ಅಶ್ಲೀಲ ಚಿತ್ರಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ಕಠಿಣ ಶಿಕ್ಷೆಗೆ ಗುರಿಯಾದ ಯುವತಿ...!

Girl
Published on

ಮಾಸ್ಕೋ: ಅಶ್ಲೀಲತೆ ಹರಡಿದ ಆರೋಪದ ಮೇಲೆ ರಷ್ಯಾದ ಮಹಿಳಾ ಕಾರ್ಯಕರ್ತೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದೇಹದ ಸಕಾರಾತ್ಮಕತೆಯನ್ನು ಉತ್ತೇಜಿಸಲು ಮಹಿಳಾ ದೇಹಕ್ಕೆ ಸಂಬಂಧಿಸಿದ ವ್ಯಂಗ್ಯ ಚಿತ್ರಗಳು ಮತ್ತು ಜನನಾಂಗದ ಚಿತ್ರಗಳನ್ನು ಡ್ರಾಯಿಂಗ್​ ಮಾಡಿ ಹರಿಬಿಟ್ಟಿದ್ದಕ್ಕೆ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಬಂಧಿತರನ್ನು ಯುಲಿಯಾ ಟ್ವೆಟ್ಕೊವಾ ಎಂದು ಗುರುತಿಸಲಾಗಿದೆ. ಕಲಾವಿದೆ ಹಾಗೂ ಕಾರ್ಯಕರ್ತೆಯಾಗಿರುವ ಯುಲಿಯಾ, ರಷ್ಯಾದ ಪಶ್ಚಿಮ ನಗರ ಕೊಮ್ಸೊಮೊಲ್ಸ್ಕ್-ಆನ್-ಅಮುರ್ ನಿವಾಸಿಯಾಗಿದ್ದಾರೆ. ಯೋನಿ ಸ್ವಗತಗಳು ಎಂಬ ಸಾಮಾಜಿಕ ಜಾಲತಾಣ ಗ್ರೂಪ್​ನಲ್ಲಿ ಅಶ್ಲೀಲ ಚಿತ್ರಗಳನ್ನು ಹರಡಿ ಮನಸ್ಸು ಕದಡಿದ ಆರೋಪದ ಮೇಲೆ 2 ವರ್ಷಗಳ ಕಾರಾಗೃಹ ಶಿಕ್ಷೆಗೆ ಯುಲಿಯಾ ಗುರಿಯಾಗಿದ್ದಾರೆ.

ಕಲಾಕೃತಿಗಳನ್ನು ಶೇರ್​ ಮಾಡುವ ಮೂಲಕ ಯೋನಿ ಸೇರಿದಂತೆ ಒಟ್ಟಾರೆ ಸ್ತ್ರೀ ಶರೀರಶಾಸ್ತ್ರದ ಸುತ್ತಲೂ ಇರುವ ಕಳಂಕವನ್ನು ತೆಗೆದುಹಾಕುವುದೇ ಈ ಗ್ರೂಪ್​ನ ಉದ್ದೇಶವಾಗಿದೆ. ಇದರಲ್ಲಿ ಸರಣಿ ಕಾರ್ಟೂನ್​ಗಳನ್ನು ಹರಿಬಿಟ್ಟಿರುವ ಯುಲಿಯಾ, ನಿಜವಾದ ಮಹಿಳೆ ಆಕೆಯ ದೇಹದ ಮೇಲೆ ಕೂದಲುಗಳನ್ನು ಹೊಂದಿರುತ್ತಾಳೆ ಹಾಗೂ ಅದು ಸಾಮನ್ಯಾ ಕೂಡ ಹೌದು. ನಿಜವಾದ ಮಹಿಳೆಯ ದೇಹ ಕೊಬ್ಬಿನಿಂದ ಕೂಡಿರುತ್ತದೆ. ಅದು ಸಾಮಾನ್ಯವೂ ಹೌದು ಮತ್ತು ಅವರು ಪೀರಿಯಡ್ಸ್​ ಸಹ ಹೊಂದುತ್ತಾರೆ. ಅದು ಕೂಡ ಸಾಮಾನ್ಯವೇ ಎಂದು ಕಾರ್ಟೂನ್​ನಲ್ಲಿ ಬರೆದುಕೊಂಡಿದ್ದಾರೆ.

ಯುಲಿಯಾ ಶೇರ್​​ ಮಾಡಿದ ಕಾರ್ಟೂನ್​ಗಳಿಗೆ ಭಾರಿ ಬೆಂಬಲ ವ್ಯಕ್ತವಾಗಿ ಅನೇಕರು "ನನ್ನ ದೇಹ ಅಶ್ಲೀಲತೆಯಲ್ಲ" ಎಂಬ ಅಡಿಬರಹ ಬರೆದು ತಮ್ಮ ದೇಹದ ಫೋಟೋಗಳನ್ನು ತೆಗೆದು ಹರಿಬಿಟ್ಟಿದ್ದಾರೆ. ಈ ಕಾರಣಕ್ಕಾಗಿ ಯುಲಿಯಾ ವಿರುದ್ಧ ಅಶ್ಲೀಲತೆ ಹರಡಿದ ಆರೋಪದ ಮೇಲೆ ಬಂಧಿಸಲಾಗಿದೆ.

ಇನ್ನು ಯುಲಿಯಾ ವಿರುದ್ಧ ಪ್ರಕರಣಗಳನ್ನು ಕೈಬಿಡಬೇಕೆಂದು ಭಾರಿ ಪ್ರತಿಭಟನೆ ಸಹ ವ್ಯಕ್ತವಾಗುತ್ತಿದೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲೇ ಸುಮಾರು 40 ಪ್ರತಿಭಟನೆಗಳು ನಡೆದಿದ್ದು, 250,000 ಸಹಿ ಸಂಗ್ರಹ ಚಳುವಳಿಯು ಸಹ ನಡೆದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net