ಜೀವನದ ಔನ್ನತ್ಯಕ್ಕೆ ಪ್ರೇರಣೆ ನೀಡುವ ಹಬ್ಬಗಳು

dharmasthala hegde
Published on

ನವರಾತ್ರಿಯನ್ನು ದೇಶದಾದ್ಯಂತ ಬಹಳ ಸಡಗರದಿಂದ, ವಿಭಿನ್ನ ರೀತಿಯಲ್ಲಿ ಪ್ರತಿವರ್ಷವೂ ಆಚರಿಸಲಾಗುತ್ತದೆ. ಇದು ಧಾರ್ವಿುಕ, ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಮಹತ್ವ ಪಡೆದಿದೆ. ನವರಾತ್ರಿ ಹಬ್ಬವನ್ನು ಒಂಬತ್ತು ದಿನಗಳಲ್ಲಿ ದುರ್ಗಾ, ಲಕ್ಷ್ಮೀ ಮತ್ತು ಸರಸ್ವತಿ ದೇವಿಯ ಆರಾಧನೆಗಾಗಿ ವಿಶೇಷವಾಗಿ ಮೀಸಲಿಡಲಾಗುತ್ತದೆ. ಧಾರ್ವಿುಕವಾಗಿ ಮಾತ್ರವಲ್ಲದೆ, ನವರಾತ್ರಿ ಸ್ತ್ರೀ ತತ್ವದ ಉಪಾಸನೆಯೂ ಹೌದು, ಸ್ತ್ರೀ ಕುಲದ ಶಕ್ತಿಯ ದ್ಯೋತಕವೂ ಹೌದು. ಸ್ತ್ರೀ ಸಮಾಜಕ್ಕೆ ನೀಡುವ ಪ್ರಾಧಾನ್ಯತೆಯ ಕನ್ನಡಿಯೂ ಹೌದು. ಅನಾದಿ ಕಾಲದಿಂದಲೂ ನವರಾತ್ರಿ ಉತ್ಸವವನ್ನು ಬಹಳ ಪಾವಿತ್ರ್ಯದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ನಾಡಿನೆಲ್ಲೆಡೆ ಬಹಳ ಸಡಗರದಿಂದ ಹಬ್ಬವನ್ನು ಆಚರಿಸಲಾಯಿತು. ಸತ್ವ, ರಜೋ ಮತ್ತು ತಮೋ ಗುಣಗಳಿಂದ ಕೂಡಿದ ದೇವಿಯ ಆರಾಧನೆಯ ಪದ್ಧತಿ ಪರಂಪರಾನುಗತವಾಗಿ ಬಂದಿದೆ. ಸರಸ್ವತಿ, ಲಕ್ಷ್ಮೀ ಮತ್ತು ದುರ್ಗಾ ದೇವಿಯನ್ನು ಸ್ತ್ರೀ ತತ್ವದ ಮೂರು ಆಯಾಮಗಳಾಗಿ ನೋಡಲಾಗುತ್ತದೆ ಅಥವಾ ಸತ್ವ, ರಜೋ, ತಮೋ ಈ ಮೂರು ಗುಣಗಳಿಗೆ ಹೋಲಿಕೆ ಮಾಡಲಾಗುತ್ತದೆ. ಸತ್ವ ಗುಣ ಅಂದರೆ ಸಾತ್ವಿಕ ಜ್ಞಾನ, ಅಲೌಕಿಕ ಜ್ಞಾನ ಪಡೆಯಲು ಇಚ್ಛಿಸುವವರು ಸರಸ್ವತಿಯನ್ನು ಆರಾಧಿಸುತ್ತಾರೆ. ರಜೋ ಅಂದರೆ ಸಂಪತ್ತು, ಉತ್ಸಾಹ ಪ್ರಾಪ್ತಿಗಾಗಿ ಲಕ್ಷ್ಮೀಯನ್ನು ಪೂಜಿಸುತ್ತಾರೆ. ಶಕ್ತಿ ಪ್ರಾಪ್ತಿಗಾಗಿ ದುರ್ಗಾ ಅಥವಾ ಕಾಳಿಯಂತಹ ಸ್ತ್ರೀ ರೂಪಗಳನ್ನು ಪೂಜಿಸುತ್ತಾರೆ.

