ಬದಲಾವಣೆ ಪರ್ವ; ವಿವಾದದ ಬಿರುಗಾಳಿ ಮಧ್ಯೆ ವಿಕಾಸದ ತಂಗಾಳಿ

Narendra Modi
Published on

ಕೆಲವೇ ದಿನಗಳಲ್ಲಿ 2024ಕ್ಕೆ ವಿದಾಯ ಹೇಳಲಿದ್ದೇವೆ. ಸಾಧನೆ-ವೇದನೆಯ ಸಮ್ಮಿಶ್ರವಾಗಿದ್ದ ಈ ವರ್ಷ ಹಲವು ಮಹತ್ವದ ಬೆಳವಣಿಗೆ, ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದೆ. ಬರಲಿರುವ ಹೊಸ ವರ್ಷ (2025) ಹೆಚ್ಚು ಸಂತೋಷ, ಸಂತೃಪ್ತಿ, ನೆಮ್ಮದಿಯನ್ನು ತರಲಿ ಎಂಬ ಸದಾಶಯದೊಂದಿಗೆ ವಿಜಯವಾಣಿ ಈ ವರ್ಷದ ವಿದ್ಯಮಾನಗಳನ್ನು ಕಟ್ಟಿಕೊಡುತ್ತಿದೆ. ಕಳೆದ ಹನ್ನೆರಡು ವರ್ಷಗಳಿಂದ ಓದುಗರ ಮೆಚ್ಚುಗೆಗೆ ಪಾತ್ರವಾಗಿರುವ ಈ ‘ಸಮಗ್ರ ನೋಟ’ ಸರಣಿ ಡಿಸೆಂಬರ್ 31ರವರೆಗೆ ಮುಂದುವರಿಯಲಿದೆ.

ಚುನಾವಣೆ ವರ್ಷವಾದ 2024ರಲ್ಲಿ ಭಾರತದ ರಾಜಕೀಯ ಹೊಸ ತಿರುವನ್ನು ಪಡೆಯಿತು. ಬಿಜೆಪಿಯ ಅತಿಯಾದ ಆತ್ಮವಿಶ್ವಾಸಕ್ಕೆ ಮತದಾರರು ತಕ್ಕ ಉತ್ತರ ನೀಡಿದರೆ, ಒಂದು ದಶಕದ ಬಳಿಕ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಅಲಂಕರಿಸಿತು. ಮೋದಿ ವರ್ಚಸ್ಸು ಮುಂದುವರಿದರೂ, ಮೈತ್ರಿಪಕ್ಷಗಳ ಜತೆಗೆ ಸಾಗುವುದು ಅನಿವಾರ್ಯವಾಯಿತು. ಇನ್ನು, ಐಎನ್‌ಡಿಐಎ ಒಕ್ಕೂಟದ ಮಿತ್ರರೇ ಪರಸ್ಪರ ಕಿತ್ತಾಟದಲ್ಲಿ ತೊಡಗಿದ್ದು, ಮೈತ್ರಿಕೂಟದ ನೇತೃತ್ವ ಕಾಂಗ್ರೆಸ್ 'ಕೈ' ತಪ್ಪಿದರೂ ಅಚ್ಚರಿ ಇಲ್ಲ.

