ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚೀತಾ ಸಾವು: ಈವರೆಗೆ 9 ಚೀತಾಗಳ ಮರಣ

Cheetha
Published on

ಭೋಪಾಲ್​: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳ ಸಾವಿನ ಸರಣಿ ಮುಂದುವರಿದಿದೆ. ಇದೀಗ ಹೆಣ್ಣು ಚೀತಾವೊಂದರ ಮೃತದೇಹ ಪತ್ತೆಯಾಗಿದೆ. ಕಳೆದ ಮಾರ್ಚ್​ ತಿಂಗಳಿಂದ ಇದು 9ನೇ ಚೀತಾ ಸಾವಾಗಿದೆ.

ಸದ್ಯ ಮೃತಪಟ್ಟಿರುವ ಚೀತಾ ಹೆಸರು ಧತ್ರಿ. ಬುಧವಾರ ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೆ ಕಾರಣ ಏನಿರಬಹುದೆಂದು ತಿಳಿದುಕೊಳ್ಳಲು ಅಧಿಕಾರಿಗಳು ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಿದ್ದಾರೆ.

ಪ್ರಾಜೆಕ್ಟ್ ಚೀತಾ ಎಂದು ಕರೆಯಲ್ಪಡುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ 20 ಚಿರತೆಗಳನ್ನು ಕರೆತಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿದೆ. ಚೀತಾಗಳನ್ನು ಭಾರತಕ್ಕೆ ಮರು ಪರಿಚಯ ಮಾಡಿದ ದಿನದಿಂದ ಒಟ್ಟು ಒಂಬತ್ತು ಚೀತಾಗಳು ದುರಂತವಾಗಿ ಸಾವಿಗೀಡಾಗಿವೆ. ಇವುಗಳಲ್ಲಿ ಆಫ್ರಿಕಾದಿಂದ ತಂದ ಚೀತಾಗಳಿಂದ ಹುಟ್ಟಿದ ಮೂರು ಮರಿಗಳೂ ಸೇರಿವೆ.

ವಿವಿಧ ಕಾರಣಗಳು ಉಲ್ಲೇಖ

ಚೀತಾಗಳ ಸಾವುಗಳಿಗೆ ವಿವಿಧ ಅಂಶಗಳಿಗೆ ಕಾರಣವಾಗಿವೆ. ಕೆಲವು ತಜ್ಞರ ಪ್ರಕಾರ ಅಂತರ್ ಜಾತಿಯ ಚೀತಾಗಳ ಕಾದಾಟಗಳು, ರೋಗಗಳು, ಬಿಡುಗಡೆಯ ಮೊದಲು ಮತ್ತು ನಂತರದ ಅಪಘಾತಗಳು ಮತ್ತು ಬೇಟೆಯಾಡುವ ಸಮಯದಲ್ಲಿ ಉಂಟಾದ ಗಾಯಗಳು ಸಂಭಾವ್ಯ ಕಾರಣಗಳಾಗಿರಬಹುದು ಎಂದು ಸೂಚಿಸುತ್ತಾರೆ. ಇತರ ಪ್ರಾಣಿಗಳ ದಾಳಿಗಳು ಮತ್ತು ಶಾಖದ ಹೊಡೆತವನ್ನು ಸಹ ಸಂಭವನೀಯ ಕಾರಣಗಳಾಗಿ ಉಲ್ಲೇಖಿಸಲಾಗಿದೆ.

ಕೊರಳಪಟ್ಟಿ ಉರುಳು

ಚೀತಾಗಳಲ್ಲಿರುವ ರೇಡಿಯೋ ಕಾಲರ್‌ಗಳ ಬಳಕೆಯ ಬಗ್ಗೆಯೂ ವಿವಾದವಿದೆ. ಪ್ರಾಣಿಗಳನ್ನು ಪತ್ತೆಹಚ್ಚಲು ಮತ್ತು ಮೇಲ್ವಿಚಾರಣೆ ಮಾಡಲು ಬಳಸಲಾಗುವ ಈ ಕೊರಳಪಟ್ಟಿಗಳು ಮಳೆಗಾಲದಲ್ಲಿ ನಿರಂತರ ಆರ್ದ್ರತೆಯಿಂದಾಗಿ ಚರ್ಮದ ಸೋಂಕುಗಳಿಗೆ ಕಾರಣವಾಗಿವೆ ಎಂದು ಕೆಲವು ತಜ್ಞರು ವಾದಿಸಿದ್ದಾರೆ. ಈ ಸೋಂಕುಗಳು ನೊಣಗಳನ್ನು ಆಕರ್ಷಿಸುತ್ತವೆ ಎಂದು ವರದಿಯಾಗಿದೆ.

ಪ್ರಧಾನಿ ಹುಟ್ಟುಹಬ್ಬದಂದು ಕರೆತರಲಾಯಿತು

ಕಳೆದ ವರ್ಷ ಸೆ.17ರಂದು ನಮೀಬಿಯಾ ದೇಶದಿಂದ 8 ಚೀತಾಗಳನ್ನು ಭಾರತಕ್ಕೆ ಕರೆತರಲಾಯಿತು. 8ರಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳು. ನಮೀಬಿಯಾ ರಾಜಧಾನಿ ವಿಂಡ್ಹೋಕ್​ನಿಂದ ವಿಶೇಷವಾಗಿ ಡಿಸೈನ್​ ಮಾಡಲಾದ ಹುಲಿ ಮುಖದ ಬಿ-747 ಜಂಬೋ ಜೆಟ್​ನಿಂದ ಚೀತಾಗಳನ್ನು ಕರೆತರಲಾಯಿತು. ಅವುಗಳನ್ನು ಪ್ರಧಾನಿ ಮೋದಿ ಅವರು ತಮ್ಮ ಜನ್ಮದಿನದಂದೇ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾವನಕ್ಕೆ ಬಿಟ್ಟರು.

ಇಷ್ಟೇ ಅಲ್ಲದೆ, ಕಳೆದ ಫೆಬ್ರವರಿಯಲ್ಲಿ ಆಫ್ರಿಕಾದಿಂದ ಭಾರತಕ್ಕೆ ಮತ್ತೆ 12 ಚೀತಾಗಳನ್ನು ಕರೆತರಲಾಯಿತು. 70 ವರ್ಷಗಳ ಹಿಂದೆಯೇ ಅಳಿದು ಹೋಗಿದ್ದ ಚೀತಾ ಸಂತತಿಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಭಾರತಕ್ಕೆ ಚೀತಾಗಳನ್ನು ಕರೆತರಲಾಗಿದೆ. ಇದಕ್ಕಾಗಿ ಪ್ರಾಜೆಕ್ಟ್​ ಚೀತಾ ಹೆಸರಿನಲ್ಲಿ ಭಾರತವು ನಮೀಬಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಚೀತಾಗಳು ಸಾವಿನ ಸರಣಿ ಮುಂದುವರಿದಿರುವುದು ಕಳವಳಕಾರಿಯಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net