ಸ್ತ್ರೀ ತತ್ವದ ಉಪಾಸನೆ ಭೂಮಿಯ ಮೇಲಿನ ಅತ್ಯಂತ ಪ್ರಾಚೀನ ಪದ್ಧತಿ. ಇದು ಭಾರತದಲ್ಲಷ್ಟೇ ಅಲ್ಲ, ಯುರೋಪ್, ಅರೇಬಿಯಾ ಮತ್ತು ಆಫ್ರಿಕಾದಲ್ಲಿ ವ್ಯಾಪಕವಾಗಿ ನಡೆಯುತ್ತಿತ್ತು. ದುರದೃಷ್ಟವಶಾತ್ ಪಾಶ್ಚಿಮಾತ್ಯ ದೇಶಗಳಲ್ಲಿ ನಾಸ್ತಿಕತೆ, ಬಹುದೇವತಾ ಪೂಜೆ ಮತ್ತು ವಿಗ್ರಹಾರಾಧನೆ ಮುಂತಾದ ಕಾರಣಗಳನ್ನು ಮುಂದಿಟ್ಟು ದೇವಿ ದೇವಸ್ಥಾನಗಳನ್ನು ಯಾವುದೇ ಕುರುಹುಗಳಿಲ್ಲದಂತೆ ನಾಶಪಡಿಸಲಾಗಿದೆ. ಪ್ರಪಂಚದ ಇತರೆಡೆಯೂ ಹೀಗಾಗಿದೆ. ಭಾರತದಲ್ಲಿ ದೇವೀ ಉಪಾಸನೆ ಇವತ್ತಿಗೂ ಉಳಿದಿದೆ. ನಮ್ಮ ಅಗತ್ಯಕ್ಕನುಗುಣವಾಗಿ ದೇವತಾ ಸ್ವರೂಪಗಳನ್ನು ಸೃಷ್ಟಿಸುವ ಸ್ವಾತಂತ್ರ್ಯವನ್ನು ಸಂಸ್ಕೃತಿ ನಮಗೆ ನೀಡಿದೆ. ಪ್ರತಿಷ್ಠಾಪಿಸುವ ವಿಜ್ಞಾನದ ಅರಿವಿನಿಂದ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ದೇವಾಲಯ ನಿರ್ವಿುಸಲೂ ಅನುವು ಮಾಡಿಕೊಟ್ಟಿದೆ. ಹಳ್ಳಿಹಳ್ಳಿಗಳಲ್ಲೂ ದೇವಿ, ಅಮ್ಮನವರ ದೇವಾಲಯಗಳಿವೆ ಎಂದು ಸದ್ಗುರು ಅವರ ಲೇಖನದಲ್ಲಿ ಓದಿದ ನೆನಪು.

ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ ತೃತೀಯಂ ಚಂದ್ರಘಂಟೀತಿ ಕೂಷ್ಮಾಂಡೇತಿ ಚತುರ್ಥಕಮ್ ಪಂಚಮಂ ಸ್ಕಂದ ಮಾತೇತಿ ಷಷ್ಠಂ ಕಾತ್ಯಾಯನೀತಿ ಚ ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಮಮ್ ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ ಅಂದರೆ ನವರಾತ್ರಿಯ ಮೊದಲ 3 ದಿನಗಳನ್ನು ದುರ್ಗಾ, ಮುಂದಿನ 3 ದಿನಗಳನ್ನು ಲಕ್ಷ್ಮೀ ಮತ್ತು ಕೊನೆಯ 3 ದಿನಗಳನ್ನು ಸರಸ್ವತಿಗೆ ಅರ್ಪಿಸಲಾಗಿದೆ. ಹತ್ತನೇ ದಿನ, ವಿಜಯದಶಮಿ. ತ್ರಿಗುಣಗಳನ್ನು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ ವಿಜಯದ ಸಂಕೇತ. ದುಷ್ಟತನದ ವಿರುದ್ಧ ಧರ್ಮವು ವಿಜಯ ಹೊಂದಿದ್ದರ ಸಂಕೇತ.

