

ಬೆಂಗಳೂರು: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವ ಪ್ರಕ್ರಿಯೆಯನ್ನು ಏಳು ದಿನಗಳಿಗೆ ಇಳಿಸಿ ಸರಳಗೊಳಿಸುವ ಯೋಜನೆಯನ್ನು ಸುಗ್ರೀವಾಜ್ಞೆಯ ಮೂಲಕ ದೀಪಾವಳಿಗೆ ರಾಜ್ಯಾದ್ಯಂತ ಜಾರಿಗೆ ತರಲು ಸರ್ಕಾರ ತೀರ್ವನಿಸಿದೆ.
ಕಾವೇರಿ -2 ತಂತ್ರಾಂಶವನ್ನು ಸರ್ಕಾರ ಸಿದ್ಧಪಡಿಸಿದ್ದು, ಅದರ ಮೂಲಕವೇ ಭೂ ಪರಿವರ್ತನೆಯ ಸರಳೀಕರಣ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಯಾವ ನಗರಗಳಲ್ಲಿ ಮಾಸ್ಟರ್ ಪ್ಲಾ್ಯನ್ ಇದೆಯೋ ಅಂತಹ ಕಡೆ ಅರ್ಜಿ ಸಲ್ಲಿಸಿದ ಏಳು ದಿನಗಳಲ್ಲಿ ಭೂ ಪರಿವರ್ತನೆ ಆಗುತ್ತದೆ. ಮಾಸ್ಟರ್ ಪ್ಲಾ್ಯನ್ ಇಲ್ಲದ ಕಡೆಗಳಲ್ಲಿ 30 ದಿನದಲ್ಲಿ ಆಗುತ್ತದೆ. ಮೊದಲು ಅರ್ಜಿದಾರರು ಹಲವು ಅನುಮತಿಗಳಿಗಾಗಿ ಬೇರೆ ಬೇರೆ ಕಡೆಗಳಲ್ಲಿ ಹೋಗಬೇಕಾಗಿತ್ತು. ಈಗ ನೇರವಾಗಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದರೆ, ಅವರೇ ಭೂಮಿ ಪರಿವರ್ತನೆ ಮಾಡಿಕೊಡಲಿದ್ದಾರೆ ಎಂದು ವಿವರಿಸಿದರು. ಜಿಲ್ಲಾಧಿಕಾರಿ ಅರ್ಜಿಯನ್ನು 7 ದಿನದಲ್ಲಿ ವಿಲೇವಾರಿ ಮಾಡದೇ ಹೋದರೆ 15 ದಿನಗಳ ಒಳಗೆ ತಾನಾಗಿಯೇ ಭೂಮಿ ಪರಿವರ್ತನೆ ಆದೇಶ ಆಗಲಿದೆ. ಇದಕ್ಕೆ ಜಿಲ್ಲಾಧಿಕಾರಿಯ ಡಿಜಿಟಲ್ ಸಹಿ ಬಳಕೆಯಾಗುತ್ತದೆ. ಜಿಲ್ಲಾಧಿಕಾರಿ ಸಹ ಇದನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು. ಭೂಮಿ ಪರಿವರ್ತನೆ ಮಾಡಿಸಿಕೊಳ್ಳುವವರು ಸಲ್ಲಿಸುವ ಪ್ರಮಾಣಪತ್ರದಲ್ಲಿ ಲೋಪಗಳಿದ್ದರೆ ಭೂಮಿ ಪರಿವರ್ತನೆ ರದ್ದಾಗಿ, ಕಟ್ಟಿದ್ದ ಹಣವನ್ನು ವಾಪಸ್ ನೀಡುವುದಿಲ್ಲ. ಭೂಮಿ ಪರಿವರ್ತನೆ ಸರಳ ಮಾಡಿರುವುದರಿಂದ ಕಂದಾಯ ಇಲಾಖೆಯಲ್ಲಿ ಲಂಚಕ್ಕೆ ಬ್ರೇಕ್ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಖಾತೆ ಅವಧಿ ಸಹ ಇಳಿಕೆ: ಯಾವುದೇ ಆಸ್ತಿ ನೋಂದಣಿಯಾದ 35 ದಿನಗಳಲ್ಲಿ ಖಾತೆಯಾಗಬೇಕಾಗುತ್ತದೆ. ಈ ಅವಧಿಯನ್ನು ಸಹ 7 ದಿನಗಳಿಗೆ ಇಳಿಸಲಾಗಿದೆ. ಇದರಿಂದ ನೋಂದಣಿ ಮಾಡಿಸುವವರಿಗೆ ಅನುಕೂಲವಾಗುತ್ತದೆ ಎಂದು ಸಚಿವ ಆರ್. ಅಶೋಕ್ ಅಭಿಪ್ರಾಯಪಟ್ಟರು.
