗಳ ಮಳೆ ಗುಹ ಸೈನಿಕರನ್ನು ಆವರಿಸಿತು. ಈ ಮಳೆಯನ್ನು ಸುರಿಸುತ್ತಿರುವ ನಿಗಡ ವೀರರು ಧರಿಸಿರುವ ಆಯುಧಗಳ ಪ್ರಭೆಗಳು ಮೋಡದಲ್ಲಿರುವ ಮಿಂಚಿನಂತೆ ಕಾಣುತ್ತಿತ್ತು. ಅದರಿಂದ ಮೋಡದಂತೆ ಕಾಣುತ್ತಿರುವ ನಿಗಡ ಸೈನಿಕರು ಮಳೆಗಾಲದ ಮೇಘಗಳು ವನಪ್ರದೇಶಗಳನ್ನು ಮಳೆಯಿಂದ ಆವರಿಸುವಂತೆ, ಬಾಣಗಳಿಂದ ನಿಗಡ ಸೈನಿಕರನ್ನು ಆಚ್ಛಾದಿಸಿದರು. ಇದರಿಂದ ಗುಹ ಸೈನಿಕರು ಸೋತುಹೋದರು.’
‘ಭುಶುಂಡಿ ಎಂಬ ಆಯುಧಗಳ ಮಂಡಲದಿಂದ ಹೊರಬಂದ ನೀಲಿ ಬಣ್ಣದ ಬೆಳಕನ್ನು ನೋಡಿ, ಸೂರ್ಯನು ನೀಲಿ ಬಣ್ಣದ ಕಿರಣಗಳನ್ನು ನೀಡುತ್ತಿರುವಂತೆ ಭಾಸವಾಗಿದ್ದರಿಂದ ಪ್ರಳಯದ ಭೀತಿ ಉಂಟಾಗಿ ಭಯದಿಂದ ತತ್ತರಿಸಿರುವ ಆಭೀರ ಎಂಬ ಸೈನಿಕರ ಮೇಲೆ ಅವರೊಡನೆ ದ್ವಂದ್ವಯುದ್ಧ ಮಾಡುತ್ತಿರುವ ವೈರಿ ಸೈನಿಕರು ಮುಗಿಬಿದ್ದು ನಾಶಪಡಿಸಿದರು. ಹಸಿರಿನ ಹುಲ್ಲುಗಾವಲನ್ನು ಕಂಡು ಗೋ ಸಮೂಹಗಳು ಮುಗಿಬೀಳುವಂತೆ ವೈರಿ ಸೈನಿಕರು ಆಭೀರ ಸೈನಿಕರ ಮೇಲೆ ಮುಗಿಬಿದ್ದು ಆಕ್ರಮಣ ಮಾಡಿದರು.’ (ಸೂರ್ಯನಿಂದ ನೀಲಿ ಬಣ್ಣದ ಕಿರಣ ಹೊರಬರುತ್ತಿರುವುದು ಗೋಚರಿಸಿದರೆ ಅದು ಜನಸಮೂಹ ನಾಶವಾಗುವುದರ ಸೂಚನೆ.)
‘ತಾಮ್ರದಂತಿರುವ ಮೈಬಣ್ಣವನ್ನು ಹೊಂದಿರುವ ಯವನ ಸೇನೆಯನ್ನು ಗೌಡಭಟರೆಂಬ ಸೈನಿಕರು ಉಗುರು, ಕೇಶಗಳನ್ನೆಲ್ಲ ವಿಕೃತಿಗೊಳಿಸುವ ಮೂಲಕ ನಾಶಪಡಿಸಿದರು. ಹೇ ರಾಮ! ಈ ದೃಶ್ಯವನ್ನು ನೋಡಿದರೆ, ಸುಂದರ ಬಂಗಾರದ ಮೈಬಣ್ಣವುಳ್ಳ ನಾಯಿಕೆಯನ್ನು ಗೌಡಭಟ ಎಂಬ ನಾಯಕನು ಉಪಭೋಗಿಸುತ್ತಿರುವಂತೆ ಕಾಣುತ್ತಿತ್ತು. ಭಾಸಕರೆಂಬ ಸೈನಿಕರು ತಂಗಣರೆಂಬ ಸೈನಿಕರನ್ನು ಕಂಕ, ಗೃಧ್ರಗಳಂತಿರುವ ತಮ್ಮ ಬಾಣಗಳಿಂದ ಪುಡಿ ಪುಡಿ ಮಾಡಿದರು. ಭಾಸಕರು ಮರ, ಪರ್ವತಗಳನ್ನು ಕತ್ತರಿಸಿ ಹಾಕಬಲ್ಲ ಚಕ್ರಾಯುಧಗಳನ್ನು ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಪ್ರಯೋಗಿಸಿದರು. ಶಬ್ದಮಾಡುತ್ತಾ ಮೇಲೆರಗಿ ಬರುತ್ತಿರುವ ಚಕ್ರಾಯುಧಗಳ ಆಕ್ರಮಣದಿಂದ ತಂಗಣ ಸೈನಿಕರು ಚೂರು ಚೂರಾಗಿ ಕತ್ತರಿಸಲ್ಪಟ್ಟರು.’
(ಪ್ರತಿಕ್ರಿಯಿಸಿ: vvsudina@gmail.com, info.swarnavalli@gmail.com)