ದುರ್ಗಾರಾಧನೆಯಲ್ಲಿ ಕನ್ಯೆಯರ ಪೂಜೆಗೆ ವಿಶೇಷ ಪ್ರಾತಿನಿಧ್ಯ. ಅದರಲ್ಲೂ ಹತ್ತು ವರ್ಷದೊಳಗಿನ ಬಾಲಕಿಯರಿಗೆ ಹೆಚ್ಚಿನ ಪ್ರಾಶಸ್ಱ ನವರಾತ್ರಿ ಸಂದರ್ಭದಲ್ಲಿ ನವ ಕನ್ಯೆ ಅಥವಾ ಕುಮಾರಿಯರಲ್ಲಿ ದೇವಿಯನ್ನು ಆವಾಹಿಸಿ ಪೂಜಿಸಲಾಗುತ್ತದೆ. ಕುಮಾರಿಯನ್ನು ಕ್ರಮವಾಗಿ ಕುಮಾರೀ, ತ್ರಿಮೂರ್ತಿನೀ, ಕಲ್ಯಾಣಿ, ರೋಹಿಣೀ, ಕಾಲೀ, ಚಂಡಿಕಾ, ಶಾಂಭವೀ, ದುರ್ಗಾ, ಭದ್ರಾ ಎಂದು ಕರೆಯಲಾಗಿದೆ. ಬಾಲಕಿಯರಿಗೂ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲೂ ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ಕನ್ನಿಕಾ ಪೂಜೆ ನಡೆಸಲಾಗುತ್ತದೆ. ಮುತೆôದೆಯರಿಗೆ ಸೀರೆ ನೀಡುವ ಸಂಪ್ರದಾಯವೂ ಮುಂದುವರಿದಿದೆ.

ಹೆಣ್ಣು ಎಂದರೆ ಪ್ರಕೃತಿ, ಸೃಷ್ಟಿಗೆ ಮೂಲ. ಆಕೆಗೆ ವಿಶೇಷ ಮನ್ನಣೆ ನೀಡುವ ನವರಾತ್ರಿ ಸ್ತ್ರೀಪ್ರಧಾನ ಹಬ್ಬ. ಪುರುಷ ತತ್ವದಷ್ಟೇ ಸಮಾನವಾಗಿ ಸ್ತ್ರೀ ತತ್ವದ ಪ್ರತಿಪಾದನೆಯಾಗಿದೆ. ಮಹಿಳೆಯರ ಕೌಟುಂಬಿಕ, ಸಾಮಾಜಿಕ ಕೊಡುಗೆಯನ್ನು ಮಾಪನ ಮಾಡಲು ಸಾಧ್ಯವಾಗದು. ಹಾಗಾಗಿ ಅವರ ಸೇವೆಗೆ ಪ್ರತಿಯಾಗಿ ಸ್ತ್ರೀಯನ್ನು ದೇವರ ರೂಪದಲ್ಲಿ ಆರಾಧಿಸಿ ಸ್ತ್ರೀ ಕುಲದ ಮೌಲ್ಯವನ್ನು ದೈವತ್ವಕ್ಕೆ ಏರಿಸಿರುವುದು ನಮ್ಮ ಸಂಸ್ಕೃತಿಯ ಹೆಮ್ಮೆ.

ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ವಿಶ್ವಪ್ರಸಿದ್ಧ ನಾಡಹಬ್ಬ ದಸರಾವನ್ನು ಬಹು ವಿಜೃಂಭಣೆ ಯಿಂದ ಪ್ರತಿವರ್ಷ ಆಚರಿಸಲಾಗುತ್ತದೆ. ದಸರಾದ ಜಂಬೂ ಸವಾರಿ ಬಹಳ ಆಕರ್ಷಣೆ ಹೊಂದಿದ್ದು, ದೇಶವಿದೇಶಗಳ ಜನ ಅದನ್ನು ಕಣ್ತುಂಬಿಕೊಳ್ಳಲು ಕಾತರರಾಗಿರುತ್ತಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವರಾತ್ರಿ ಆಚರಣೆ ಬಹು ವಿಶೇಷವಾಗಿರುತ್ತದೆ. ಮುಖ್ಯವಾಗಿ ಹುಲಿ ವೇಷ ಕುಣಿತ ಪ್ರಸಿದ್ಧವಾಗಿದೆ. ಅನೇಕ ಹುಲಿವೇಷ ತಂಡಗಳು ದೇವರಿಗೆ ಸೇವಾ ರೂಪದಲ್ಲಿ ಹರಕೆ ಸಲ್ಲಿಸುತ್ತವೆ. ಇದು ತಲೆಮಾರುಗಳಿಂದ ಆಚರಿಸಿಕೊಂಡು ಬಂದ ಪದ್ಧತಿ. ಇದಕ್ಕೊಂದು ಧಾರ್ವಿುಕ ಹಿನ್ನೆಲೆ ಇದೆ. ಕೆಲವರು ತಮ್ಮ ಕಾಯಿಲೆ ವಾಸಿಯಾಗಲೆಂದು, ಇನ್ನು ಕೆಲವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ನವರಾತ್ರಿ ವೇಷ ಧರಿಸುವ ಹರಕೆ ಹೊತ್ತುಕೊಳ್ಳುತ್ತಾರೆ. ವೇಷ ಧರಿಸಿ ಮನೆ, ಅಂಗಡಿಗಳಿಗೆ ಭೇಟಿ ನೀಡುತ್ತಾರೆ. ಕೊಟ್ಟ ಕಾಣಿಕೆ ತೆಗೆದುಕೊಳ್ಳುತ್ತಾರೆ. ತಮ್ಮ ದಿನದ ಮಾಮೂಲು ಖರ್ಚಿಗೆ (ಊಟ, ತಿಂಡಿಗೆ) ಬಳಸಿ ಮಿಕ್ಕಿದ್ದನ್ನು ದೇವರ ಹುಂಡಿಗೆ ಹಾಕುತ್ತಾರೆ. ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ ಹರಕೆ ಹೊತ್ತವರು ಹಣಕ್ಕಾಗಿ ಪೀಡಿಸಬಾರದಂತೆ. ದೇವರ ಕೃಪೆಗೆ ಪಾತ್ರರಾಗಲು ಬಯಸುವವರಿಗೆ ಇದೊಂದು ಸೇವೆ ಎಂಬ ನಂಬಿಕೆಯಿರುತ್ತದೆ.

ಇನ್ನು ಕೆಲವೆಡೆ ವ್ಯವಸ್ಥಿತವಾದ ಹುಲಿತಂಡ ಕಟ್ಟಿಕೊಂಡು ನೃತ್ಯ ಪ್ರದರ್ಶನ ನೀಡುತ್ತಾರೆ. ಇನ್ನು ಕೆಲವರು ಮನರಂಜನೆಗಾಗಿ ವೇಷ ಹಾಕುತ್ತಾರೆ. ನವರಾತ್ರಿ ವೇಳೆ ಎಲ್ಲಿ ನೋಡಿದರಲ್ಲಿ ವೇಷಧಾರಿಗಳ ಮಾರ್ನೆಮಿ ಕುಣಿತ ಕಾಣಸಿಗುತ್ತದೆ. ಸ್ವಾರಸ್ಯವೆಂದರೆ ಹುಲಿ, ಕರಡಿ, ಸಿಂಹಗಳು ಮನೆಗೆ ಹಾಜರಾಗುವ ವೇಳೆ ಮಕ್ಕಳಿಗೆ ಭಯ ಮಿಶ್ರಿತ ಕಾತರ. ಡೋಲು ನಗಾರಿಯ ಸದ್ದು ಕೇಳಿದರೆ ಸಾಕು ‘ಅಮ್ಮಾ ಹುಲಿ ಬಂತು ಹುಲಿ’ ಎಂದು ಮಕ್ಕಳೂ ಕುಣಿಯತೊಡಗುತ್ತಾರೆ. ವಿಶಿಷ್ಟ ರೀತಿಯ ವೇಷ ಧರಿಸಿ ಹುಲಿ, ಕರಡಿಗಳನ್ನು ಬಿಂಬಿಸುವ ರೀತಿಯಲ್ಲಿ ಮುಖಗಳಿಗೆ ಬಣ್ಣ ಬಳಿದು ಡೋಲು ನಗಾರಿಗಳೊಂದಿಗೆ ಪೇಟೆಯೆಲ್ಲ ತಿರುಗಿ ಹುಲಿ, ಕರಡಿ, ಸಿಂಹದಂತೆ ತುಸು ಗಾಂಭೀರ್ಯದ ಮೋಜಿನ ಕುಣಿತ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ. ಅದರಲ್ಲೂ ಕೆಲವು ಚಿತ್ರವಿಚಿತ್ರ ವೇಷಗಳು ಕಣ್ತಣಿಸುತ್ತವೆ.

