ರಾಜ್ಯದಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ದಂಧೆ

scam
Published on

ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಲಿಂಗಪತ್ತೆ ದಂಧೆ ಬೆಳಕಿಗೆ ಬಂದಿದ್ದು, ಬೈಯಪ್ಪನಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೈಸೂರಿನ ಬನ್ನೂರು ರಸ್ತೆ ವಸಂತನಗರದ ಶಿವನಂಜೇಗೌಡ ಅಲಿಯಾಸ್ ಶಿವು (50) ಮತ್ತು ಮಂಡ್ಯ ಜಿಲ್ಲೆ ಕೂಳೆನಹಳ್ಳಿಯ ನಯನ್‌ಕುಮಾರ್ (36), ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ಟಿ.ಎಂ. ವೀರೇಶ್ (35), ಮಂಡ್ಯ ಜಿಲ್ಲೆ ಪಾಂಡವಪುರದ ಸುಂಕದನ್ನೂರು ಗ್ರಾಮದ ನವೀನ್‌ಕುಮಾರ್ (43) ಬಂಧಿತರು.

ಸುನಂದ ಮತ್ತು ಸಿದ್ದೇಶ್ ಎಂಬುವರು ತಲೆಮರೆಸಿಕೊಂಡಿದ್ದಾರೆ. ಬಂಧಿತರನ್ನು ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿ ಠಾಣೆ ಪಿಎಸ್‌ಐ ಮಂಜುನಾಥ್, ಎಎಸ್‌ಐಗಳಾದ ಗೋವಿಂದರಾಜು, ನಾಗಯ್ಯ ಹಿರೇಮಠ ನೇತೃತ್ವದ ತಂಡ ಹಳೇ ಮದ್ರಾಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಇದೇ ವೇಳೆ ಅನುಮಾನಸ್ಪದವಾಗಿ ಬಂದ ಕಾರನ್ನು ಪೊಲೀಸರು ಕೈ ಅಡ್ಡಗಟ್ಟಿ ನಿಲ್ಲಿಸುವಂತೆ ಸನ್ನೆ ಮಾಡಿದ್ದರು. ಚಾಲಕ ಕಾರು ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಮುಂದೆ ಸಾಗಿದ್ದ. ಅನುಮಾನಗೊಂಡ ಪೊಲೀಸರು, ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಹಳೇ ಮದ್ರಾಸ್ ರಸ್ತೆ ಎನ್‌ಜಿಇಎ್ ಸಿಗ್ನಲ್‌ನಲ್ಲಿ ಕಾರನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿದ್ದರು.

ಈ ವೇಳೆ ಖಾಕಿ ಪ್ರಶ್ನೆಗಳಿಗೆ ಶಿವನಂಜೇಗೌಡ ಮತ್ತು ನಯನ್ ಉತ್ತರಿಸಲು ತಡವರಿಸಿದ್ದರು. ಕೊನೆಗೆ ಕಾರಿನಲ್ಲಿ ಕೂತಿದ್ದ ಮಹಿಳೆಯನ್ನು ತೋರಿಸಿ ‘ಈಕೆ ಗರ್ಭಿಣಿ. ಇವರನ್ನು ಮಂಡ್ಯದ ಸುನಂದಾ ಮತ್ತು ವೀರೇಶ್, ಸಿದ್ದೇಶ್ ಎಂಬುವರ ಬಳಿಗೆ ಕರೆದುಕೊಂಡು ಹೋಗುತ್ತಿದ್ದೇವೆ. ಅಲ್ಲಿನ ಲ್ಯಾಬ್‌ಯೊಂದರಲ್ಲಿ ಸ್ಕಾೃನಿಂಗ್ ಮಾಡಿಸಿ ಹೊಟ್ಟೆಯಲ್ಲಿ ಇರುವ ಮಗು ಗಂಡು ಅಥವಾ ಹೆಣ್ಣು ಎಂಬುದನ್ನು ಖಚಿತ ಪಡಿಸಿಕೊಂಡು ಹೆಣ್ಣಾಗಿದ್ದರೆ ವಿರೇಶ್ ಎಂಬಾತ, ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸುತ್ತಾನೆ. ಅದಕ್ಕಾಗಿ ಮಂಡ್ಯಗೆ ಕರೆದುಕೊಂಡು ಹೋಗುತ್ತಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು.

