

ಕೃಷಿ ಯಂತ್ರೋಪಕರಣ ಬಾಡಿಗೆ, ಕಾರ್ವಿುಕರ ಕೂಲಿ ದರ ಹೆಚ್ಚಳ, ಕಬ್ಬಿನ ಬಿಲ್ ಬಾಕಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಕಬ್ಬು ಬೆಳೆಗಾರರಿಗೆ ಇದೀಗ ರಸಗೊಬ್ಬರಗಳ ದರ ಏರಿಕೆಯೂ ಕಾಡತೊಡಗಿದೆ. ರಸಗೊಬ್ಬರಗಳ ಬೆಲೆಯಲ್ಲಿ ಯಾವುದೇ ಏರಿಕೆ ಇಲ್ಲ, ಹಳೆಯ ಬೆಲೆಯಲ್ಲೇ ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ನಿರ್ದೇಶನ ನೀಡಿದೆ. ಆದರೆ ವ್ಯಾಪಾರಿಗಳು ‘ನೋ ಸ್ಟಾಕ್’ ಫಲಕ ಅಳವಡಿಸಿದ್ದಾರೆ. ಹಳೆಯ ದರದ ಗೊಬ್ಬರ ಖಾಲಿಯಾಗಿದೆ. ಹೊಸ ಗೊಬ್ಬರದ ನೆಪವೊಡ್ಡಿ ಹೆಚ್ಚಿದ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಬೆಲೆ ಏರಿಕೆ: ಡಿಎಪಿ ರಸಗೊಬ್ಬರದ ಕಂಪನಿಗಳು ಮಾರ್ಚ್ನಲ್ಲಿ ಬೆಲೆ ಏರಿಕೆ ಮಾಡಿದ್ದವು. ಸಿಎಫ್ಸಿಎಲ್ ಕಂಪನಿಯು 50 ಕೆ.ಜಿ. ಡಿಎಪಿ ಗೊಬ್ಬರದ ಚೀಲದ ಬೆಲೆಯನ್ನು 1,200 ರೂ.ನಿಂದ 1,600 ರೂ.ಗೆ ಏರಿಸಿದೆ. ಐಐಪಿಎಲ್ ಡಿಎಪಿ ಬೆಲೆ 1,240 ರೂ.ರಿಂದ 1,495ರೂ., ಇಫ್ಕೊ ಕಂಪನಿಯ 50 ಕೆ.ಜಿ. ಡಿಎಪಿ ರಸಗೊಬ್ಬರದ ಬೆಲೆ 1,200 ರೂ.ರಿಂದ 1,700 ರೂ., ಜುವಾರಿ ಅಗ್ರೋ, ಫಾಸ್ಪೇಟ್ ಕಂಪನಿಗಳು ಡಿಎಪಿ ರಸಗೊಬ್ಬರದ ಬೆಲೆಯನ್ನು 1,200 ರೂ.ರಿಂದ 1,700ಕ್ಕೆ ಏರಿಕೆ ಮಾಡಿದ್ದವು. ಹೊಸ ದರದ ರಸಗೊಬ್ಬರ ಗೋದಾಮುಗಳಲ್ಲಿ ಲಭ್ಯವಿದೆ. ಆದರೆ, ಸರ್ಕಾರ ಹಳೆಯ ದರದಲ್ಲಿ ಮಾರಾಟ ಮಾಡಲು ಸೂಚನೆ ನೀಡಿದ್ದರಿಂದ ಮಾರಾಟಗಾರರು ಸ್ಟಾಕ್ ಇಲ್ಲ ಎಂದು ಹೇಳುತ್ತಿದ್ದಾರೆ.
ಕ್ರಮಕ್ಕೆ ರೈತರ ಆಗ್ರಹ
ಬೆಳಗಾವಿ ಜಿಲ್ಲೆಯಲ್ಲಿ ಪಿಕೆಪಿಎಸ್, ಖಾಸಗಿ ಸೇರಿ ಒಟ್ಟು 1,142 ಅಂಗಡಿಗಳು ರಸಗೊಬ್ಬರ ಮಾರಾಟ ಮಾಡುತ್ತಿವೆ. ಅವುಗಳಲ್ಲಿ ಹಳೆಯ ದರದ ರಸಗೊಬ್ಬರ 5,190 ಮೆಟ್ರಿಕ್ ಟನ್, ಹೊಸ ದರದ ರಸಗೊಬ್ಬರ 7,798 ಮೆಟ್ರಿಕ್ ಟನ್ ಲಭ್ಯವಿದೆ. ಆದರೂ ವ್ಯಾಪಾರಿಗಳು ಹಳೆಯ ದರದ ಗೊಬ್ಬರಗಳನ್ನೂ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಗೋದಾಮುಗಳಲ್ಲಿ ಹಳೆಯ ದರದ ರಸಗೊಬ್ಬರ ಲಭ್ಯವಿದ್ದರೂ ಇಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ತಿಳಿದಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು ಎಂದು ರೈತ ಸಂಘದ ಮುಖಂಡರಾದ ಚೂನಪ್ಪ ಪೂಜೇರಿ, ರಾಘವೇಂದ್ರ ನಾಯಕ್ ಆಗ್ರಹಿಸಿದ್ದಾರೆ.
ಕೋಟ್
ಜಿಲ್ಲೆಯಲ್ಲಿ ಎಲ್ಲ ತರಹದ ರಸಗೊಬ್ಬರ ಲಭ್ಯವಿದ್ದು, ರೈತರಿಗೆ ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗುತ್ತಿದೆ. ಪಿಕೆಪಿಎಸ್, ಖಾಸಗಿ ಮಾರಾಟಗಾರರು ಹಳೆಯ ದರದಲ್ಲೇ ರಸಗೊಬ್ಬರ ಮಾರಾಟ ಮಾಡಬೇಕು. ಹೆಚ್ಚಿನ ದರ ಕೇಳಿದರೆ ರೈತರು ನೇರವಾಗಿ ಕೃಷಿ
ಇಲಾಖೆಗೆ ದೂರು ಸಲ್ಲಿಸಬಹುದು.
| ಶಿವನಗೌಡ ಎಸ್. ಪಾಟೀಲ
ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ, ಬೆಳಗಾವಿ