

ನವದೆಹಲಿ: ಅಕ್ಟೋಬರ್ನಿಂದ ವಿಶೇಷ ರಸಗೊಬ್ಬರ ರಫ್ತಿನ ಮೇಲೆ ಚೀನಾ ಮತ್ತೆ ನಿರ್ಬಂಧ ವಿಧಿಸಲು ಸಿದ್ಧವಾಗುತ್ತಿರುವುದರಿಂದ ಭಾರತದ ರಸಗೊಬ್ಬರ ಉದ್ಯಮಕ್ಕೆ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಲಿದ್ದು, ಇದರಿಂದ ಬೆಲೆ ಏರಿಕೆ ಆಗಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಸಗೊಬ್ಬರ ರಫ್ತಿನ ತಾತ್ಕಾಲಿಕ ಪುನರಾರಂಭದಿಂದ ಸ್ವಲ್ಪ ಕಾಲ ಉದ್ಯಮ ನಿರಾಳವಾಗಿತ್ತು. ಆದರೆ ಚೀನಾ ಸೆಪ್ಟೆಂಬರ್ನಿಂದ ತಪಾಸಣೆ ಹೆಚ್ಚಿಸಲಿದ್ದು, ಅಕ್ಟೋಬರ್ನಿಂದ ರಫ್ತು ಅವಕಾಶಕ್ಕೆ ಇತಿಶ್ರೀ ಹಾಡಲಿದೆ. ಭಾರತಕ್ಕೆ ಮಾತ್ರವಲ್ಲ, ಇದು ಇಡೀ ಜಗತ್ತಿಗೆ ಅನ್ವಯವಾಗಲಿದೆ ಎಂದು ಸೊಲ್ಯೂಬಲ್ ಫರ್ಟಿಲೈಸರ್ ಇಂಡಸ್ಟ್ರಿ ಅಸೋಸಿಯೇಶನ್ನ ಅಧ್ಯಕ್ಷ ರಾಜೀವ್ ಚಕ್ರವರ್ತಿ ತಿಳಿಸಿದ್ದಾರೆ.