

Toilet Paper : ಉದ್ಯೋಗಿಯೊಬ್ಬ ತಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಟಾಯ್ಲೆಟ್ ಪೇಪರ್ನಲ್ಲಿ ರಾಜೀನಾಮೆ ಬರೆದುಕೊಟ್ಟಿರುವ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಟಾಯ್ಲೆಟ್ ಪೇಪರ್ನಲ್ಲೇ ರಾಜೀನಾಮೆ ಬರೆದು ಕೊಡಲು ಆ ಉದ್ಯೋಗಿ ಕೊಟ್ಟ ಕಾರಣ ಕೇಳಿದರೆ ನಿಮ್ಮ ಹುಬ್ಬೇರುವುದು ಖಚಿತ.
ಸಿಂಗಾಪುರ್ ಮೂಲದ ಕಂಪನಿಯ ನಿರ್ದೇಶಕಿ ಏಂಜೆಲಾ ಯೋಹ್ ಎಂಬುವರು ಉದ್ಯೋಗಿಯ ರಾಜೀನಾಮೆ ಪತ್ರವನ್ನು ತಮ್ಮ ಲಿಂಕ್ಡಿನ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಉದ್ಯೋಗಿ ಏನೆಂದು ಬರೆದಿದ್ದಾರೆ ಅಂದ್ರೆ, ನಾನು ರಾಜೀನಾಮೆ ನೀಡಲು ಈ ರೀತಿಯ ಪೇಪರ್ ಅನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೇನೆ ಅಂದ್ರೆ ಈ ಕಂಪನಿ ನನ್ನನ್ನು ಹೇಗೆ ನಡೆಸಿಕೊಂಡಿತು ಎಂಬುದನ್ನು ಸಾಂಕೇತಿಕವಾಗಿ ತಿಳಿಸುವುದಕ್ಕಾಗಿ ಅಂತ ಬರೆಯಲಾಗಿದೆ. ಆ ಉದ್ಯೋಗಿಯ ಮಾತಿನ ಒಳಾರ್ಥ ಏನೆಂದರೆ, ನನ್ನನ್ನು ಈ ಕಂಪನಿ ಟಾಯ್ಲೆಟ್ ಪೇಪರ್ನಂತೆಯೇ ನಡೆಸಿಕೊಂಡಿತು. ಬೇಕಾದಾಗ ಬಳಸಿಕೊಂಡರು ಮತ್ತು ಬೇಡವಾದಾಗ ಒಂದು ಸೆಕೆಂಡ್ ಕೂಡ ಯೋಚನೆ ಮಾಡದೇ ಬೀಸಾಡಿದರು ಎಂಬುದು.
ಈ ಬಗ್ಗೆ ಲಿಂಕ್ಡಿನ್ನಲ್ಲಿ ಬರೆದುಕೊಂಡಿರುವ ಏಂಜೆಲಾ ಯೋಹ್, ನಿಮ್ಮ ಉದ್ಯೋಗಿಗಳು ನಿಮ್ಮ ಬಗ್ಗೆ ನಿಜವಾಗಿಯೂ ಮೆಚ್ಚುಗೆ ವ್ಯಕ್ತಪಡಿಸುವಂತಹ ಭಾವನೆಗಳನ್ನು ಅವರಲ್ಲಿ ಮೂಡಿಸಿ. ಇದರಿಂದ ಅವರು ಕಂಪನಿಯನ್ನು ಬಿಟ್ಟು ಹೋಗುವಾಗಲೂ ಅಸಮಾಧಾನ ಹೊರಹಾಕದೇ ಕೃತಜ್ಞತೆಯಿಂದ ಹೊರನಡೆಯುತ್ತಾರೆ. ಇಲ್ಲಿ ಉದ್ಯೋಗಿಯ ನಿಷ್ಠೆಯ ಕೊರತೆ ಅಂತ ಹೇಳಲಾಗುವುದಿಲ್ಲ ಅದು ಕಂಪನಿಯ ಸಂಸ್ಕೃತಿಯನ್ನು ಹೇಳುತ್ತದೆ ಎಂದಿದ್ದಾರೆ.
ಉದ್ಯೋಗಿಗಳಿಗೆ ನೀಡುವ ಮೆಚ್ಚುಗೆ, ಕೇವಲ ಅವರನ್ನು ಉಳಿಸಿಕೊಳ್ಳುವ ಸಾಧನವಲ್ಲ. ಒಬ್ಬ ಉದ್ಯೋಗಿಯು ಎಷ್ಟು ಮೌಲ್ಯಯುತನಾಗಿದ್ದಾನೆ ಎಂಬುದರ ಪ್ರತಿಬಿಂಬವಾಗಿದೆ. ಜನರು ತಮ್ಮನ್ನು ಕಡಿಮೆ ಮೌಲ್ಯಯುತವೆಂದು ಭಾವಿಸಿದರೆ, ನಿಜವಾಗಿಯೂ ಅದು ಯೋಚಿಸುವ ಸಮಯ. ಮೆಚ್ಚುಗೆಯಲ್ಲಿನ ಸಣ್ಣ ಬದಲಾವಣೆಗಳು ಕೂಡ ದೊಡ್ಡ ಪರಿಣಾಮ ಬೀರುತ್ತವೆ. ಅದನ್ನು ಇಂದಿನಿಂದಲೇ ಪ್ರಾರಂಭಿಸಿ ಎಂದು ಏಂಜೆಲಾ ಹೇಳಿದ್ದಾರೆ.
ಅಂದಹಾಗೆ, ರಾಜೀನಾಮೆ ಪತ್ರದ ಫೋಟೋ ಉದ್ಯೋಗಿಯದ್ದೇ ಅಥವಾ ಕೇವಲ ಪ್ರಾತಿನಿಧಿಕ ಚಿತ್ರವೇ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ, ಲಿಂಕ್ಡ್ಇನ್ ಬಳಕೆದಾರರು ಮಾತ್ರ ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ. ಬಳಕೆದಾರರೊಬ್ಬರು ಈ ರಾಜೀನಾಮೆ ಶೈಲಿಯನ್ನು "ವಿಶಿಷ್ಟ" ಎಂದು ಕರೆದಿದ್ದಾರೆ. ಅಲ್ಲದೆ, ನಾನು ಅದನ್ನು ಗೌರವಿಸುತ್ತೇನೆ. ನಾನು ಬಹಳ ಹಿಂದೆ ಇದೇ ರೀತಿ ಮಾಡಿದ್ದೆ ಎಂದಿದ್ದಾರೆ.
ಕೆಲವೊಮ್ಮೆ, ಉದ್ಯೋಗಿಗಳು ಕಂಪನಿಯಿಂದಾಗಿ ಅಲ್ಲ, ಅಲ್ಲಿನ ವ್ಯವಸ್ಥಾಪಕರಿಂದಾಗಿ ಹೊರಹೋಗಬೇಕಾಗುತ್ತದೆ. ಈ ರೀತಿ ಎಲ್ಲೆಡೆ ಸಂಭವಿಸುತ್ತದೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. ಟಾಯ್ಲೆಟ್ ಪೇಪರ್ ರಾಜೀನಾಮೆ ನಾಟಕೀಯವಾಗಿರಬಹುದು, ಆದರೆ ಅದು ತನ್ನ ಗುರಿಯನ್ನು ಮುಟ್ಟಿದೆ. ಜನರನ್ನು ಉತ್ತಮವಾಗಿ ನಡೆಸಿಕೊಳ್ಳಿ, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. (ಏಜೆನ್ಸೀಸ್)