ಶಿವಮೊಗ್ಗದಲ್ಲಿ ಸಂಭ್ರಮದ ಈದ್ ಮೆರವಣಿಗೆ

Eid procession
Published on

ಶಿವಮೊಗ್ಗ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ನಿಮಿತ್ತ ಮುಸ್ಲಿಮರು ನಗರದಲ್ಲಿ ಸೋಮವಾರ ಈದ್ ಮಿಲಾದ್ ಮೆರವಣಿಗೆ ನಡೆಸಿದರು. ಶಿವಮೊಗ್ಗದ ಹಲವು ವೃತ್ತ, ಮಾರ್ಗಗಳಲ್ಲಿ ಪಾನೀಯ ವಿತರಿಸುವ ಜತೆಗೆ ಕವ್ವಾಲಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಾವಿರಾರು ಮುಸ್ಲಿಮರು ಮೆರವಣಿಗೆಗೆ ಮೆರುಗು ನೀಡಿದರು.

ನಗರದ ಗಾಂಧಿಬಜಾರ್ ಜಾಮಿಯಾ ಮಸೀದಿಯಿಂದ ಮಧ್ಯಾಹ್ನ ಆರಂಭವಾದ ಮೆರವಣಿಗೆ ನಾಗಪ್ಪಕೇರಿ, ಲಷ್ಕರ್ ಮೊಹಲ್ಲಾ, ಬಾರ್‌ಲೈನ್ ರಸ್ತೆ, ಪೆನ್ಷನ್ ಮೊಹಲ್ಲಾ, ಬಿ.ಎಚ್.ರಸ್ತೆ, ಮೀನಾಕ್ಷಿ ಭವನದ ಪಕ್ಕದ ರಸ್ತೆ, ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲಾ, ಬಾಲರಾಜ್ ಅರಸ್ ರಸ್ತೆ, ಮಹಾವೀರ ವೃತ್ತ, ಟಿ.ಸೀನಪ್ಪ ಶೆಟ್ಟಿ ವೃತ್ತ, ಅಮೀರ್ ಅಹ್ಮದ್ ವೃತ್ತ, ಅಶೋಕ ವೃತ್ತ, ಎನ್.ಟಿ.ರಸ್ತೆ, ಎನ್.ಟಿ.ರಸ್ತೆಯ 4ನೇ ತಿರುವು ಮಾರ್ಗವಾಗಿ ಆಜಾದ್ ನಗರ, ನೂರಾನಿ ಮಸೀದಿ, ಕೆ.ಆರ್.ಪುರಂ ರಸ್ತೆ, ಆಮೀರ್ ಅಹ್ಮದ್ ವೃತ್ತದಲ್ಲಿ ಅಂತ್ಯಗೊಂಡಿತು.

ಅಮೀರ್ ಅಹ್ಮದ್ ವೃತ್ತದ ಅಷೂರ್ ಖಾನಾ ಮುಂಭಾಗದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ಧರ್ಮಗುರುಗಳು ಪ್ರವಚನ ನೀಡಿದರು. ಮುಸ್ಲಿಂ ಧರ್ಮಗುರುಗಳು, ಮೌಲಾನಗಳು ಸೇರಿ ಸಾವಿರಾರು ಮಂದಿ ಪಾಲ್ಗೊಂಡು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net