ಗರ್ಭಪಾತ ಮತ್ತು ಭ್ರೂಣ ಲಿಂಗ ಪತ್ತೆ ಕಾನೂನುಬಾಹಿರವಾಗಿರುವುದರಿಂದ ಎಸ್‌ಐ ಮಂಜುನಾಥ್, ಎಲ್ಲರನ್ನೂ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ದೂರು ಸಲ್ಲಿಸಿದ್ದರು. ಇದರ ಮೇರೆಗೆ ಆರೋಪಿತರ ವಿರುದ್ಧ ಎ್ಐಆರ್ ದಾಖಲಿಸಿ ಕಾರು ಹಾಗೂ 5 ಸಾವಿರ ರೂ. ನಗದು ಜಪ್ತಿ ಮಾಡಿದ್ದಾರೆ. ಆರೋಪಿತರು ಕೊಟ್ಟ ಮಾಹಿತಿ ಮೇರೆಗೆ ಮಂಡ್ಯ ಜಿಲ್ಲೆಯ ಹಾಡ್ಯಾ ಸ್ಥಳಕ್ಕೆ ಹೋಗಿ ವೀರೇಶ್ ಮತ್ತು ನವೀನ್‌ಕುಮಾರ್ ಬಂಧಿಸಿದ್ದಾರೆ. ವೀರೇಶ್ ಬಳಿಯಿದ್ದ ಭ್ರೂಣ ಲಿಂಗ ಪತ್ತೆಗೆ ಬಳಸುತ್ತಿದ್ದ ಸ್ಕಾೃನಿಂಗ್ ಮಷಿನ್, 20 ಸಾವಿರ ರೂ. ಮತ್ತು ಕಾರನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆ ಸಲುವಾಗಿ ಕೋರ್ಟ್‌ಗೆ ಆರೋಪಿಗಳನ್ನು ಹಾಜರುಪಡಿಸಿ ಕಸ್ಟಡಿಗೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬೃಹತ್ ಜಾಲದ ಶಂಕೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಭ್ರೂಣ ಲಿಂಗಪತ್ತೆ ದಂಧೆ ವ್ಯಾಪಿಸಿರುವ ಶಂಕೆ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಂದರೇ ಬಂಧಿತ ಆರೋಪಿಗಳು, ಭ್ರೂಣ ಲಿಂಗ ಪತ್ತೆ ಸಲುವಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಸ್ಕಾೃನಿಂಗ್ ಮಷಿನ್‌ಗಳನ್ನು ಅಳವಡಿಸಿರುವ ಮಾಹಿತಿ ಬಾಯ್ಬಿಟ್ಟಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲೆಡೆ ಜಪ್ತಿ ಮಾಡುವ ಸಲುವಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಶಿಕ್ಷಾರ್ಹ ಅಪರಾಧ

ಹೆಣ್ಣು ಭ್ರೂಣಹತ್ಯೆ ತಡೆಗಟ್ಟಲು ಮತ್ತು ದೇಶದಲ್ಲಿ ಇಳಿಮುಖವಾಗುತ್ತಿರುವ ಲಿಂಗಾನುಪಾತ ತಡೆಗಟ್ಟಲು ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ವರ್ಗೀಕರಣ ತಂತ್ರಗಳ ಅಧಿನಿಯಮ ರೂಪಿಸಲಾಗಿದೆ. ಈ ಪ್ರಕಾರ ಗರ್ಭಧಾರಣೆಯ ನಂತರ ಅಥವಾ ಮೊದಲು ಲಿಂಗ ಆಯ್ಕೆ (ಹೆಣ್ಣು-ಗಂಡು) ಅನ್ನು ನಿಧಿಸಲಾಗಿದೆ. ಲಿಂಗ ಆಯ್ಕೆಯಿಂದ ಗರ್ಭಪಾತ ಮಾಡಿಸಿಕೊಳ್ಳುವ ಪ್ರಸವಪೂರ್ವ ವರ್ಗೀಕರಣ ತಂತ್ರದ ದುರ್ಬಳಕೆ ಮಾಡಿಕೊಳ್ಳುವಂತಿಲ್ಲ. ಕಾಯ್ದೆ ಉಲ್ಲಂಸಿದರೆ ಶಿಕ್ಷಾರ್ಹ ಅಪರಾಧವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net