ರಾಘವ ಶರ್ಮ ಮೂರನೇ ಬಾರಿಗೆ ಲೋಕಸಭೆ ಚುನಾವಣೆ ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಹೊಸ ಇತಿಹಾಸ ಸೃಷ್ಟಿಸಿದ ವರ್ಷವಿದು. ತಮ್ಮ ಮಹತ್ವಾಕಾಂಕ್ಷೆಯ 400 ಸ್ಥಾನ ಗೆಲ್ಲುವ ಗುರಿ ತಲುಪಲು ವಿಫಲವಾದರೂ, ಎನ್​ಡಿಎ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷ ಮತ್ತು ಬಿಹಾರದ ಸಂಯುಕ್ತ ಜನತಾ ದಳ ಎನ್​ಡಿಎಯಲ್ಲಿ ದೃಢವಾಗಿ ನಿಲ್ಲುವ ಮೂಲಕ ವಿಪಕ್ಷಗಳಿಗೆ ಅವಕಾಶ ನೀಡಲಿಲ್ಲ. ನರೇಂದ್ರ ಮೋದಿ ಐತಿಹಾಸಿಕ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಕಾಂಗ್ರೆಸ್ ಸೀಟುಗಳ ಸಂಖ್ಯೆ 52ರಿಂದ 99ಕ್ಕೇರಿತು. ಉತ್ತರ ಪ್ರದೇಶದಲ್ಲಿ ಬಿಜೆಪಿ ಸೀಟುಗಳ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದ್ದರಿಂದ ಬಿಜೆಪಿಗೆ ಏಕಾಂಗಿಯಾಗಿ 272ರ ಬಹುಮತ ಗಳಿಸಲಾಗಲಿಲ್ಲ. ಇದು ಪಿಎಂ ಮೋದಿ, ಗೃಹ ಸಚಿವ ಅಮಿತ್ ಷಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರಲ್ಲಿ ಇರಿಸುಮುರಿಸು ಉಂಟು ಮಾಡಿದ್ದು ಸುಳ್ಳಲ್ಲ. ರಾಮ ಮಂದಿರ ನಿರ್ವಣವಾದ ಚಾರಿತ್ರಿಕ ಘಟನೆಯ ನಂತರವೂ ಅಯೋಧ್ಯೆ ಲೋಕಸಭೆ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದೆದುರು ಬಿಜೆಪಿ ಸೋತದ್ದು ಭಾರೀ ಅಚ್ಚರಿಗೆ ಕಾರಣವಾಗಿತ್ತು.

ಮಹಾರಾಷ್ಟ್ರದಲ್ಲಿ ಬಿಜೆಪಿ ಅಬ್ಬರ: ಲೋಕಸಭೆ ಚುನಾವಣೆಯಲ್ಲಿ ನಿರಾಶಾದಾಯಕ ನಿರ್ವಹಣೆ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಬಿಜೆಪಿ ಉತ್ಸಾಹ ಇಮ್ಮಡಿಗೊಳಿಸಿದೆ. 145ರಲ್ಲಿ 132 ಸ್ಥಾನಗಳನ್ನು ಗೆದ್ದ ಬಿಜೆಪಿ, ಶೇ. 88ಕ್ಕಿಂತಲೂ ಹೆಚ್ಚು ಸ್ಟ್ರೆ ೖಕ್ ರೇಟ್​ನ ಸಾಧನೆ ಮಾಡಿತು. ಶಿವಸೇನೆಯ ಏಕನಾಥ್ ಶಿಂಧೆ ಬದಲಿಗೆ ಬಿಜೆಪಿಯ ದೇವೇಂದ್ರ ಫಡ್ನವಿಸ್ ಸಿಎಂ ಸ್ಥಾನಕ್ಕೇರಿದರು. ಶಿಂಧೆ ಮತ್ತು ಎನ್​ಸಿಪಿಯ ಅಜಿತ್ ಪವಾರ್​ಗೆ ಡಿಸಿಎಂ ಹುದ್ದೆ ಒಲಿದಿದೆ. ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಕಾಂಗ್ರೆಸ್, ಶರದ್ ಪವಾರ್ ನಾಯಕತ್ವದ ಎನ್​ಸಿಪಿ ಒಳಗೊಂಡ ಮಹಾವಿಕಾಸ್ ಅಘಾಡಿ ಹೀನಾಯ ಸೋಲುಂಡು ತಲೆಎತ್ತಲಾಗದ ಸ್ಥಿತಿಯಲ್ಲಿದೆ.