ಕೇಂದ್ರೀಕೃತ ಸರ್ವರ್ ವ್ಯವಸ್ಥೆ: ನೋಂದಣಿ ಇಲಾಖೆಯಲ್ಲಿ ಈಗ ಸರ್ವರ್ ಸಮಸ್ಯೆ ಹೆಚ್ಚಾಗಿದೆ ಎಂಬ ದೂರುಗಳಿವೆ. ಸರ್ವರ್ ಅಳವಡಿಕೆ ಹಾಗೂ ನಿರ್ವಹಣೆಯನ್ನು ಬೇರೆ ಬೇರೆ ಏಜೆನ್ಸಿಗಳಿಗೆ ನೀಡಿರುವುದೇ ಇದಕ್ಕೆ ಕಾರಣವಾಗಿದೆ. ಈ ಸಮಸ್ಯೆ ತಪ್ಪಿಸಲು ಒಂದೇ ಏಜೆನ್ಸಿಗೆ ನೀಡುವುದರೊಂದಿಗೆ ಕೇಂದ್ರೀಕೃತ ಸರ್ವರ್ ಅಳವಡಿಕೆ ಮಾಡಲಾಗುತ್ತಿದೆ ಎಂದು ಅಶೋಕ್ ತಿಳಿಸಿದರು.
ಕಾವೇರಿ -2 ಜಾರಿಗೆ ಬಂದರೆ ನೋಂದಣಿಗೆ ಸಮಯ ತೆಗೆದುಕೊಳ್ಳುವುದಿಲ್ಲ. ಸಮಯ ಮತ್ತು ದಿನವನ್ನು ನಿಗದಿ ಮಾಡಿಕೊಂಡು ನೋಂದಣಿ ಕಚೇರಿಗೆ ಹೋದರೆ ಕೇವಲ 3 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಮುಗಿದು ಹೋಗಿರುತ್ತದೆ ಎಂದು ವಿವರಿಸಿದರು.
ರಾಜ್ಯದ ಕೆಲವು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಶೌಚಗೃಹ, ಕುಳಿತುಕೊಳ್ಳಲು ಜಾಗ, ರ್ಪಾಂಗ್ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಇದೆ. ಇವುಗಳೆಲ್ಲ ಖಾಸಗಿ ಕಟ್ಟಡಗಳಲ್ಲಿ ಇರುವ ಕಚೇರಿಗಳಾಗಿವೆ. ಇಂತಹ ಕಚೇರಿಗಳನ್ನು ಕೂಡಲೇ ಎಲ್ಲ ಸೌಲಭ್ಯ ಇರುವ ಕಡೆ ಸ್ಥಳಾಂತರ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ಅಶೋಕ್ ಹೇಳಿದರು.
