

ನವದೆಹಲಿ: ಕರೊನಾ ಸೋಂಕು ಮಣಿಸುವಲ್ಲಿ ಪುರುಷರಿಗಿಂತ ಮಹಿಳೆಯರೇ ಬಲಿಷ್ಠರು! ವಿವಿಧ ದೇಶಗಳಿಂದ ಲಭ್ಯವಾದ ಅಂಕಿ ಅಂಶಗಳಿಂದಲೇ ಇದು ದೃಢಪಟ್ಟಿದೆ. ವಿಶ್ವಾದ್ಯಂತ ಕರೊನಾಗೆ ಮಹಿಳೆಯರಿಗಿಂತ ಪುರುಷರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆಂಬ ಅಂಶ ಬಯಲಿಗೆ ಬಂದಿದೆ. ಧೂಮಪಾನ, ಮದ್ಯಪಾನದಂಥ ಚಟಗಳು ರೋಗಿ ಮೇಲೆ ಪರಿಣಾಮ ಬೀರುತ್ತದೆ. ರೋಗಿಯಲ್ಲಿ ಈಗಾಗಲೇ ಇರುವ ಇತರ ವ್ಯಾಧಿಗಳು ಕೂಡ ಕರೊನಾ ವೈರಸ್ ಸಾವಿನ ಪ್ರಮಾಣ ನಿರ್ಧರಿಸುತ್ತದೆ. ಕೆಲವು ಆಯ್ದ ದೇಶಗಳಿಂದ ಸಂಗ್ರಹಿಸಿರುವ ಅಂಕಿಸಂಖ್ಯೆ ಪ್ರಕಾರ ಕೊರೊನಾ ರೋಗಿಗಳ ಪೈಕಿ ಮೃತರಲ್ಲಿ ಬಹುತೇಕ ಪುರುಷರೇ ಎನ್ನುವುದು ತಿಳಿದು ಬಂದಿದೆ. ಕೆಲವು ದೇಶಗಳಲ್ಲಿ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೋಂಕಿತರಿದ್ದರೂ, ಮೃತರಲ್ಲಿ ಹೆಚ್ಚಿನವರು ಪುರುಷರು ಎಂಬ ಆಸಕ್ತಿದಾಯಕ ಅಂಶವೂ ಬಹಿರಂಗಗೊಂಡಿದೆ. ಭಾರತದಲ್ಲಿ ಸೋಂಕಿತರು ಮತ್ತು ಮೃತರಲ್ಲಿ ಪುರುಷರೇ ಹೆಚ್ಚು ಎಂಬುದು ಆರೋಗ್ಯ ಇಲಾಖೆಯ ಮಾಹಿತಿ.
ಅನಾರೋಗ್ಯಕರ ಹವ್ಯಾಸ
ಅನಾರೋಗ್ಯ ತರುವ ಕೆಟ್ಟ ಹವ್ಯಾಸಗಳು ಸಾಮಾನ್ಯವಾಗಿ ಗಂಡಸರಲ್ಲೇ ಹೆಚ್ಚಿರುತ್ತದೆ ಎಂಬ ಅಂಶ ಗಮನಿಸಲಾಗಿದೆ. ಹೀಗಾಗಿ ಪುರುಷರಲ್ಲೇ ಕೆಲವು ರೋಗಗಳ ರಿಸ್ಕ್ ಜಾಸ್ತಿಯಿರುತ್ತದೆ. ಮದ್ಯಪಾನ, ಧೂಮಪಾನ ಮೊದಲಾದವು ಪುರುಷರನ್ನು ಹೆಚ್ಚಾಗಿ ಅಪಾಯಕ್ಕೆ ತಳ್ಳುವ ಚಟಗಳಾಗಿವೆ. ಕರೊನಾ ಸೋಂಕು, ರೋಗಿಗಳಲ್ಲಿ ಉಸಿರಾಟದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಸಿಗರೇಟ್ ಸೇದುವವರಲ್ಲಿ ಈಗಾಗಲೇ ಶ್ವಾಸಕೋಶದ ರೋಗ ಇದ್ದಿರಬಹುದು ಅಥವಾ ಶ್ವಾಸಕೋಶದ ಕೆಲಸದ ಸಾಮರ್ಥ್ಯ ಕುಗ್ಗಿರಬಹುದು. ಇದು ವ್ಯಾಧಿ ಗಂಭೀರಗೊಳ್ಳಲು ಕಾರಣವಾಗುತ್ತದೆ ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲೂ್ಯ.ಎಚ್.ಒ.) ಅಭಿಪ್ರಾಯ.