ನವರಾತ್ರಿ ವೇಳೆ ನಮ್ಮ ಕ್ಷೇತ್ರಕ್ಕೂ ಹಲವು ತಂಡಗಳು ಆಗಮಿಸಿ ಪ್ರದರ್ಶನ ನೀಡುತ್ತವೆ. ಅವುಗಳ ಹುಲಿ ಕುಣಿತವನ್ನು ನಾವು ಮತ್ತು ಕ್ಷೇತ್ರಕ್ಕೆ ಆಗಮಿಸುವ ಭಕ್ತರು ನೋಡಿ ಕಣ್ತುಂಬಿಕೊಳ್ಳುತ್ತೇವೆ. ಧಾರ್ವಿುಕ ನೆಲೆಯಲ್ಲಿ ಭಕ್ತಿಯಿಂದ ದೇವರ ಸೇವೆಯೆಂದು ತಿಳಿದು ಫಲಾಪೇಕ್ಷೆ ಇಲ್ಲದೆ ಜನರಿಗೆ ಮನರಂಜನೆ ಜೊತೆ ಸಂಪ್ರದಾಯ ಪಾಲಿಸುತ್ತ ಪೌರಾಣಿಕ ಹಿನ್ನೆಲೆ ಉಳಿಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ. ಹಾಗೆಯೇ ಸಂಪ್ರದಾಯದಂತೆ ಶ್ರೀಕ್ಷೇತ್ರದಲ್ಲಿ ನವರಾತ್ರಿ ವೇಳೆ ತೆನೆ ಕಟ್ಟುವ ಆಚರಣೆ ಪ್ರತಿವರ್ಷವೂ ನಡೆಯುತ್ತಿದೆ. ಕರಾವಳಿಯ ಪುಣ್ಯಕ್ಷೇತ್ರ, ದೇವಸ್ಥಾನ ಮಾತ್ರವಲ್ಲದೆ ಕುಟುಂಬದ, ಗುತ್ತಿನ ಮನೆಗಳಲ್ಲಿಯೂ ಈ ವಿಶೇಷ ಆಚರಣೆ ಕಾಣಸಿಗುತ್ತದೆ. ತೆನೆ ಹಬ್ಬದಲ್ಲಿ ಹೊಸ ಕೊಯ್ಲನ್ನು ಕ್ಷೇತ್ರಕ್ಕೆ ತಂದು ಪೂಜಿಸಿ, ಹೊಸ ಅಕ್ಕಿಯ ಊಟ ಮಾಡುವ ಸಂಪ್ರದಾಯವಿದೆ. ನವರಾತ್ರಿಯ ಶುಭ ದಿನದಂದು ಭತ್ತದ ಗದ್ದೆಯಿಂದ ತೆನೆ ಕೊಯ್ದು, ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ತರಲಾಗುತ್ತದೆ. ಜೊತೆಗೆ ಹೊಸ ಫಲವಸ್ತುಗಳನ್ನು ಹಣ್ಣು ಹಂಪಲುಗಳನ್ನು ದೇವರಿಗೆ ಅರ್ಪಿಸಲಾಗುತ್ತಿದೆ. ಬಳಿಕ ಅನ್ನ, ಬೆಲ್ಲ, ಹಾಲು, ತೆಂಗಿನಕಾಯಿ, ಹಣ್ಣುಗಳನ್ನು ಉಪಯೋಗಿಸಿ ವಿಶಿಷ್ಟ ಊಟ ತಯಾರಿಸಲಾಗುತ್ತದೆ. ಸನಾತನ ಧರ್ಮದವರು ಮಾತ್ರವಲ್ಲದೆ ಕ್ರೖೆಸ್ತರೂ ತೆನೆಹಬ್ಬವನ್ನು ತಮ್ಮ ಸಂಪ್ರದಾಯದಂತೆ ಆಚರಿಸುತ್ತಾರೆ.

