

ಯಾಕೆಂದರೆ ಮಹಾಭಾರತ ಯುದ್ಧದಲ್ಲಿ ಇಷ್ಟೊಂದು ವಿಧದ ಸೈನಿಕರು ಪಾಲ್ಗೊಂಡ ಬಗ್ಗೆ ಉಲ್ಲೇಖವಿದ್ದಂತೆ ಕಾಣುವುದಿಲ್ಲ. ಘೊರವಾದ ಯುದ್ಧವನ್ನು ವರ್ಣಿಸುವುದಕ್ಕೆ ಒಂದು ಮುಖ್ಯವಾದ ಕಾರಣ ಇರುವುದನ್ನು ಮರೆಯಬಾರದು. ಪ್ರಪಂಚದಲ್ಲಿ ಇಂತಹ ಘೊರ ಭಯಂಕರ ದೃಶ್ಯಗಳು ಇರುತ್ತವೆ. ಆದರೂ ಪ್ರಪಂಚ ಪರಮಾರ್ಥ ಸತ್ಯವಲ್ಲ. ಯುದ್ಧದಲ್ಲಿ ತೊಡಗಿಕೊಂಡವರಿಗೆ ಅಥವಾ ಪ್ರತ್ಯಕ್ಷ ನೋಡುತ್ತಿರುವವರಿಗೆ ನಡೆಯುತ್ತಿರುವುದೆಲ್ಲವೂ ಸತ್ಯವೆಂಬುದಾಗಿ ತಿಳಿದುಬಂದರೂ ಎತ್ತರದ ಪರಮಾರ್ಥದ ನೆಲೆಯಲ್ಲಿ ಈ ಜಗತ್ತು ಪರಮಾತ್ಮನ ತೋರಿಕೆಯೇ ಆಗಿದೆ. ಆ ನೆಲೆಗೆ ಏರಿದವರಾದ್ದರಿಂದಲೇ ಜ್ಞಾನಿಗಳು ವಿಚಲಿತರಾಗುವುದಿಲ್ಲ ಮತ್ತು ಅಜ್ಞಾನಿಗಳು ವಿಚಲಿತರಾಗುತ್ತಾರೆ. ಇವುಗಳಿಂದ ಸಾಬೀತಾಗುವುದೇನೆಂದರೆ ಅಜ್ಞಾನವೇ ವಿಚಲಿತರಾಗುವುದಕ್ಕೆ ಕಾರಣ. ಅಲ್ಲದೇ ಜ್ಞಾನ ದೃಷ್ಟಿಯಿಂದ ಅಥವಾ ವಾಸ್ತವಿಕತೆಯ ದೃಷ್ಟಿಯಿಂದ ಈ ಘೊರತೆಯು ತೋರಿಕೆ ಮಾತ್ರ. ಇದನ್ನು ಎಲ್ಲರಿಗೂ ಅರ್ಥ ಮಾಡಿಸಲು ಶ್ರೀವಸಿಷ್ಠರು ಈ ರೀತಿಯಾಗಿ ಯುದ್ಧವನ್ನು ವರ್ಣಿಸುತ್ತಿದ್ದಾರೆ.
‘ಶ್ರೀರಾಮ ! ಸಾಲ್ವ ದೇಶದ ಸೈನಿಕರ ಬಾಣ ಪ್ರಯೋಗವು ಬಿರುಗಾಳಿಯಂತೆ ತೀವ್ರವಾಗಿ ನಡೆದಿತ್ತು. ಸಣ್ಣ ಗಂಟೆಗಳ ಸಾಲಿನಂತೆ ಸದ್ದು ಮಡುತ್ತಾ ಬರುತ್ತಿರುವ ಶಕ್ತಾ್ಯಯುಧದ ಮಳೆಯನ್ನು ಅವರ ಬಾಣಗಳ ಬಿರುಗಾಳಿ ಸಣ್ಣ ತುಂತುರು ಹನಿಗಳಂತೆ ಮಾಡಿತು.(ತೀವ್ರವಾಗಿ ಬರಬೇಕಿದ್ದ ಮಳೆಯನ್ನು ಬಿರುಗಾಳಿಯು ದುರ್ಬಲವನ್ನಾಗಿ ಮಾಡಿದಂತೆ ಸಾಲ್ವ ಸೈನಿಕರ ಬಾಣಗಳು ವೈರಿ ಸೈನಿಕರ ಶಕ್ತಾ್ಯಯುಧಗಳ ಆಕ್ರಮಣವನ್ನು ಹಿಮ್ಮೆಟಿಸಿತು.) ಮತ್ತೊಂದೆಡೆ ಕುಂತಿ ದೇಶದ ಸೈನಿಕರು ಶೈಬ್ಯ ಸೈನಿಕರನ್ನು ಆಕ್ರಮಿಸಿದರು. ಕುಂತಿದೇಶದ ಸೈನಿಕರು ತಮ್ಮ ಕೂದಲುಗಳನ್ನು ತಿರುಗಿಸುತ್ತಾ (ಬಹುಶಃ ಅವರು ದೀರ್ಘವಾದ ತಲೆಗೂದಲು ಉಳ್ಳವರಾಗಿದ್ದರು) ನೀಡಿದ ತೀವ್ರವಾದ ಪೆಟ್ಟಿಗೆ ಶೈಬ್ಯರು ತುಂಡು ತುಂಡಾಗಿ ಖಂಡಿಸಲ್ಪಟ್ಟರು. ಶವವಾಗಿ ಬಿದ್ದಿರುವ ಶೈಬ್ಯರ ದೇಹಗಳಿಂದ ಹೊರಬಂದ ಜೀವಗಳನ್ನು ವಿದ್ಯಾಧರ ದೇವತೆಗಳಂತೆ ಆಕಾಶ ಕೊಂಡೊಯ್ಯುತ್ತಿರುವ ದೃಶ್ಯವನ್ನು ಅಲ್ಲಿದ್ದವರು ನೋಡಿದರು.’