ಸಂಶೋಧಕರು ಹೇಳುವುದೇನು?
ಈಗ ಬಳಸಲಾಗುತ್ತಿರುವ ಮದ್ದು ಮುಖ್ಯವಾಗಿ ಪುರುಷ ಜೀವಕೋಶಗಳು, ಅಂಗಾಂಶ, ಪುರುಷ ಅಂಗಾಂಗಗಳು, ಪುರುಷ ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆ - ಪ್ರಯೋಗಗಳ ಆಧಾರದಲ್ಲಿ ರೂಪಿಸಲಾಗಿದೆ ಎನ್ನುವುದರತ್ತ ಸಂಶೋಧಕರು ಗಮನ ಸೆಳೆದಿದ್ದಾರೆ. ಮಹಿಳೆಯರಿಗೆ ಕೂಡ ಪುರುಷರಂತೆಯೇ ಚಿಕಿತ್ಸೆ ನೀಡಬೇಕೆಂಬ ಧೋರಣೆ ಚಾಲ್ತಿಯಲ್ಲಿದೆ.
ಚೀನಾದಲ್ಲಿ ಹೆಚ್ಚು
ಚೀನಾದಲ್ಲಿ ಕರೊನಾಕ್ಕೆ ಬಲಿಯಾದವರಲ್ಲಿ ಪುರುಷರೇ ಹೆಚ್ಚು. ಚೀನಾದಲ್ಲಿ ಶೇ. 52 ಪುರುಷರು ಧೂಮಪಾನಿಗಳು. ಕೇವಲ ಶೇ. 3 ಮಹಿಳೆಯರು ಧೂಮಪಾನ ಮಾಡುತ್ತಾರೆ. ಕರೊನಾ ಸಾವಿನಲ್ಲಿ ಪುರುಷ-ಮಹಿಳಾ ಅನುಪಾತ 2:1 ಇರುವ ದಕ್ಷಿಣ ಕೊರಿಯಾದಲ್ಲಿ ಕೂಡ ಧೂಮಪಾನಿ ಪುರುಷರ ಪ್ರಮಾಣ ಜಾಸ್ತಿ. ಮಹಿಳೆಯರ ಪ್ರಮಾಣ ತೀರಾ ಕಮ್ಮಿ. 2003ರಲ್ಲಿ ಸಾರ್ಸ್ಗೆ ಕಾರಣವಾದ ವೈರಸ್ಗೂ ಈಗಿನ ಕರೊನಾ ವೈರಸ್ಗೂ ನಿಕಟ ನಂಟಿದೆ. ಸಾರ್ಸ್ಗೆ ಬಲಿಯಾದವರಲ್ಲಿ ಕೂಡ ಪುರುಷರೇ ಹೆಚ್ಚು.
ಯಾಕೆ ಹೀಗೆ? ಬಹುತೇಕ ಎಲ್ಲ ಸಾಂಕ್ರಾಮಿಕ ರೋಗಗಳನ್ನು ಎದುರಿಸುವ ಶಕ್ತಿ ಮಹಿಳೆಯರಲ್ಲೇ ಅಧಿಕ ಎನ್ನುವುದು ತಜ್ಞರ ಅಭಿಮತ. ಹೆಪಟೈಟಸ್ ಬಿ ಮತ್ತು ಸಿಗೆ ಕಾರಣವಾಗುವ ವೈರಸ್ಗೆ ಮಹಿಳೆಯರು ಹೆಚ್ಚಾಗಿ ತುತ್ತಾಗುವುದಿಲ್ಲ. ಜಗತ್ತಿನಲ್ಲಿ ಪ್ರಸ್ತುತ ನೂರು ಅಥವಾ ಹೆಚ್ಚು ವರ್ಷ ಜೀವಿಸಿರುವ ಜನರಲ್ಲಿ ಮಹಿಳೆಯರೇ ಅಧಿಕವಾಗಿದ್ದಾರೆ.
ಜೀನ್ಗಳೇ ಕಾರಣ
ಮಹಿಳೆಯರಲ್ಲಿ ರೋಗ ಪ್ರತಿರೋಧ ಶಕ್ತಿ ಅಧಿಕವಾಗಿರಲು ಆನುವಂಶಿಕ ಧಾತುವೇ (ಜೀನ್) ಕಾರಣ ಎಂದು ಸಂಶೋಧನೆಗಳು ಹೇಳಿವೆ. ಆದರೆ ಈ ವಿಚಾರದಲ್ಲಿ ಇನ್ನಷ್ಟು ಸಂಶೋಧನೆಗಳು ಮುಂದುವರಿದಿವೆ.