ಬೆಳೆ ಸಮೃದ್ಧಿಯ ಸಂಕೇತ. ಮೊದಲ ಬೆಳೆಯನ್ನು ಸ್ವಾಗತಿಸುವುದರ ಜೊತೆಗೆ ಮನೆಯು ಸುಖ, ಶಾಂತಿ, ನೆಮ್ಮದಿಯಿಂದ ಸಮೃದ್ಧಿಯಾಗಿರಲಿ ಎಂದು ಆಶಿಸುವುದೇ ತೆನೆಹಬ್ಬ. ಜೊತೆಗೆ ಕುಟುಂಬದವರೆಲ್ಲರೂ ಒಗ್ಗಟ್ಟಿನಿಂದ ದುಡಿದ ಪರಿಶ್ರಮದ ಫಲವನ್ನು ಮನೆ ತುಂಬಿಸುವ ಸಮಯ. ಹಾಗೆಯೇ ಹಿರಿಯರನ್ನು ಸ್ಮರಿಸುವ, ಪ್ರಕೃತಿಗೆ ಧನ್ಯವಾದ ತಿಳಿಸುವ ಸಮಯ.

ನವರಾತ್ರಿಯ ಒಂಬತ್ತನೇ ದಿನ ಶಾರದಾ ಪೂಜೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಶಾಲೆ, ವಿದ್ಯಾಸಂಸ್ಥೆ, ದೇವಸ್ಥಾನ ಹಾಗೂ ಮನೆಗಳಲ್ಲಿ ಶಾರದಾದೇವಿಯ ಆರಾಧನೆ. ಕೆಲವೆಡೆ ಪುಸ್ತಕ, ಪೆನ್ನು, ವೀಣೆ, ತಬಲಾ, ಮೃದಂಗ, ಹಾರ್ವೇನಿಯಂ ಮುಂತಾದ ವಾದ್ಯೋಪಕರಣಗಳನ್ನು ದೇವಿಯ ಮುಂದೆ ಇಟ್ಟು ಪೂಜಿಸಲಾಗುತ್ತದೆ. ಪೂಜೆ ಬಳಿಕ ಅಕ್ಷರಾರಾಧನೆ ಮಾಡುವುದು, ಅಂದರೆ ಮಕ್ಕಳು ಅಕ್ಷರಾಭ್ಯಾಸ ಮಾಡುವ ಸಂಪ್ರದಾಯವೂ ಇದೆ. ಇದರಿಂದ ವಿದ್ಯೆಗೆ ನಾಂದಿ ಹಾಡಲಾಗುತ್ತದೆ. ಶಾರದಾದೇವಿ ಸರಸ್ವತಿಯ ರೂಪ. ಜ್ಞಾನ, ವಿದ್ಯೆ, ಕಲೆ ಮತ್ತು ವಾಕ್ಚಾತುರ್ಯದ ದೇವಿ. ಪುರಾಣಗಳಲ್ಲಿ ಸರಸ್ವತಿಯನ್ನು ವಾಗ್ದೇವಿ, ವೇಣುವಾದಿನಿ, ವೀಣಾಪಾಣಿ ಎಂದು ಹೇಳಲಾಗಿದೆ. ನವರಾತ್ರಿಯಲ್ಲಿ ದುರ್ಗೆಯ ಆರಾಧನೆಗೆ ಜೊತೆಗೆ ಶಾರದೆಯನ್ನೂ ಪೂಜಿಸುವ ಪದ್ಧತಿ ಶತಮಾನಗಳಿಂದ ಬಂದಿದೆ.