‘ಅಹೀನ ದೇಶದ ಸೈನಿಕರು ಎಷ್ಟು ಧೀರರಾಗಿದ್ದರೆಂದರೆ ಅವರು ಹೆಜ್ಜೆ ಹಾಕುತ್ತಾ ಮುಂದುವರಿದ ಭೂಮಿಯನ್ನೆಲ್ಲಾ ಗೆಲ್ಲುತ್ತಲೇ ಮುಂದೆಬರುತ್ತಿದ್ದರು. ಅವರಿಗೆ ಎದುರಾಗಿ ಬಂದ ಪಾಂಡುನಗರದ ಸೈನಿಕರನ್ನು ತಮ್ಮ ಧೀರ ನಡಿಗೆಯಿಂದಲೇ ಅವರು ಓಡಿಸಿದರು. ಪಾಂಚನದ ಸೈನಿಕರು ವಿಚಿತ್ರವಾದ ರೀತಿಯಲ್ಲಿ ಜೊಂಡುಹುಲ್ಲಿನ ಆಯುಧಗಳ ಮೂಲಕವೇ ತಂದೇಹಕ ಎಂಬ ಸೈನಿಕರನ್ನು ಧ್ವಂಸ ಮಾಡಿದರು. ತಂದೇಹಕರು ಕುಂತಾಯುಧ, ಹಸ್ತಿದಂತ ಮತ್ತು ಮರಗಳನ್ನು ಬಳಸಿ ಯುದ್ಧಮಾಡಲು ಸಮರ್ಥರಾಗಿದ್ದರೂ ಸೋತುಹೋದರು. ಮದಿಸಿದ ಆನೆಗಳು ಮರಗಳನ್ನು ಧ್ವಂಸಮಾಡುವಂತೆ ಅವರು ತಂದೇಹಕರನ್ನು ಸುಲಭವಾಗಿ ನಾಶ ಮಾಡಿದರು. ಬ್ರಹ್ಮಾವತ್ಸನಕ ದೇಶದ ಸೈನಿಕರನ್ನು ನೀಪ ದೇಶದ ಸೈನಿಕರು ಚಕ್ರಾಯುಧಗಳ ಮೂಲಕ ಕತ್ತರಿಸಿ ಹಾಕುತ್ತಿದ್ದರು. ತಮ್ಮ ಕುದುರೆಗಳ ಸಮೇತ ಕತ್ತರಿಸಲ್ಪಟ್ಟು ಭೂಮಿಯ ಮೇಲೆ ಅವರು ಬೀಳುತ್ತಿರುವ ದೃಶ್ಯವನ್ನು ನೋಡಿದರೆ ಹೂವುಗಳಿಂದ ತುಂಬಿಕೊಂಡಿರುವ ಮರಗಳನ್ನು ಗರಗಸದಿಂದ ಕತ್ತರಿಸಿದಾಗ ಬೀಳುವಂತೆ ಕಾಣುತ್ತಿತ್ತು.’