Mahayuti

ಕೇಜ್ರಿವಾಲ್ ರಾಜೀನಾಮೆ: ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೈಲಿನಿಂದ ಹೊರಬಂದರೂ, ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜೈಲಿನಲ್ಲಿದ್ದಷ್ಟು ದಿನ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಸೆಪ್ಟೆಂಬರ್​ನಲ್ಲಿ ರಾಜೀನಾಮೆ ನೀಡಿ, ಸಚಿವೆ ಆತಿಷಿ ಮರ್ಲೆನಾ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸಿದ್ದಾರೆ. ಹೆಚ್ಚುಕಡಿಮೆ 2 ವರ್ಷಗಳಿಂದ ಜೈಲಿನಲ್ಲಿದ್ದ ಮಾಜಿ ಡಿಸಿಎಂ ಮನೀಷ್ ಸಿಸೋಡಿಯಾಗೂ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದ್ದರಿಂದ ಅವರೂ 2025ರ ವಿಧಾನಸಭೆ ಚುನಾವಣೆ ತಯಾರಿಯಲ್ಲಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಹಲವು ಜನಪ್ರಿಯ (ಉಚಿತ) ಯೋಜನೆಗಳ ಮೂಲಕ ಮತ್ತೆ ಜನರನ್ನು ಸೆಳೆಯಲು ಕೇಜ್ರಿವಾಲ್ ಮುಂದಾಗುತ್ತಿದ್ದಾರೆ. ಹಾಗಂತ, ದೆಹಲಿಯ ಆರ್ಥಿಕ ಭಾರ ಹೆಚ್ಚುತ್ತಲೇ ಇದೆ.

Aravind Kejriwal

ಹರ್ಯಾಣದಲ್ಲಿ ಅಚ್ಚರಿಯ ಗೆಲುವು: ಹರ್ಯಾಣದಲ್ಲಿ ಪ್ರಬಲ ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ಅಧಿಕಾರ ಉಳಿಸಿಕೊಳ್ಳುವ ಮೂಲಕ ಬಿಜೆಪಿ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರಗಳನ್ನೇ ತಲೆಕೆಳಗು ಮಾಡಿತು. ಚುನಾವಣೆ ಪೂರ್ವ ಸಮೀಕ್ಷೆಗಳೂ ಸುಳ್ಳಾದವು. ನಾಯಕತ್ವದ ವಿಷಯದಲ್ಲಿ ಸಮಯೋಚಿತ ಬದಲಾವಣೆ, ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಬದಲಿಗೆ ನಯಾಬ್ ಸಿಂಗ್ ಸೈನಿಯವರಿಗೆ ನಾಯಕತ್ವ ನೀಡಿದ್ದು ಬಿಜೆಪಿ ಗೆಲುವಲ್ಲಿ ನಿರ್ಣಾಯಕ ಪಾತ್ರವಹಿಸಿತು. ಟಿಕೆಟ್ ಹಂಚಿಕೆಯಲ್ಲಿ ಅನುಸರಿಸಿದ ನೀತಿಗಳೂ ಪಕ್ಷಕ್ಕೆ ಅನುಕೂಲಕರ ವಾತಾವರಣ ರೂಪಿಸಿತು. ಈ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಏರುವ ಮೂಲಕ ಬಿಜೆಪಿ ಹೊಸ ದಾಖಲೆಯನ್ನು ಬರೆಯಿತು. ಆದರೆ, ಹರ್ಯಾಣದ ಸೋಲನ್ನು ಕಾಂಗ್ರೆಸ್​ಗೆ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