ಸುಗ್ರೀವಾಜ್ಞೆ ಮೂಲಕ ಜಾರಿ: ಭೂಪರಿವರ್ತನೆ ಸರಳ ಮಾಡುವ ಕಾನೂನು ಸಿದ್ಧವಾಗಿ ಸಂಪುಟ ಒಪ್ಪಿಗೆ ನೀಡಿದೆ. ಅಧಿವೇಶನದಲ್ಲಿ ಮಂಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಸುಗ್ರೀವಾಜ್ಞೆಯ ಮೂಲಕ ಜಾರಿ ಮಾಡಲಾಗುತ್ತದೆ. ಮುಂದಿನ ಅಧಿವೇಶನದಲ್ಲಿ ವಿಧೆಯಕ ಮಂಡಿಸಲಾಗುತ್ತದೆ ಎಂದು ಅಶೋಕ್ ಹೇಳಿದರು. ಕಂದಾಯ ಭೂಮಿಯಲ್ಲಿನ ನಿವೇಶನಗಳಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಅನುಕೂಲವಾಗುವಂತೆ ಅಲ್ಲಿಯೂ ಭೂ ಪರಿವರ್ತನೆ ಮಾಡಿಕೊಡಲಾಗುವುದು. ಆದರೆ, ಅಂತಹ ನಿವೇಶನಗಳಿಗೆ ದಂಡ ಹಾಕಲಾಗುತ್ತದೆ ಎಂದು ಅಶೋಕ್ ತಿಳಿಸಿದರು. ಕಂದಾಯ ಜಾಗದ ನಿವೇಶನಗಳಿಗೂ ಭೂ ಪರಿವರ್ತನೆಯಲ್ಲಿ ಅವಕಾಶ ನೀಡುವುದರಿಂದ ಮನೆ ಸಾಲಕ್ಕೆ ಅವಕಾಶ ಆಗುತ್ತದೆ ಎಂದರು.
ರಾಜ್ಯದ ಪ್ರವಾಸಿ ತಾಣಗಳಲ್ಲಿರುವ ಪ್ರವಾಸಿಗೈಡ್ಗಳಿಗೂ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗೈಡ್ಗಳಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು 2 ಸಾವಿರ ರೂ. ಸಹಾಯಧನ ನೀಡುವ ಯೋಜನೆ ಯನ್ನು ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು. ಆ ಮೊತ್ತವನ್ನು 5 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾಗೆಯೇ, ಗೈಡ್ಗಳಿಗೆ ಬಹುಭಾಷೆ ಕಲಿಸಲು ತರಬೇತಿ ಕೊಡಿಸಲು ಕ್ರಮ, ಸರ್ಕಾರದಿಂದ ಸಮವಸ್ತ್ರ, ಬ್ಯಾಡ್ಜ್ ನೀಡಲು ಸಹ ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು (ಡಿಎ) ಶೇಕಡ 4ರಷ್ಟು ಏರಿಕೆ ಮಾಡಲಾಗಿದ್ದು 47.68 ಲಕ್ಷ ಉದ್ಯೋಗಿಗಳು ಹಾಗೂ 68.62 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಇದೇ ವರ್ಷ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಡಿ.ಎ. ಹೆಚ್ಚಳ ಮಾಡಲು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಮೂಲ ವೇತನದ ಶೇ. 38ರಷ್ಟು ಡಿ.ಎ. ನೀಡಲು ನಿರ್ಧರಿಸಲಾಗಿದೆ. ಹಿಂದಿನದ್ದಕ್ಕಿಂತ ಶೇ. 4ರಷ್ಟು ಹೆಚ್ಚಳವಾಗಿದೆ. ಕೇಂದ್ರ ನೌಕರರು ಹಾಗೂ ನಿವೃತ್ತರಿಗೆ ತುಟ್ಟಿ ಭತ್ಯೆ ಏರಿಕೆಯಿಂದಾಗಿ ಬೊಕ್ಕಸಕ್ಕೆ 2022-23ನೇ ಸಾಲಿನಲ್ಲಿ ವಾರ್ಷಿಕ 6,591 ಕೋಟಿ ರೂಪಾಯಿ ವೆಚ್ಚವಾಗಲಿದೆ. ಪ್ರಸಕ್ತ 2022-23ನೇ ಸಾಲಿನ ಹಣಕಾಸು ವರ್ಷದಲ್ಲಿ (2022 ಜುಲೈನಿಂದ 2023 ಫೆಬ್ರವರಿ) 4,394 ಕೋಟಿ ರೂಪಾಯಿ ಅಧಿಕ ಖರ್ಚಾಗಲಿದೆ. ರಕ್ಷಣಾ ಪಡೆಗಳ ಸಿಬ್ಬಂದಿಗೂ ಡಿಎ ಹೆಚ್ಚಳ ಅನ್ವಯವಾಗಲಿದೆ. ತುಟ್ಟಿ ಭತ್ಯೆ ಹಾಗೂ ತುಟ್ಟಿ ಭತ್ಯೆ ಪರಿಹಾರ ಸೇರಿ ಪ್ರತಿ ವರ್ಷ 12,852.56 ಕೋಟಿ ರೂಪಾಯಿ ಅಧಿಕ ಹೊರೆಯಾಗಲಿದೆ. ಪ್ರಸಕ್ತ ಸಾಲಿನಲ್ಲಿ 8,568.36 ಕೋಟಿ ರೂ. ಆಗುತ್ತದೆ ಎಂದು ಸರ್ಕಾರ ವಿವರಿಸಿದೆ.
