

ಶಿಕಾರಿಪುರ: ನಮ್ಮ ತಾಲೂಕು ಶಾಂತಿ, ಸೌಹಾರ್ದತೆಗೆ ಹೆಸರಾಗಿದೆ. ನಾವು ಗಣೇಶೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿಂದ ಕಾನೂನು ಪರಿಧಿಯಲ್ಲಿ ನಡೆಸೋಣ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ಶನಿವಾರ ಹಿಂದು ಮಹಾಸಭಾ ಆಯೋಜಿಸಿದ್ದ ಗಣೇಶೋತ್ಸವದಲ್ಲಿ ಮಾತನಾಡಿದ ಅವರು, ನೀವೆಲ್ಲರೂ ಶ್ರದ್ಧಾಭಕ್ತಿಯಿಂದ ಗಣೇಶನ ಆರಾಧಿಸಿದ್ದೀರಿ. ಜಾತ್ರೆ, ಉತ್ಸವ, ಹಬ್ಬದ ಆಚರಣೆಗಳು ಹಿರಿಯರು ನಮಗೆ ಬಿಟ್ಟುಹೋದ ಬಳುವಳಿ. ಪ್ರತಿಯೊಂದು ಉತ್ಸವಗಳ ಹಿಂದೆ ಈ ಮಣ್ಣಿನ ಸೊಗಡಿದೆ ಎಂದರು.
ಲೋಕಕಲ್ಯಾಣಾರ್ಥ ದೈವ ಕಾರ್ಯಗಳಾಗಬೇಕು. ಇದರಿಂದ ನಾಡಿನೆಲ್ಲೆಡೆ ಮಳೆ-ಬೆಳೆ ಸಮೃದ್ಧಿಯಾಗುತ್ತದೆ. ಸದ್ವಿಚಾರಗಳು ಇಂತಹ ದೈವಕಾರ್ಯಗಳಿಂದ ಮನದಿಂದ ಮನಕ್ಕೆ ಹೃದಯದಿಂದ ಹೃದಯಕ್ಕೆ ತಲುಪುತ್ತವೆ. ಭಗವಂತನ ಕಾರ್ಯಗಳನ್ನು ಮಾಡುವುದರಿಂದ ನಮ್ಮ ಮನಸ್ಸು ರಾಗದ್ವೇಷಗಳಿಂದ ಮುಕ್ತವಾಗುತ್ತದೆ ಎಂದು ಹೇಳಿದರು.
ಮಹಾಗಣಪತಿ ಇಷ್ಟಾರ್ಥ ಕರುಣಿಸುವ ಮಹಾದೈವ. ಬರ, ಪ್ರವಾಹ ಮತ್ತಿತರ ಪ್ರಕೃತಿ ವಿಕೋಪಗಳಾಗದೆ, ರೋಗಗಳು ಬಾರದೆ ಜನತೆ ಸುಖ, ಸಮೃದ್ಧಿಯಿಂದ ಇರಬೇಕೆಂದು ಪ್ರಾರ್ಥಿಸುತ್ತೇನೆ. ತಾಲೂಕಿನ ಮಹಾಜನತೆಯ ಮತ್ತು ಜಿಲ್ಲೆಯ ಎಲ್ಲರ ಸಹಕಾರ, ಆಶೀರ್ವಾದದಿಂದ ಜನಸೇವೆ ಮಾಡುವ ಸದಾವಕಾಶ ಮತ್ತೆ ದೊರಕಿದೆ ಎಂದರು.
ಹಿಂದು ಮಹಾಸಭಾ ಅಧ್ಯಕ್ಷ ಎಸ್.ಸುರೇಂದ್ರ, ಎಸ್.ರವಿಸಿಂಗ್, ಸುರೇಶ್ ಹೂವಿನಮಂಡಿ, ಕಾರ್ಯದರ್ಶಿ ಗಿರೀಶ್ ಧಾರವಾಡ, ಬಿ.ಆರ್.ಭಗತ್, ಬಿ.ಆರ್.ಸುಭಾಷ್, ಚನ್ನವೀರಪ್ಪ, ಡಿ.ಎಲ್.ಬಸವರಾಜ್, ಸಂದೀಪ್, ಪೃಥ್ವಿರಾಜ್, ಹರೀಶ್, ಸುಂದರ್, ಯಾದವಮೂರ್ತಿ, ಮಹೇಶ್, ವೀರನ ಗೌಡ ಇತರರಿದ್ದರು.