Nayad Singh Saini

ಕಣಿವೆಯಲ್ಲಿ ಮರಳಿದ ನ್ಯಾಷನಲ್ ಕಾನ್ಪರೆನ್ಸ್: ಸುದೀರ್ಘ 10 ವರ್ಷಗಳ ನಂತರ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆದು, ಒಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಪರೆನ್ಸ್ ಅಧಿಕಾರದ ಗದ್ದುಗೆ ಏರಿದೆ. 2019ರಲ್ಲಿ ಸಂವಿಧಾನದ ಆರ್ಟಿಕಲ್ 370 ಹಿಂಪಡೆದ ನಂತರ ಮೊದಲ ಬಾರಿಗೆ ನಡೆದ ಚುನಾವಣೆ ಇದಾಗಿತ್ತು. ಚುನಾವಣೆಯಲ್ಲಿ ಎನ್​ಸಿ 42, ಬಿಜೆಪಿ 29 ಸೀಟು ಗೆದ್ದಿತು. ಬಿಜೆಪಿ ಜಮ್ಮುವಿನಲ್ಲಿ ಗೆದ್ದರೆ, ಮುಸ್ಲಿಂ ಬಾಹುಳ್ಯದ ಕಾಶ್ಮೀರದಲ್ಲಿ ಒಂದೇ ಒಂದು ಸೀಟು ಗೆಲ್ಲಲಿಲ್ಲ. ಒಂದೊಮ್ಮೆ ಪ್ರಬಲ ರಾಜಕೀಯ ಶಕ್ತಿಯಾಗಿದ್ದ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ ಕೇವಲ 3 ಕ್ಷೇತ್ರದಲ್ಲಷ್ಟೇ ಗೆದ್ದು ಪ್ರಭಾವ ಕಳೆದುಕೊಂಡಿತು. ಈ ನಡುವೆ, ರಾಜ್ಯ ಸ್ಥಾನಮಾನಕ್ಕಾಗಿ ಎನ್​ಸಿ ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ. ಈ ವಿಷಯದಲ್ಲಿ ಕೇಂದ್ರದ ನಿಲುವು ಇನ್ನೂ ನಿಗೂಢ.

ಜೈಲಿಗೆ ಹೋಗಿಬಂದು ಅಧಿಕಾರಕ್ಕೇರಿದರು!: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್​ರದ್ದು 2024ರಲ್ಲಿ ನಾಟಕೀಯ ಪ್ರಯಾಣ. ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಜೈಲು ಪಾಲಾಗಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಹೇಮಂತ್ ಸೊರೇನ್, ಜೈಲಿಂದ ವಾಪಸಾಗಿ ಮತ್ತೆ ಸಿಎಂ ಆದರು. ಸೊರೇನ್ ವಾಪಸಾತಿಯಿಂದ ಚಂಪೈ ಸೊರೇನ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯ್ತು. ಒಳಗೊಳಗೇ ಸಿಟ್ಟಾದ ಚಂಪೈ ಬಿಜೆಪಿ ಸೇರಿದರು. ಆದರೆ, ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೇಮಂತ್ ಸೊರೇನ್ ಪಕ್ಷ ಭರ್ಜರಿ ಗೆಲುವು ಸಾಧಿಸಿತು. ಸೊರೇನ್ ಪತ್ನಿ ಕಲ್ಪನಾ ಸೊರೇನ್ ಕೂಡ ಜನಮನ್ನಣೆ ಗಳಿಸಿದರು. ಬಿಜೆಪಿಯ ಹತ್ತು-ಹಲವು ತಂತ್ರಗಾರಿಕೆಗಳು ಪಕ್ಷವನ್ನು ಅಧಿಕಾರಕ್ಕೇರಿಸಲು ಯಶಸ್ವಿಯಾಗಲಿಲ್ಲ.

soren

ವಯನಾಡ್​ನಿಂದ ರಾಯ್ಬರೇಲಿಗೆ: 2024ರ ಲೋಕಸಭೆ ಚುನಾವಣೆಯಲ್ಲಿ ವಯನಾಡ್ ಮತ್ತು ರಾಯ್ಬರೇಲಿಯಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಎರಡೂ ಕ್ಷೇತ್ರಗಳಲ್ಲಿ ಗೆದ್ದರು. ಆದರೆ, ಹಿಂದೆ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸಿದ್ದ ರಾಯ್ಬರೇಲಿ ಉಳಿಸಿಕೊಂಡ ರಾಹುಲ್, ವಯನಾಡ್​ನ್ನು ಪ್ರಿಯಾಂಕಾಗೆ ನೀಡಿ, ಕ್ಷೇತ್ರದ ಜತೆಗಿನ ಒಡನಾಟ ಮುಂದುವರಿಯುವಂತೆ ನೋಡಿಕೊಂಡಿದ್ದಾರೆ. ನಿರೀಕ್ಷೆಯಂತೆ, ರಾಹುಲ್ ಗಾಂಧಿ ಲೋಕಸಭೆ ವಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಅಥವಾ ರಾಹುಲ್ ಗಾಂಧಿಗೆ ಇನ್ನೂ ಪೂರ್ಣ ನಾಯಕತ್ವ ಸಿಕ್ಕಿಲ್ಲ.

ಪ್ರಿಯಾಂಕಾ ಪ್ರವೇಶ: ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣಾ ರಾಜಕೀಯಕ್ಕೆ ಬರಬೇಕು, ಕಾಂಗ್ರೆಸ್ ಪಕ್ಷದ ಉತ್ಸಾಹ ಹೆಚ್ಚಿಸಬೇಕು ಎಂಬ ಬೇಡಿಕೆಗೆ ತಕ್ಕಂತೆ ವಯನಾಡ್ ಲೋಕಸಭೆ ಉಪ ಚುನಾವಣೆ ಸ್ಪರ್ಧಿಸಿದ ಪ್ರಿಯಾಂಕಾ, ನವೆಂಬರ್​ನಲ್ಲಿ ಲೋಕಸಭೆ ಸಂಸದರಾಗಿ ಸಂಸತ್ ಪ್ರವೇಶಿಸಿದ್ದಾರೆ. ಉಪ ಚುನಾವಣೆಯಲ್ಲಿ ಪ್ರಿಯಾಂಕಾ 64.99% ಮತಗಳಿಸಿದರು. ಉತ್ತರ ಪ್ರದೇಶದ ಪಕ್ಷ ಸಂಘಟನೆಗಷ್ಟೇ (ಮುಖ್ಯವಾಗಿ ರಾಯ್ಬರೇಲಿ, ಅಮೇಠಿ) ಸೀಮಿತವಾಗಿದ್ದ ಪ್ರಿಯಾಂಕಾ, ರಾಷ್ಟ್ರೀಯ ಸ್ತರದಲ್ಲಿ ಪಕ್ಷದ ಗಟ್ಟಿ ಧ್ವನಿಯಾಗಿ ಹೊರಹೊಮ್ಮಲಿದ್ದಾರೆ ಎಂಬ ನಿರೀಕ್ಷೆ ಕಾರ್ಯಕರ್ತರದ್ದು. ಪಕ್ಷದ ಪ್ರಮುಖ ನಾಯಕಿಯಾದರೂ, ಸೋದರ ರಾಹುಲ್ ಗಾಂಧಿ ಬಿಟ್ಟುಕೊಟ್ಟ, ಭಾರೀ ಜಿದ್ದಾಜಿದ್ದಿ ಇಲ್ಲದ ಸುರಕ್ಷಿತ ಲೋಕಸಭೆ ಕ್ಷೇತ್ರ ಆಯ್ದುಕೊಂಡು ಲೋಕಸಭೆ ಪ್ರವೇಶಿಸಿದರು ಎನ್ನುವುದೂ ಇಲ್ಲಿ ಉಲ್ಲೇಖಾರ್ಹ.

