

ಬೆಂಗಳೂರು: ಆರ್ಥಿಕ ನೆರವು ಕಲ್ಪಿಸಬೇಕೆಂದು ಹಿಂದುಳಿದ ಮತ್ತು ಪರಿಶಿಷ್ಟ ಮಠಗಳ ಮಠಾಧೀಶರ ನಿಯೋಗ ಸರ್ಕಾರವನ್ನು ಎಡತಾಕಿದ್ದು, ಶನಿವಾರ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿರುವ ವಿವಿಧ ಯೋಜನೆಗಳು ಅನುದಾನ ಇಲ್ಲದೇ ಅರ್ಧಕ್ಕೆ ನಿಂತಿವೆ. ಹಾಸ್ಟೆಲ್, ಸಮುದಾಯ ಭವನ ಕಾಮಗಾರಿಗಳನ್ನು ಕೈಗೊಳ್ಳಲು ಆರ್ಥಿಕ ಕೊರತೆ ಇದೆ. ಕೂಡಲೇ ಸಮಸ್ಯೆ ಬಗೆ ಹರಿಸಬೇಕೆಂದು ಮಠಾಧೀಶರ ಒಕ್ಕೂಟದ ಅಧ್ಯಕ್ಷರೂ ಆಗಿರುವ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದ ನಿಯೋಗ ಮನವಿ ಮಾಡಿತು.
ಸಭೆ ಬಳಿಕ ಮಾತನಾಡಿದ ಈಶ್ವರಪ್ಪ, ಸ್ವಾಮೀಜಿಗಳ ಅಭಿಪ್ರಾಯಕ್ಕೆ ತಕ್ಕಂತೆ ಸರ್ಕಾರ ನಡೆದುಕೊಳ್ಳಲಿದೆ. ಈ ಹಿಂದೆ ಸದಾನಂದಗೌಡರು ಸಿಎಂ ಆಗಿದ್ದಾಗ ಹಿಂದುಳಿದ ವರ್ಗಗಳ ಮಠಗಳಿಗೆ ಆರ್ಥಿಕ ನೆರವು ಕೊಟ್ಟಿದ್ದರು. ಅದೇ ರೀತಿ ಈಗಲೂ ಸೌಲಭ್ಯಗಳನ್ನ ಕೊಡಿಸಲಾಗುವುದು. ಉಪ ಚುನಾವಣೆ ಇದೆ ಎಂಬ ಕಾರಣಕ್ಕೆ ಪ್ರತಿಯೊಂದರಲ್ಲೂ ರಾಜಕೀಯ ಹುಡುಕಿದರೆ ಏನು ಮಾಡಲಿ. ಸ್ವಾಮೀಜಿಗಳೇ ಬಂದಾಗ ಬೇಡ ಅನ್ನಲು ಆಗುತ್ತದೆಯೇ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿಕೆ ನೀಡಿ, ಸ್ವಾಮೀಜಿಗಳು ಒಂದೆಡೆ ಸೇರಲು ನಿರ್ಧರಿಸಿದ್ದೆವು. ಹಿಂದುಳಿದ-ದಲಿತ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳು ಭೇಟಿಯಾಗಿ ಸಾಕಷ್ಟು ಜಾಗೃತಿ ಮೂಡಿಸಲು ಕೆಲಸ ಮಾಡುತ್ತಿದ್ದೇವೆ ಎಂದರು.
ಸಭೆಯಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಮಠಗಳ ಬೆಳವಣಿಗೆಗೆ ಸರ್ಕಾರ ಸ್ಪಂದಿಸಬೇಕಿದೆ. ಆಯಾ ಸಮುದಾಯಗಳ ಸ್ಥಿತಿಗತಿಗೆ ತಕ್ಕಂತೆ ಮಠಗಳಿಗೆ ಹಣ ಸಹಾಯ ಮಾಡಬೇಕು. ಹಿಂದುಳಿದ ವರ್ಗಗಳ ಮಠಗಳಿಗೆ ಆರ್ಥಿಕ ನೆರವಿನ ಅಗತ್ಯವಿದೆ ಎಂದಿದ್ದರು.
ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ನಾರಾಯಣ ಗುರುಪೀಠದ ಶ್ರೀ ಆರ್ಯರೇಣುಕಾನಂದ ಮಹಾಸ್ವಾಮೀಜಿ, ಯಾದವ ಮಹಾಸಂಸ್ಥಾನದ ಶ್ರೀ ಕೃಷ್ಣಯಾದವ ಮಹಾಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಶಾಂತವೀರ ಮಹಾಸ್ವಾಮೀಜಿ, ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ, ವೇಮನ ಪೀಠದ ಶ್ರೀ ವೇಮನಾನಂದಪುರಿ ಸ್ವಾಮೀಜಿ, ಕುಂಬಾರ ಗುಂಡಯ್ಯ ಗುರುಪೀಠದ ಶ್ರೀ ಬಸವ ಕುಂಬಾರಗುಂಡಯ್ಯ ಮಹಾಸ್ವಾಮೀಜಿ, ಹಡಪದ ಗುರುಪೀಠದ ಶ್ರೀ ಅನ್ನದಾನು ಭಾರತೀ ಅಪ್ಪಣ್ಣ ಸ್ವಾಮೀಜಿ, ಮೇದರ ಗುರುಪೀಠದ ಶ್ರೀ ಇಮ್ಮಡಿ ಬಸವ ಕೇತೃಶ್ವರ ಸ್ವಾಮೀಜಿ, ಚಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಸ್ವಾಮೀಜಿ, ಗಾಣಿಗರ ಗುರುಪೀಠದ ಶ್ರೀ ಬಸವಕುಮಾರಸ್ವಾಮೀಜಿ ನಿಯೋಗದಲ್ಲಿದ್ದರು.
ಊಹಾಪೋಹ: ಸಿಂದಗಿ, ಹಾನಗಲ್ ಉಪಚುನಾವಣೆ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟು ಸ್ವಾಮೀಜಿಗಳ ಸಭೆ ನಡೆಸಿದೆ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜವಾಬ್ದಾರಿ ಹೊತ್ತಿರುವ ಕೆ.ಎಸ್ ಈಶ್ವರಪ್ಪ ಹಾಗೂ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸಭೆ ನಡೆದಿದೆ ಎಂಬ ಊಹಾಪೋಹ ಹರಿದಾಡಿತ್ತು.
ಮಠಾಧೀಶರ ಸಮಸ್ಯೆಗಳನ್ನು ಕೇಳಿದ್ದೇವೆ. ಯಾವ ಮಠಗಳಿಗೆ ಏನೇನು ಸೌಲಭ್ಯ ನೀಡಬೇಕು ಎಂಬ ಬಗ್ಗೆ ಅವರಿಂದ ಸಲಹೆ ಕೇಳಿದ್ದೇವೆ. ಆರ್ಥಿಕ ಸಹಾಯ ಹೇಗೆ ನೀಡಬೇಕು ಎಂಬ ಬಗ್ಗೆಯೂ ಪರಿಶೀಲನೆ ಮಾಡುತ್ತೇವೆ.
| ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವರು