ಗಾಯಕ್ಕೆ ಫೆವಿಕ್ವಿಕ್ ಚಿಕಿತ್ಸೆ!: ಪಾಲಕರಿಂದ ಆರೋಗ್ಯ ರಕ್ಷಾ ಸಮಿತಿಗೆ ದೂರು

6-67a25a6117bcf
Published on

ಹಾನಗಲ್ಲ: ತಾಲೂಕಿನ ಆಡೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಒಬ್ಬರು ಏಳು ವರ್ಷದ ಬಾಲಕನ ಕೆನ್ನೆಯ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಚ್ಚಿ ಚಿಕಿತ್ಸೆ ನೀಡಿದ್ದು, ಈ ಕುರಿತು ಮಗುವಿನ ಪಾಲಕರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ನಡುವೆ ಕೆನ್ನೆಯ ಗಾಯ ಗುಣವಾಗುತ್ತಿರುವುದು ಆಶ್ಚರ್ಯಕ್ಕೂ ಎಡೆ ಮಾಡಿಕೊಟ್ಟಿದೆ!

ಜ.14ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗುರುಕಿಶನ್ ಅಣ್ಣಪ್ಪ ಹೊಸಮನಿ ಎಂಬ ಬಾಲಕ ಆಟವಾಡುತ್ತಿದ್ದಾಗ ಅವಘಡವಾಗಿ ಕೆನ್ನೆ ಮೇಲೆ ಗಾಯ ಆಗಿತ್ತು. ಗಾಯ ಬಹಳ ಆಳಕ್ಕೆ ಇಳಿದಿದ್ದರಿಂದ ರಕ್ತ ಸುರಿಯುತ್ತಿತ್ತು. ಕೂಡಲೇ ಬಾಲಕನನ್ನು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪಾಲಕರು ಕರೆದೊಯ್ದಿದ್ದರು. ಬಾಲಕನ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಗಮ್ ಅಂಟಿಸಿ ನರ್ಸ್ ಜ್ಯೋತಿ ಎನ್ನುವವರು ಚಿಕಿತ್ಸೆ ನೀಡಿದ್ದಾರೆ.

ಪಾಲಕರು ಪ್ರಶ್ನಿಸಿದ್ದಕ್ಕೆ, ಸ್ಟಿಚ್ ಹಾಕಿದರೆ ಬಾಲಕನ ಕೆನ್ನೆ ಮೇಲೆ ಕಲೆ ಉಳಿದುಕೊಳ್ಳುತ್ತದೆ, ಹೀಗಾಗಿ ಚರ್ಮದ ಮೇಲಷ್ಟೇ ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ್ದೇನೆ ಎಂದು ನರ್ಸ್ ಹೇಳಿದ್ದಾರೆ. ‘ನನಗೆ ತಿಳಿದ ಮಟ್ಟಿಗೆ ನಾನು ಚಿಕಿತ್ಸೆ ಮಾಡಿದ್ದೇನೆ. ನೀವು ಫೆವಿಕ್ವಿಕ್ ಹಚ್ಚಬೇಡಿ, ಬೇರೆ ಆಸ್ಪತ್ರೆಗೆ ಹೋಗುತ್ತೇವೆ ಎಂದಿದ್ದರೆ ಅಲ್ಲಿಗೇ ರೆಫರ್ ಮಾಡುತ್ತಿದ್ದೆವು’ ಎಂದೂ ಉತ್ತರಿಸಿದ್ದಾರೆ ಎಂದು ಪಾಲಕರು ದೂರಿದ್ದಾರೆ. ಬಾಲಕನ ಪಾಲಕರು ನರ್ಸ್ ಜ್ಯೋತಿ ಹೇಳಿಕೆಯ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಪ್ರಕರಣದ ಕುರಿತು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರು ಸಲ್ಲಿಸಿದ್ದಾರೆ. ಸಮಿತಿಯವರು ನರ್ಸ್​ಗೆ ನೋಟಿಸ್ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net