ಒಂದೇ ಸೂರಿನಡಿ ಮಲೆನಾಡ ಕರಕುಶಲ ಉತ್ಸವ: ಫಲ-ಪುಷ್ಪ ಪ್ರದರ್ಶನ

poste
ಮಲೆನಾಡ ಕರಕುಶಲ ಉತ್ಸವ ಹಾಗೂ ಪುಷ್ಪಸಿರಿಯ ಪೋಸ್ಟರ್‌ನ್ನು ಎನ್.ಹೇಮಂತ್ ಬಿಡುಗಡೆ ಮಾಡಿದರು. ನಂದಿನಿ, ಜಿ.ಸವಿತಾ, ಸಿದ್ದಪ್ಪ ಹರಳೆಣ್ಣೆಯವರ್, ಎಸ್.ವಿ.ಚಂದ್ರಕಲಾ, ಯಲವಟ್ಟಿ ಮಲ್ಲಿಕಾರ್ಜುನ್ ಇದ್ದರು.
Published on

ಶಿವಮೊಗ್ಗ: ಪ್ರತಿ ವರ್ಷ ತೋಟಗಾರಿಕೆ ಇಲಾಖೆ ಆವರಣದಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನ ಮೊದಲ ಬಾರಿಗೆ ಫ್ರೀಡಂಪಾರ್ಕ್‌ಗೆ ಸ್ಥಳಾಂತರವಾಗಿದೆ. ಜ.24ರಿಂದ 26ರವರೆಗೆ ಪುಷ್ಪಸಿರಿ 62ನೇ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾಡಳಿತ ಅಂತಿಮ ಹಂತದ ಸಿದ್ಧತೆ ನಡೆಸುತ್ತಿದೆ ಎಂದು ಜಿಪಂ ಸಿಇಒ ಎನ್.ಹೇಮಂತ್ ತಿಳಿಸಿದರು.

ಫ್ರೀಡಂ ಪಾರ್ಕ್ ಆವರಣದಲ್ಲಿ ಒಂದೇ ಸೂರಿನಡಿ ಫಲ-ಪುಷ್ಪ ಪ್ರದರ್ಶನ, ಸ್ವಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ, ಮಲೆನಾಡ ಕರಕುಶಲ ಉತ್ಸವ ನಡೆಯಲಿದೆ. ಇದೇ ಆವರಣದಲ್ಲಿ ನರೇಗಾ ಯೋಜನೆ ಕುರಿತು ಮಾಹಿತಿ ಮೇಳವನ್ನೂ ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಪಂ, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಉದ್ಯಾನ ಕಲಾ ಸಂಘದ ಸಹಯೋಗದಲ್ಲಿ ಆಯೋಜಿಸಿರುವ ಮಲೆನಾಡ ಕರಕುಶಲ ಉತ್ಸವ ಹಾಗೂ ಪುಷ್ಪಸಿರಿ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಮೂರು ದಿನ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ವೀಕ್ಷಣೆಗೆ ಅವಕಾಶವಿದೆ ಎಂದರು.

ರೈತರು ಬೆಳೆದ ವಿಶೇಷವಾದ ಹೂವು, ಹಣ್ಣು, ತರಕಾರಿ, ತೋಟಗಾರಿಕೆ ಬೆಳೆಗಳ ಪ್ರದರ್ಶನವಿರುತ್ತದೆ. ಅತ್ಯುತ್ತಮ ಬೆಳೆಗೆ ಬಹುಮಾನವನ್ನೂ ನೀಡಲಾಗುತ್ತದೆ. ಸಸ್ಯದ ವಿವಿಧ ಭಾಗಗಳು, ಧಾನ್ಯಗಳು, ಹೂವುಗಳ ರಂಗೋಲಿ ಸ್ಪರ್ಧೆಯನ್ನು ಮಹಿಳೆಯರಿಗಾಗಿ ಆಯೋಜಿಸಲಾಗಿದೆ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ, ಜಿಪಂ ಯೋಜನಾ ನಿರ್ದೇಶಕಿ ನಂದಿನಿ, ಉದ್ಯಾನ ಕಲಾಸಂಘದ ಜಿಲ್ಲಾ ಉಪಾಧ್ಯಕ್ಷ ಸಿದ್ದಪ್ಪ ಹರಳೆಣ್ಣೆಯವರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net