Rahul Priyanka

ಪಟ್ನಾಯಕ್​ಗೆ ಅನಿರೀಕ್ಷಿತ ಸೋಲು: ಒಡಿಶಾದಲ್ಲಿ ಹಲವು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಬಿಜು ಜನತಾದಳದ ನವೀನ್ ಪಟ್ನಾಯಕ್​ಗೆ 2024 ವರ್ಷ ಭಾರೀ ರಾಜಕೀಯ ಹೊಡೆತ ನೀಡಿತು. ಅನಿರೀಕ್ಷಿತ ಎಂಬಂತೆ, ಅವರ ನೇತೃತ್ವದ ಬಿಜೆಡಿ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋಲುಂಡಿತು. 24 ವರ್ಷಗಳ ಕಾಲ ಒಡಿಶಾದಲ್ಲಿ ಆಡಳಿತ ನಡೆಸಿದ್ದ ಪಟ್ನಾಯಕ್ ಪಕ್ಷದ ಸಂಖ್ಯಾಬಲ 51ಕ್ಕೆ ಇಳಿಯಿತು. 78 ಕ್ಷೇತ್ರಗಳಲ್ಲಿ ವಿಜಯಿಯಾದ ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರಿತು. ಶಾಸಕ ಮೋಹನ್ ಚರಣ್ ಮಾಂಝಿಗೆ ಸಿಎಂ ಸ್ಥಾನ ಒಲಿಯಿತು.

ಆಂಧ್ರದಲ್ಲಿ ಮರಳಿ ಬಂದ ಬಾಬು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆಂಧ್ರ ವಿಧಾನಸಭೆ ಚುನಾವಣೆ ನಡೆದು, ಟಿಡಿಪಿ-ಬಿಜೆಪಿ-ಜನಸೇನಾ ಒಳಗೊಂಡ ಮೈತ್ರಿಕೂಟದ ಬಿರುಗಾಳಿಗೆ ಮಾಜಿ ಸಿಎಂ ಜಗನ್‌ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಧೂಳೀಪಟಗೊಂಡಿತು. ಜನಸೇನಾದ ನಾಯಕ, ಡಿಸಿಎಂ ಪವನ್ ಕಲ್ಯಾಣ್ ಕೂಡ ಅತುದ್ಭುತ ನಿರ್ವಹಣೆ ಮೂಲಕ ರಾಜಕೀಯ ರಂಗದಲ್ಲಿ ಭಾರೀ ಅಲೆ ಸೃಷ್ಟಿಸಿದರು. ಅತ್ತ ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷ ಕಾಂಗ್ರೆಸ್ ಎದುರು ಹೀನಾಯ ಸೋಲು ಕಂಡಿತು. ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತು.

ಮಣಿಪುರ ಬಿಕ್ಕಟ್ಟು: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಪ್ರಾರಂಭಗೊಂಡ ಮೈತೇಯಿ ಮತ್ತು ಕುಕಿ-ಜೋ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರ 2024ರಲ್ಲೂ ಮುಂದುವರಿದಿರುವುದು ದುರಂತ. ಅಲ್ಲಿನ ಪರಿಸ್ಥಿತಿ ಸುಧಾರಿಸುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹಿಂಸಾಚಾರದ ಹಲವು ಘಟನೆಗಳು ರಾಜ್ಯದ ಸ್ಥಿರತೆಯನ್ನು ಕಡಿಮೆಗೊಳಿಸುತ್ತಿವೆ. ಈ ನಿರಂತರ ಬಿಕ್ಕಟ್ಟು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡಕ್ಕೂ ಸವಾಲಾಗಿ ಪರಿಣಮಿಸಿದೆ. ಮಣಿಪುರ ವಿಷಯವಿಟ್ಟುಕೊಂಡು ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಪ್ರಧಾನಿ ಮೋದಿ ಅವರನ್ನು ಗುರಿ ಮಾಡುತ್ತಲೇ ಇವೆ. ‘ವಿದೇಶಗಳಿಗೆ ಹೋಗಲು ಸಮಯವಿದೆ, ಪ್ರಧಾನಿಗೆ ಮಣಿಪುರಕ್ಕೆ ಭೇಟಿ ನೀಡಲು ಸಮಯವೇ ಇಲ್ಲ’ ಎಂದು ಟೀಕಿಸುತ್ತಲೇ ಇವೆ. ಹೀಗಿದ್ದರೂ, ಪಿಎಂ ಮಣಿಪುರಕ್ಕೆ ಭೇಟಿ ನೀಡದಿರುವುದು ಹಲವರಲ್ಲಿ ಅಚ್ಚರಿ ತಂದಿರುವುದು ಸುಳ್ಳಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net