ಶ್ರೀಕ್ಷೇತ್ರದಲ್ಲೂ ಜ್ಞಾನದ ಅಧಿದೇವತೆ ಶಾರದೆಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಪೂಜೆ ಮಾತ್ರವಲ್ಲದೆ ಕ್ಷೇತ್ರದ ವಿವಿಧ ಶಿಕ್ಷಣ ಸಂಸ್ಥೆಗಳ ಮೂಲಕ ಜ್ಞಾನ ಪಸರಿಸುವ ಕಾರ್ಯ ಹಲವು ದಶಕಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯ ಶಿಕ್ಷಣದ ಜೊತೆಜೊತೆಗೆ ಜೀವನ, ನೈತಿಕ, ಮಾನವೀಯ ಮೌಲ್ಯಗಳ ಅರಿವು ಮೂಡಿಸಲಾಗುತ್ತಿದೆ. ಶ್ರೀಕ್ಷೇತ್ರದಿಂದ ವಿವಿಧ ಪುಸ್ತಕ ಪ್ರಕಟಣೆ, ಸಂಗೀತ, ಕಲೆ, ನಾಟಕ, ಸಾಹಿತ್ಯಗಳಿಗೂ ನಿರಂತರ ಪೋ›ತ್ಸಾಹ ನೀಡಲಾಗುತ್ತಿದೆ. ವಿಶೇಷವಾಗಿ ವರ್ಷದಲ್ಲಿ 2 ತಿಂಗಳು ಪ್ರತಿದಿನ ಸಂಜೆ ಪುರಾಣ ವಾಚನ-ಪ್ರವಚನ, ನವರಾತ್ರಿಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿ ಶ್ರೀಸ್ವಾಮಿಗೆ ಸಾಹಿತ್ಯ-ಸಂಗೀತ ಸೇವೆ ನಡೆಸಲಾಗುತ್ತದೆ. ಈ ಮೂಲಕ ಸಾಹಿತ್ಯ, ಕಲೆಗಳನ್ನು ಉಳಿಸಿ ಬೆಳೆಸುವ ಮೂಲಕ ಪೋ›ತ್ಸಾಹ ನೀಡಲಾಗುತ್ತಿದೆ.

ವಿದ್ಯೆ ಮತ್ತು ಜ್ಞಾನವು ಮಾನವನ ಜೀವನದಲ್ಲಿ ಬೆಳಕಿನಂತೆ ಪಥದರ್ಶಕ ವಾಗುತ್ತದೆ. ಅಜ್ಞಾನವನ್ನು ಜ್ಞಾನವು ದೂರ ಮಾಡುತ್ತದೆ. ಶಾರದಾ ಪೂಜೆ ಕೇವಲ ಧಾರ್ವಿುಕ ಆಚರಣೆ ಅಲ್ಲ, ಅದು ವಿದ್ಯೆ, ಕಲೆ ಮತ್ತು ಸಂಸ್ಕೃತಿಯ ಹಬ್ಬ. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಪ್ರೇರಣೆ ನೀಡುವ ಈ ಹಬ್ಬ ಜೀವನದಲ್ಲಿ ಶ್ರೇಷ್ಠ ಗುರಿ ಸಾಧನೆಗೆ ಬುನಾದಿ ಹಾಕುತ್ತದೆ. ಸಮಾಜದಲ್ಲಿ ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಶಾರದಾ ಪೂಜೆಯ ಪಾತ್ರ ಮಹತ್ವದ್ದು. ಒಟ್ಟಿನಲ್ಲಿ ನವರಾತ್ರಿ ಸೇರಿದಂತೆ ಎಲ್ಲ ಹಬ್ಬಗಳು ನಮ್ಮ ಜೀವನದ ಔನ್ನತ್ಯಕ್ಕೆ ಪ್ರೇರಕವಾಗಿವೆ. ನಮ್ಮ ಬದುಕಿಗೆ ಮೌಲ್ಯಗಳನ್ನು ನೀಡುತ್ತವೆ. ಹಾಗಾಗಿ ನಾವು ಆಚರಿಸುವ ಪ್ರತಿ ಹಬ್ಬದ ಹಿನ್ನೆಲೆ, ಮಹತ್ವ ಅರಿಯೋಣ. ಹಬ್ಬದ ಮೂಲ ತತ್ವ ಮತ್ತು ಸತ್ವವನ್ನು ಉಳಿಸೋಣ. ಮುಂದಿನ ಪೀಳಿಗೆಗೆ ಪಸರಿಸೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net