ಕರೊನಾ ಸಾಂಕ್ರಾಮಿಕತೆ ಕಾಲದಲ್ಲಿ ಜಾರಿ ಮಾಡಲಾಗಿದ್ದ ಉಚಿತ ಪಡಿತರ ವ್ಯವಸ್ಥೆಯನ್ನು ಡಿಸೆಂಬರ್ವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ಸಭೆ ನಿರ್ಧರಿಸಿದೆ. ಇದಕ್ಕಾಗಿ ಅಂದಾಜು 44,000 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತದೆಂದು ವಾರ್ತೆ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಬುಧವಾರ ತಿಳಿಸಿದ್ದಾರೆ. ಕೋವಿಡ್ ವೇಳೆ ಆರಂಭಿಸಲಾಗಿದ್ದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅನ್ವಯ ಬಡಕುಟುಂಬಗಳ ಪ್ರತಿಯೊಬ್ಬರಿಗೆ ಮಾಸಿಕ ಐದು ಕೆ.ಜಿ. ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಸೆಪ್ಟೆಂಬರ್ 30ರಂದು ಮುಗಿಯಲಿದ್ದ ಯೋಜನೆಯನ್ನು ಹಬ್ಬಗಳ ಹಿನ್ನೆಲೆಯಲ್ಲಿ ವಿಸ್ತರಿಸಲಾಗುತ್ತಿದೆ.
ಉಚಿತ ಪಡಿತರ ಯೋಜನೆಯ ವಿಸ್ತರಣೆಯಿಂದ ಕೋಟ್ಯಂತರ ಜನರಿಗೆ ಹಬ್ಬದ ಸೀಸನ್ನಲ್ಲಿ ಅನುಕೂಲವಾಗುತ್ತದೆ. | ನರೇಂದ್ರ ಮೋದಿ ಪ್ರಧಾನ ಮಂತ್ರಿ
ಬಡವರಿಗೆ ಅನ್ನಭಾಗ್ಯ: ಈ ವರ್ಷಾಂತ್ಯ ನಡೆಯಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಲೆಕ್ಕಾಚಾರದಿಂದ ಉಚಿತ ಪಡಿತರ ವಿಸ್ತರಿಸಲಾಗಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ನವರಾತ್ರಿ, ದಸರಾ, ಈದ್-ಮಿಲಾದ್, ದೀಪಾವಳಿ, ಛತ್ ಪೂಜಾ, ಗುರುನಾನಕ್ ಜಯಂತಿ, ಕ್ರಿಸ್ವುಸ್ ಮೊದಲಾದ ಹಬ್ಬಗಳು ಇರುವುದರಿಂದ ಬಡವರು ಹಾಗೂ ಇತರ ಸಮುದಾಯಗಳಿಗೆ ಆಹಾರ ಲಭ್ಯತೆಯನ್ನು ಖಾತರಿಪಡಿಸುವ ಉದ್ದೇಶದಿಂದ ಅನ್ನ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಠಾಕೂರ್ ವಿವರಿಸಿದ್ದಾರೆ.