‘ಶ್ವೇತಕಾಕರೆಂಬ ದೇಶದ ಸೈನಿಕರ ತಲೆಗಳನ್ನು ಜಠರ ಎಂಬ ದೇಶದ ಸೈನಿಕರು ಕುಠಾರವೆಂಬ ಆಯುಧದಿಂದ ಕತ್ತರಿಸಿ ಹಾಕಿದರು. ಇದನ್ನು ನೋಡುತ್ತಿರುವ, ಸಮೀಪದಲ್ಲೇ ಇರುವ ಭದ್ರೇಶ (ಭದ್ರ ದೇಶದ ರಾಜ)ನು ಆಗ್ನೇಯಾಸ್ತ್ರವನ್ನು ಪ್ರಯೋಗಿಸುವ ಮೂಲಕ ಜಠರ ಸೇನೆಯ ಬಲವನ್ನು(ಸೇನೆಯನ್ನು) ಸುಟ್ಟುಹಾಕಿದನು. ಕಾಷ್ಠಯೋಧ ಎಂಬ ದೇಶದ ಸೈನಿಕರ ಜೊತೆ ಯುದ್ಧಮಾಡುತ್ತಿರುವ ಮತಂಗ ದೇಶದ ಸೈನಿಕರು ಸೋತು ಸುಣ್ಣವಾದರು. ಅದನ್ನು ನೋಡಿದರೆ ಕಾಷ್ಠಯೋಧವೆಂಬ ಕೆಸರಿನಲ್ಲಿ ಕಟ್ಟಿಹಾಕದಿದ್ದರೂ ಸಿಕ್ಕಿಕೊಂಡು
ಹೂತುಹೋಗುತ್ತಿರುವ ಆನೆಗಳಂತೆ ಕಾಣುತ್ತಿತ್ತು. ಈ ಎರಡು ಸೇನೆಗಳ ಘೊರವಾದ ಯುದ್ಧ ಕೊನೆಗೊಳ್ಳುತ್ತಾ ಬಂದಂತೆ, ಚೆನ್ನಾಗಿ ಉರಿಯುತ್ತಿರುವ ಅಗ್ನಿಯಲ್ಲಿ ಇಂಧನವು ಸುಟ್ಟು ಭಸ್ಮವಾಗುವಂತೆ, ಮತಂಗ ದೇಶದ ಸೈನಿಕರು ಲಯವಾಗಿ ಹೋದರು. ಮಿತ್ರಗರ್ತ ದೇಶದ ಸೈನಿಕರನ್ನು ತ್ರಿಗರ್ತ ದೇಶದ ಸೈನಿಕರು ಹಿಡಿದು, ಹುಲ್ಲುಕಡ್ಡಿಗಳನ್ನು ಎತ್ತಿತಿರುಗಿಸಿ ಎಸೆಯುವಂತೆ, ಎಸೆದರು. ತಲೆಕೆಳಗಾಗಿ ಬೀಳುತ್ತಿರುವ ಮಿತ್ರಗರ್ತರು ಪಾತಾಳ ಲೋಕದವರೆಗೂ ಓಡಿಹೋಗಿ ಪಾತಾಳ ಲೋಕವನ್ನು ಸೇರಿದರು. ಇನ್ನೊಂದೆಡೆ ಮಾಗಧ ಸೈನಿಕರ ಬಲದಲ್ಲಿ ವನಿಲ ದೇಶದ ಸೈನಿಕರು ಸಿಕ್ಕಿಕೊಂಡರು. ಆ ಮಾಗಧ ಸೇನಾ ಸಮೂಹವಾದರೋ ಮಂದವಾದ ಗಾಳಿಯಲ್ಲಿ ಚಲಿಸುತ್ತಿರುವ ಮೋಡದಂತೆ ಹೊಳೆಯುತ್ತಿತ್ತು. ಅವರ ಎದುರಿನಲ್ಲಿ ಮಂದರಾದ(ದುರ್ಬಲರಾದ) ವನಿಲರು ಕೆಸರಿನಲ್ಲಿ ಸಿಕ್ಕಿಕೊಂಡ ಮುದಿ ಆನೆಗಳಂತೆ ಸಿಕ್ಕಿಕೊಂಡರು.’
‘ತಂಗಣ ಸೈನಿಕರ ಜೊತೆ ಯುದ್ಧಮಾಡುತ್ತಿರುವ ಚೇದಿದೇಶದ ಸೈನಿಕರು ವಿವೇಕವನ್ನು ಕಳೆದುಕೊಂಡರು, ಹಾಗೆಯೇ ಜೀವವನ್ನು ಕಳೆದುಕೊಂಡರು. ದಾರಿಯಲ್ಲಿ ಹರಡಿಬಿದ್ದಿರುವ ಹೂವುಗಳು ಬಿಸಿಲಿನಿಂದ ಸೌಕುಮಾರ್ಯ(ಮೃದುತ್ವ)ವನ್ನು ಕಳೆದುಕೊಂಡು ಒಣಗಿ ಹೋಗುವಂತೆ ಚೇದಿದೇಶದ ಸೈನಿಕರು ಒಣಗಿಹೋದರು.’